Advertisement

ಪುತ್ತೂರು ಎಪಿಎಂಸಿ ಮಾರುಕಟ್ಟೆ:ರೈತರು ಬರಲ್ಲ,ವ್ಯಾಪಾರಿಗಳಿಗೆ ಬೇಕಿಲ್ಲ

04:47 PM Nov 12, 2017 | |

ಪುತ್ತೂರು: ಎಪಿಎಂಸಿ ಲಾಭದಲ್ಲಿದೆ, ರೈತರ ಉತ್ಪನ್ನಕ್ಕೆ ನೈಜ ಧಾರಣೆ ನೀಡುವ ನಿಟ್ಟಿನಲ್ಲಿ ಇ-ಟ್ರೇಡಿಂಗ್‌ ಆರಂಭಿಸಲಾಗಿದೆ ಎಂದೆಲ್ಲ ಹೇಳಲಾಗುತ್ತಿದೆ. ಆದರೆ ವಾಸ್ತವ ದಲ್ಲಿ ತಾಲೂಕಿನ ಒಟ್ಟು ವ್ಯಾಪಾರಿಗಳ ಪೈಕಿ ಶೇ. 20ರಷ್ಟು ಮಂದಿ ಮಾತ್ರ ಪುತ್ತೂರು ಎಪಿಎಂಸಿಯನ್ನು ಬಳಸಿಕೊಳ್ಳುತ್ತಿದ್ದಾರೆ.

Advertisement

ಕೃಷಿ ಉತ್ಪನ್ನದ ದೃಷ್ಟಿಯಿಂದ ಪುತ್ತೂರು ಹಾಗೂ ಸುಳ್ಯ ಜಿಲ್ಲೆಯಲ್ಲೇ ದೊಡ್ಡ ಹೆಸರು. ವಾಣಿಜ್ಯ ಬೆಳೆ ಸಹಿತ ಹೆಚ್ಚಿನ ಎಲ್ಲ ಬೆಳೆಗಳು ಪುತ್ತೂರು ತಾಲೂಕಿನಲ್ಲಿ ಬೆಳೆಯಲಾಗುತ್ತಿದೆ. ಮಾತ್ರ ವಲ್ಲ, ಮಂಗಳೂರಿಗೆ ಸರಬ ರಾಜಾಗುವ ಉತ್ಪನ್ನ ಗಳಲ್ಲಿ ಪುತ್ತೂರು ಹಾಗೂ ಸುಳ್ಯ ತಾಲೂಕುಗಳ ಪಾಲು ದೊಡ್ಡದು. ಹಾಗಿದ್ದೂ ಇಲ್ಲಿ ಎಪಿಎಂಸಿ ಪೂರ್ಣ ಪ್ರಮಾಣದಲ್ಲಿ ರೈತರನ್ನು, ವ್ಯಾಪಾರಿಗಳನ್ನು ತಲುಪಿಲ್ಲ. ಅಂದರೆ ಪುತ್ತೂರು ತಾಲೂಕಿನ 350 ನೋಂದಾಯಿತ ವರ್ತಕರ ಪೈಕಿ ಸುಮಾರು 50 ಮಂದಿ ಮಾತ್ರ ಎಪಿಎಂಸಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಉಳಿದಂತೆ ಶೇ. 80ರಷ್ಟು ಮಂದಿ ಮುಕ್ತ ಮಾರುಕಟ್ಟೆಯನ್ನೇ ಅವಲಂಭಿಸಿದ್ದಾರೆ. 

ರೈತರೇಕೆ ಬರುತ್ತಿಲ್ಲ?
ರೈತರ ಕಾಲಬುಡದಲ್ಲೇ ವರ್ತಕರ ಅಂಗಡಿ ಇರು ವಾಗ ಎಪಿಎಂಸಿಯ ಅಗತ್ಯವೇನು? ಎಂಬ ಪ್ರಶ್ನೆ ಅನ್ನದಾತರಲ್ಲಿದೆ.
ಏಕೆಂದರೆ, ಎಪಿಎಂಸಿ ಪ್ರಾಂಗಣ ಪುತ್ತೂರು ಪೇಟೆಯಿಂದ 1.5 ಕಿಲೋ ಮೀಟರ್‌ ದೂರದಲ್ಲಿದೆ. ಪೇಟೆಯಿಂದ ಕಾಲ್ನಡಿಗೆಯಲ್ಲಿ ಬರಲು ಅಸಾಧ್ಯ. ಇನ್ನು ವಾಹನವನ್ನು ಬಾಡಿಗೆಗೆ ಗೊತ್ತುಪಡಿಸಿ ಹೋಗೋಣ ಎಂದರೆ, ರೈಲ್ವೇ ಹಳಿ ಅಡ್ಡ. ಸುಮಾರು ಅರ್ಧ ಗಂಟೆಯಾದರೂ ಕಾಯಲೇಬೇಕಾದ ಅನಿವಾರ್ಯತೆ. ಒಮ್ಮೆ ಇಲ್ಲಿ ಸಿಕ್ಕಿ ಹಾಕಿಕೊಂಡರೆ, ಇನ್ನೊಮ್ಮೆ ಬರಲಾರನು. ಇಷ್ಟಾಗಿ ಎಪಿಎಂಸಿ ಪ್ರವೇಶಿಸಿದರೆ ವರ್ತಕರೇ ಇಲ್ಲ, ಮತ್ತೆ ಮೂಲಸೌಲಭ್ಯ ಕೊರತೆ.

ಎಪಿಎಂಸಿ ಸ್ಥಾಪನೆಯಾಗಿ 20 ವರ್ಷಸರಿದರೂ, ಇನ್ನೂ ರೈತರನ್ನು, ವ್ಯಾಪಾರಿಗಳನ್ನು ತಲುಪಿಲ್ಲ ಎನ್ನುವುದು ಸಮಿತಿ ಹಾಗೂ ಸರಕಾರದ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಇ-ಟ್ರೇಡಿಂಗ್‌ ವ್ಯವಸ್ಥೆಯನ್ನು ಜಾರಿಗೆ ತರಲಾಯಿತು. ಇದಾದರೂ ಜನರನ್ನು ತಲುಪಿತೇ ಎಂದು ಕೇಳಿದರೆ, ಉತ್ತರ – ಇಲ್ಲ. ಏಕೆಂದರೆ ತಾಲೂಕಿನ ಹೆಚ್ಚಿನ ರೈತರ ಬಳಿ ಆಧುನಿಕ ತಂತ್ರ ಜ್ಞಾನಗಳನ್ನು ಬಳಸಿಕೊಳ್ಳುವ ಚಾಕಚಕ್ಯತೆ ಇಲ್ಲ. ಅಂದಹಾಗೆ, ಇ-ಟ್ರೇಡಿಂಗ್‌ಗಾಗಿ ಪುತ್ತೂರು ಎಪಿಎಂಸಿ 90 ಲಕ್ಷ ರೂ. ವ್ಯಯಿಸಿದೆ. ಪ್ರತಿ ತಿಂಗಳು ರೆಮ್ಸ್‌ಗೆ 5-10 ಲಕ್ಷ ರೂ. ಪಾವತಿಸುತ್ತಿದೆ. ಆದರೂ ವ್ಯವಸ್ಥೆ ಸಮರ್ಪಕವಾಗಿಲ್ಲ ಎಂದು ಎಪಿಎಂಸಿ ಸಭೆಗಳಲ್ಲಿ ಪ್ರಸ್ತಾಪ ಆಗುತ್ತಿದೆ.

ಹಾಗಿದ್ದೂ ಲಾಭ ಹೇಗೆ?
ಎಪಿಎಂಸಿ ಪ್ರಾಂಗಣದಲ್ಲಿ ಕೇವಲ 50 ವ್ಯಾಪಾರಿಗಳಿದ್ದಾರೆ. ಪುತ್ತೂರು ಎಪಿಎಂಸಿ ತಿಂಗಳಿಗೆ 50-60 ಲಕ್ಷ ರೂ. ಸಂಗ್ರಹ ಮಾಡುತ್ತಿದೆ. ಇದು ಹೇಗೆ? ಪುತ್ತೂರು ತಾಲೂಕಿನ ಯಾವುದೇ ಮೂಲೆಯಲ್ಲಿ ನಡೆಸುವ ವ್ಯಾಪಾರದ ಸೆಸ್‌ ಎಪಿಎಂಸಿಗೇ ಸಂದಾಯ ಆಗುತ್ತದೆ. ಇದಲ್ಲದೆ, ಒಂದಷ್ಟು ಬಾಡಿಗೆ ಹಣವೂ ಪಾವತಿಯಾಗುತ್ತಿದೆ. ಇಷ್ಟೆಲ್ಲ ಸೇರಿ ತಿಂಗಳಿಗೆ ಸುಮಾರು 50-60 ಲಕ್ಷ ರೂ. ಸಂಗ್ರಹ ಮಾಡುತ್ತಿದೆ. ಜಿಎಸ್‌ಟಿ ಸರಿಯಾಗಿ ಜಾರಿಯಾದ ಬಳಿಕ ವಾರ್ಷಿಕ 12 ಕೋಟಿ ರೂ. ಸಂಗ್ರಹಿಸುವ ನಿರೀಕ್ಷೆ ಇಟ್ಟುಕೊಂಡಿದೆ. ಆದರೂ ಎಪಿಎಂಸಿ ಪ್ರಾಂಗಣವನ್ನು ಸರಿಯಾಗಿ ಬಳಕೆ ಮಾಡಿಕೊಳ್ಳುತ್ತಿಲ್ಲ ಎನ್ನುವುದು ವಿಪರ್ಯಾಸ.

Advertisement

ಸಿಬಂದಿ ಕೊರತೆ
ಪುತ್ತೂರು ಎಪಿಎಂಸಿ ಪ್ರಾಂಗಣದಲ್ಲಿ 50 ಅಂದರೆ ಶೇ. 20ರಷ್ಟು ವರ್ತಕರಿದ್ದಾರೆ. ಉಳಿದೆಲ್ಲ ವರ್ತಕರು ಹೊರಗೇ ವ್ಯಾಪಾರ ಮಾಡುತ್ತಿದ್ದು, ಇದಕ್ಕೆ ಅವಕಾಶವಿಲ್ಲ. ಆದರೆ ವ್ಯವಸ್ಥೆ ಸರಿಪಡಿಸದೇ ಏಕಾಏಕೀ ವ್ಯಾಪಾರಿಗಳ ಮೇಲೆ ಕಾನೂನು ಹೇರುವಂತೆಯೂ ಇಲ್ಲ. ಕಾನೂನು ಸರಿಯಾಗಿ ಜಾರಿ ಮಾಡಲು ಸಿಬಂದಿ ಕೊರತೆಯೂ ಇದೆ. ಜಿಎಸ್‌ಟಿ ಜಾರಿಯಾದ ಮೇಲೆ ಪುತ್ತೂರು ಎಪಿಎಂಸಿಗೆ ವಾರ್ಷಿಕ 12 ಕೋಟಿ ರೂ. ಸಂಗ್ರಹವಾಗುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ರೈತರನ್ನು ಎಪಿಎಂಸಿಗೆ ಹೆಚ್ಚು ಆಕರ್ಷಿಸುವ ನಿಟ್ಟಿನಲ್ಲಿ ಬೃಹತ್‌ ವೈದ್ಯಕೀಯ ಶಿಬಿರ ಹಮ್ಮಿಕೊಳ್ಳಲಾಗಿದೆ.
– ಬೂಡಿಯಾರ್‌ ರಾಧಾಕೃಷ್ಣ ರೈ, ಎಪಿಎಂಸಿ ಅಧ್ಯಕ್ಷ, ಪುತ್ತೂರು

  ಗಣೇಶ್‌ ಎನ್‌ ಕಲ್ಲರ್ಪೆ 

Advertisement

Udayavani is now on Telegram. Click here to join our channel and stay updated with the latest news.

Next