Advertisement

ಕೆರೆಗೆ ಕಾಯಕಲ್ಪ ಲಭಿಸಿದರೆ ಜಲಧಾಮ

10:20 AM Oct 14, 2018 | Team Udayavani |

ನರಿಮೊಗರು: ಜಲಮೂಲಗಳಾದ ಕೆರೆ, ಹಳ್ಳ, ಕೊಳ್ಳಗಳ ಅಭಿವೃದ್ಧಿಯಾದರೆ ನೀರಿನ ಕೊರತೆಯಾಗದು. ಕೆರೆಗಳ ಹೂಳೆತ್ತದಿದ್ದರೆ ಜಲಮೂಲಗಳು ಬತ್ತಿ ಹೋಗಿ ನೀರಿಗೆ ಪರಿತಪಿಸಬೇಕಾದ ಸಂದರ್ಭ ಒದಗಿ ಬರುವ ಅಪಾಯವೂ ಇದೆ. ಆರ್ಯಾಪು ಗ್ರಾಮದ ಕುರಿಯ ಅಜಲಾಡಿಕೆರೆ ಅಪಾಯದ ಹಂತದಲ್ಲಿದೆ. ಈ ಕೆರೆಗೆ ಕಾಯಕಲ್ಪವಾದರೆ ಸ್ಥಳೀಯ ಮೂರು ಗ್ರಾಮಕ್ಕೆ ಯಥೇತ್ಛ ನೀರು ಲಭಿಸಲಿದೆ.

Advertisement

ಭತ್ತ ಬೇಸಾಯ ಯಾವಾಗ ಜನರಿಂದ ದೂರವಾಗುತ್ತಾ ಸಾಗಿತೋ, ಅಂದಿನಿಂದ ಈ ಕೆರೆಯೂ ಹಂತ- ಹಂತವಾಗಿ ಅಜೀರ್ಣಾವಸ್ಥೆಗೆ ತಲುಪಿತ್ತು. ಅಕ್ಕಪಕ್ಕದ ಮೂರು ಗ್ರಾಮಗಳ ಏಕೈಕ ನೀರಿನ ಆಶ್ರಯವಾಗಿದ್ದ  ಜಲಾಡಿಕೆರೆಯು ಇಂದು ಹೂಳು ತುಂಬಿ ಹೋಗಿದ್ದು, ಇದೀಗ ಬೃಹತ್‌ ಕೆರೆಯು ಗದ್ದೆಯಂತೆ ಗೋಚರಿಸುತ್ತಿದೆ. ಆರ್ಯಾಪು ಗ್ರಾ.ಪಂ.ನ ಕುರಿಯ ಗ್ರಾಮದಲ್ಲಿ ಈ ಕೆರೆಯಿದ್ದರೂ ಪಕ್ಕದ ಗ್ರಾಮಗಳಿಗೂ ಈ ಕೆರೆಯಿಂದಲೇ ನೀರಿನ ಪೂರೈಕೆ ಸಾಂಗವಾಗಿ ದೊರಕುತ್ತಿತ್ತು.

ಇಲ್ಲಿನ ಗದ್ದೆಗಳೆಲ್ಲವೂ ಹಸಿರಾಗಿರಲು ಈ ಕೆರೆಯೇ ಆಸರೆಯಾಗಿತ್ತು. ಸುಮಾರು 3.52 ಎಕ್ರೆ ವಿಸ್ತೀರ್ಣದಲ್ಲಿರುವ ಅಜಲಾಡಿ ಕೆರೆಯು ಸಂಪೂರ್ಣ ಹೂಳು ತುಂಬಿ ಮುಚ್ಚಿ ಹೋಗಿದೆ. ಕಸ ಕಡ್ಡಿಗಳು, ಮಣ್ಣು ಕೆರೆಯನ್ನು ಆವರಿಸಿಕೊಂಡಿದೆ.

ಆಕ್ರಮಿತ ಜಾಗ ಮರುವಶ
ಕೆರೆ ಅಭಿವೃದ್ಧಿ ಕಾಣದ ಕಾರಣ ಕೆರೆಯ ಸುತ್ತಮುತ್ತಲ ಜಾಗವನ್ನು ಖಾಸಗಿ ವ್ಯಕ್ತಿಗಳು ಅತಿಕ್ರಮಿಸಿಕೊಂಡಿದ್ದರು. ಸಾರ್ವಜನಿಕರು ಈ ಬಗ್ಗೆ ಆರ್ಯಾಪು ಗ್ರಾ.ಪಂ.ಗೆ ದೂರು ನೀಡಿದ್ದರು. ಅದರಂತೆ ಗ್ರಾ.ಪಂ. ಕೆರೆಯ ಸರ್ವೆ ಕಾರ್ಯವನ್ನು ಕಳೆದ ವರ್ಷ ನಡೆಸಿದೆ. ಅಕ್ರಮಿಸಿರುವ ಜಾಗವನ್ನು ಮರುವಶಕ್ಕೆ ಪಡೆದು ಸುತ್ತಲೂ ತಂತಿ ಬೇಲಿಯನ್ನು ಹಾಕಿ ಕೆರೆಯ ಜಾಗವನ್ನು ಉಳಿಸಿಕೊಂಡಿದೆ.

ವರ್ಷವಿಡೀ ನೀರು
ಕೆರೆಯ ಹೂಳೆತ್ತಿ ದುರಸ್ತಿ ಮಾಡಿದ್ದೇ ಆದಲ್ಲಿ ವರ್ಷವಿಡೀ ಇಲ್ಲಿ ನೀರು ಲಭ್ಯವಿರುವಂತೆ ಮಾಡಲು ಸಾಧ್ಯ. ಈ ಹಿಂದೆ ವರ್ಷದ 365 ದಿನವೂ ಇಲ್ಲಿ ನೀರು ಶೇಖರಣೆಯಾಗುತ್ತಿತ್ತು ಎನ್ನುವುದನ್ನು ಗ್ರಾಮದ ಹಿರಿಯರು ನೆನಪಿಸಿಕೊಳ್ಳುತ್ತಾರೆ. ಈ ಬಾರಿ ಮಳೆ ಕೊಯ್ಲು ನಡೆಸುವ ಮೂಲಕ ಮಳೆಯ ನೀರು ಕೆರೆಗೆ ಹಾದುಹೋಗುವ ಚರಂಡಿಯನ್ನು ಗ್ರಾ.ಪಂ. ನಿರ್ಮಿಸಿದೆ. 

Advertisement

ಅಭಿವೃದಿಗೆ 3 ಕೋ. ರೂ. ಬೇಕು
ಸ್ಥಳೀಯ ತಜ್ಞರ ಅಭಿಪ್ರಾಯದ ಪ್ರಕಾರ ಕೆರೆಯ ಹೂಳೆತ್ತಲು ಕನಿಷ್ಠ3 ಕೋಟಿ ರೂ. ಅನುದಾನ ಬೇಕಿದೆ. ಸುಮಾರು 80 ಅಡಿ ಹೂಳು ತುಂಬಿಕೊಂಡಿದೆ ಎಂದು ಅಂದಾಜಿಸಲಾಗಿದೆ. ಹೂಳನ್ನು ಸಂಪೂರ್ಣವಾಗಿ ತೆರವು ಮಾಡಿ ಕೆರೆಯ ಸುತ್ತ ಆವರಣ ಗೋಡೆ, ನೀರು ಪೋಲಾಗದಂತೆ ವ್ಯವಸ್ಥೆ ಹಾಗೂ ಕೆರೆಗೆ ಹೊರಗಿನಿಂದ ಮಣ್ಣು, ಕಸಕಡ್ಡಿಗಳು ಸೇರದಂತೆ ವ್ಯವಸ್ಥೆಯನ್ನು ಮಾಡಬೇಕಿದೆ. ಸ್ಥಳೀಯ ಮುಂದಾಳುಗಳು, ಗ್ರಾ.ಪಂ. ಕೆರೆ ಅಭಿವೃದ್ಧಿಗೆ ಮುತುವರ್ಜಿ ವಹಿಸಿದ್ದರೂ, ಅನುದಾನದ ಕೊರತೆ ಇದೆ. ಅದಕ್ಕಾಗಿ ಮೇಲ್‌ಸ್ತರದ ಜನಪ್ರತಿನಿಧಿಗಳಿಗೆ ತಮ್ಮ ಅಹವಾಲು ಮಂಡಿಸಿದ್ದರೂ, ಯಾವ ಅನುದಾನ ಬಿಡುಗಡೆಯಾಗಿಲ್ಲ. ಆರ್ಯಾಪು ಗ್ರಾ.ಪಂ. 1 ಲಕ್ಷ ರೂ. ಖರ್ಚು ಮಾಡಿ ಕೆರೆಯ ಸುತ್ತಲೂ ಬೇಲಿ ಹಾಕುವ ಕಾರ್ಯವನ್ನು ಮಾಡಿತ್ತು.

ಕೆರೆ ಅಭಿವೃದ್ಧಿ
ಬೃಹತ್‌ ವಿಸ್ತೀರ್ಣದ ಕೆರೆ ಪುತ್ತೂರಿನ ಭಾಗದಲ್ಲಿರುವುದು ಹೆಮ್ಮೆಯ ವಿಚಾರ. ಇದುವರೆಗೂ ಈ ಕೆರೆಯ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಖಂಡಿತವಾಗಿಯೂ ಮುಂದಿನ ದಿನಗಳಲ್ಲಿ ಕೆರೆಯನ್ನು ಅಭಿವೃದ್ಧಿಗೆ ಅನುದಾನ ತರಲು ಪ್ರಯತ್ನಿಸುತ್ತೇನೆ. ಆರ್ಯಾಪು ಗ್ರಾಮ ಪಂಚಾಯತ್‌ನಿಂದ ಮಾಹಿತಿ ಪಡೆದು ಮುಂದಿನ ಕ್ರಮ ಕೈಗೊಳ್ಳಲಿದ್ದೇನೆ.
ಸಂಜೀವ ಮಠಂದೂರು
  ಪುತ್ತೂರು ಶಾಸಕರು

 3.5 ಕೋ.ರೂ. ಪ್ರಸ್ತಾವನೆ
 
ಈ ಕೆರೆಯ ಅಭಿವೃದ್ಧಿಗೆ 3.5 ಕೋಟಿ ರೂ. ನೀಡಲು ನನ್ನ ಶಾಸಕತ್ವದ ಅವಧಿಯಲ್ಲಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಚುನಾವಣೆಯ ಬಳಿಕ ಅದೇನಾಗಿದೆ ಎಂದು ನನಗೂ ಗೊತ್ತಿಲ್ಲ. ಈಗಿನ ಶಾಸಕರು ಮನಸ್ಸು ಮಾಡಿದರೆ ಅನುದಾನವನ್ನು ಸರಕಾರ ನೀಡಬಹುದು. ಕೆರೆಯನ್ನು ಅಭಿವೃದ್ಧಿ ಮಾಡುವ ನನ್ನಾಸೆ ಶಾಸಕತ್ವದ ಕೊನೆಯವರೆಗೂ ಈಡೇರಲಿಲ್ಲ ಎನ್ನುವ ಬೇಸರವಿದೆ.
 - ಶಕುಂತಳಾ ಟಿ. ಶೆಟ್ಟಿ , ಮಾಜಿ ಶಾಸಕರು

ಮನವಿ ಮಾಡಲಿದ್ದೇವೆ 
ಅಜಲಾಡಿ ಕೆರೆಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಗ್ರಾ.ಪಂ. ಮುತುವರ್ಜಿ ವಹಿಸಿ ಶಾಸಕರ ಮೂಲಕ ಸರಕಾರಕ್ಕೆ ಮನವಿ ಮಾಡಲಿದೆ ಎಂದು ಆರ್ಯಾಪು ಗ್ರಾ.ಪಂ. ಉಪಾಧ್ಯಕ್ಷ ವಸಂತ ಶ್ರೀದುರ್ಗಾ ಅವರು ಹೇಳಿದ್ದಾರೆ.

 ಪ್ರವೀಣ್‌ ಚೆನ್ನಾವರ

Advertisement

Udayavani is now on Telegram. Click here to join our channel and stay updated with the latest news.

Next