Advertisement
ಪುತ್ತೂರಿನ ಹೃದಯ ಭಾಗದ ನೆಲ್ಲಿಕಟ್ಟೆಯಲ್ಲಿರುವ ಸರಕಾರಿ ಶಾಲೆಯ ಪ್ರಾಚೀನ ಕಟ್ಟಡ ಇದಾಗಿದ್ದು ಸಂರಕ್ಷಣೆ ಇಲ್ಲದೆ ಕಟ್ಟಡದ ಒಂದೊಂದೇ ಭಾಗ ಕುಸಿದು ಧರಾಶಾಯಿಯಾಗುವ ಸ್ಥಿತಿಗೆ ತಲುಪಿತು. 19, 20 ಹಾಗೂ 21 ಹೀಗೆ 3 ಶತಮಾನಗಳ ನಡುವಿನ ಕೊಂಡಿಯಾಗಿದ್ದ ಈ ವಿದ್ಯಾದೇಗುಲದಲ್ಲಿ 83 ವರ್ಷಗಳ ಹಿಂದೆ ಜ್ಞಾನಪೀಠ ಪುರಸ್ಕೃತ ಸಾಹಿತಿ ಡಾ| ಕೆ.ಶಿವರಾಮ ಕಾರಂತರು ನಾಟ್ಯ ನಿರ್ದೇಶನ ಮಾಡುತ್ತಿದ್ದರು. ರಂಗಭೂಮಿ ಚಟುವಟಿಕೆಗಳ ಕೇಂದ್ರವಾಗಿ ಬೆಳೆಸಿದ್ದರು. ಜಿಲ್ಲೆಯಲ್ಲೇ ಅತ್ಯಂತ ಪ್ರಾಚೀನ ನಾಡಹಬ್ಬ ದಸರಾ ಆಚರಣೆಯನ್ನು ಇದೇ ಶಾಲೆಯಲ್ಲಿ ಆರಂಭಿಸಿದ್ದರು. ಇಂಥ ಐತಿಹಾಸಿಕ ಕಟ್ಟಡವನ್ನು ನೆಲಶಾಹಿ ಮಾಡುವ ಮೂಲಕ ಸಾಂಸ್ಕೃತಿಕ ಕೇಂದ್ರ ಕಣ್ಮರೆಯಾಗಿದ್ದು ಉದ್ದೇಶಪೂರ್ವಕವಾಗಿಯೇ ಕೆಡವಿರುವ ಗುಮಾನಿ ಮೂಡಿದೆ.
ಕಾರಣಕ್ಕೆ ನೆಲಸಮ
ಡಿ.11 ರಂದು ಸ್ಥಳೀಯ ಶಾಲಾ ಮಕ್ಕಳು ಆಡವಾಡುತ್ತಿದ್ದ ವೇಳೆ ಕಟ್ಟಡದ ಒಂದು ಭಾಗ ಕುಸಿದು ಬಿದ್ದಿತ್ತು. ಮಕ್ಕಳ ಓಡಾಟದ ವೇಳೆ ಅಪಾಯ ಸಂಭವಿಸಬಾರದು ಎಂಬ ಕಾರಣ ನೀಡಿ ಸ್ಥಳೀಯ ಶಾಲಾ ಎಸ್‌ಡಿಎಂಸಿ ನೇತೃತ್ವದಲ್ಲಿ ಜೆಸಿಬಿ ಮೂಲಕ ಡಿ. 12ರ ರಾತ್ರಿ ಕಟ್ಟಡವನ್ನು ನೆಲಸಮ ಮಾಡಲಾಗಿದೆ. ಶಾಲೆಯ ಕಟ್ಟಡವನ್ನು ನಿರ್ವಹಣೆ ಮಾಡುವ ನಿಟ್ಟಿನಲ್ಲಿ ನೆಲ್ಲಿಕಟ್ಟೆ ಪ್ರಾಥಮಿಕ ಶಾಲಾ ಎಸ್.ಡಿ.ಎಂ.ಸಿ. ಮೂಲಕ ಅನೇಕ ಬಾರಿ ಶಾಸಕರಿಗೆ, ಸಂಬಂಧಿಸಿದ ಇಲಾಖೆಗೆ ಮನವಿ ಮಾಡಲಾಗಿತ್ತು. ಯಾವುದೇ ಅನುದಾನ ಬಾರದ ಕಾರಣ ದುರಸ್ತಿ ಆಗಿರಲಿಲ್ಲ. ಈ ನಡುವೆ ಶಾಲೆಯ ಮಕ್ಕಳು ಮತ್ತು ಪರಿಸರದ ಮಕ್ಕಳು ಅಲ್ಲಿ ಆಟವಾಡುತ್ತಿದ್ದ ವೇಳೆ ಕಟ್ಟಡದ ಕೆಲವು ಭಾಗ ಧರೆಗೆ ಉರುಳಿದೆ. ಈ ನಿಟ್ಟಿನಲ್ಲಿ ರವಿವಾರ ಶಾಲಾ ಎಸ್‌ಡಿಎಂಸಿ ಮತ್ತು ಸ್ಥಳೀಯರು ಸೇರಿ ಕಟ್ಟಡ ನಿರ್ವಹಣೆ ಮಾಡಲು ಶಾಸಕರ ಅನುಮತಿ ಪಡೆದು ಹೆಂಚು ತೆರವು ಕಾರ್ಯ ನಡೆಸಿದ್ದಾರೆ.
Related Articles
Advertisement
ಕಮರಿದ ಪಾರಂಪರಿಕ ತಾಣದ ಕನಸುಭವ್ಯ ಇತಿಹಾಸ ಹೊಂದಿರುವ ಕಟ್ಟಡವನ್ನು ಪಾರಂಪರಿಕ ತಾಣವಾಗಿ ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಕೆಲವು ವರ್ಷಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ಗೆ 50 ಲಕ್ಷ ರೂ.ಗಳ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆ ಅನುದಾನ ಮಂಜೂರಾಗಲಿಲ್ಲ. ಹತ್ತಾರು ವರ್ಷಗಳಿಂದ ಕಟ್ಟಡ ಇದೇ ಸ್ಥಿತಿಯಲ್ಲಿದ್ದರೂ ಸಂಬಂಧಿಸಿದ ಇಲಾಖೆ, ಜನಪ್ರತಿನಿಧಿಗಳು ಸಂರಕ್ಷಣೆಗೆ ಇಚ್ಛಾ ಶಕ್ತಿ ಪ್ರದರ್ಶಿಸದ ಪರಿಣಾಮ ಕಟ್ಟಡ ಅನಾಥ ಸ್ಥಿತಿಯಲ್ಲಿತ್ತು ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಟ್ಟಡದ ಇತಿಹಾಸ
1865ರಲ್ಲಿ ಬ್ರಿಟಿಷ್ ಸರಕಾರ ಕಟ್ಟಿದ ಗವರ್ನಮೆಂಟ್ ಎಲಿಮೆಂಟರಿ ಶಾಲೆ ಇದು. ನಗರದ ಹೃದಯ ಭಾಗದಲ್ಲಿ 3.26 ಎಕ್ರೆ ಜಮೀನು ಇದಕ್ಕಿದೆ. ಸ್ವಾತಂತ್ರ್ಯ ಅನಂತರ ಇದನ್ನು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಪುತ್ತೂರು ಎನ್ನಲಾಯಿತು. ಈಗ ದ.ಕ.ಜಿ.ಪಂ. ಮಾದರಿ ಹಿರಿಯ ಪ್ರಾಥಮಿಕ ಶಾಲೆ ಎನ್ನಲಾಗುತ್ತದೆ. ಜನ ಆಡುಮಾತಿನಲ್ಲಿ ನೆಲ್ಲಿಕಟ್ಟೆ ಶಾಲೆ ಎನ್ನುತ್ತಾರೆ. ಇಲ್ಲಿ ನಡೆಯುತ್ತಿದ್ದ ಪ್ರಾಥಮಿಕ ಶಾಲೆ ಪಕ್ಕದ 2 ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ. ಇಲ್ಲಿ ನಡೆಯುತ್ತಿದ್ದ 3 ಕಾಲೇಜುಗಳೂ ಬೇರೆ ಕಡೆ ಹೋಗಿವೆ. ಪುತ್ತೂರು ಉಪ ವಿಭಾಗದ ಮೊದಲ ಶಾಲೆಯಾಗಿ ಬ್ರಿಟಿಷ್ ಸರಕಾರ ಕಟ್ಟಿತ್ತು. 1935ರ ಸುಮಾರಿಗೆ ಪುತ್ತೂರಿಗೆ ಬಂದ ಡಾ|ಶಿವರಾಮ ಕಾರಂತರು ಬಾಲವನ ಅಭಿವೃದ್ಧಿಪಡಿಸುವ ಮೊದಲು ಈ ಶಾಲೆಯನ್ನು ರಂಗ ಚಟುವಟಿಕೆ ಕೇಂದ್ರವಾಗಿ ಬೆಳೆಸಿದರು. ತಾವೇ ಸ್ವತಃ ನಾಟ್ಯ, ನಾಟಕ ನಿರ್ದೇಶನ ಮಾಡುತ್ತಿದ್ದರು. ಶಾಲೆಯ ಒಳಗೆ ಗ್ರೀಕ್ ಮಾದರಿಯ ರಂಗವೇದಿಕೆಯಿದ್ದು, ಅದರಲ್ಲಿ ನಾಟಕ ಆಡಿಸುತ್ತಿದ್ದರು. 73 ವರ್ಷಗಳ ಹಿಂದೆ ಪುತ್ತೂರು ನಾಡಹಬ್ಬ ಇಲ್ಲೇ ಆರಂಭಿಸಿದರು. ದಶಕಗಳ ಬಳಿಕ ನಾಡಹಬ್ಬ ಮಹಾಲಿಂಗೇಶ್ವರ ದೇಗುಲಕ್ಕೆ ಸ್ಥಳಾಂತರಗೊಂಡಿತು.