Advertisement
ಸರ್ವೇಭವಂತು ಸುಖೀನಃ ಸರ್ವೇ ಸಂತು ನಿರಾಮಯಾಃಸರ್ವೇ ಭದ್ರಾಣಿ ಪಶ್ಯಂತು ಸರ್ವೇ ಸುಗುಣಶಾಲಿನಃ||
ಸುಮಾರು ಹದಿನೈದು ವರ್ಷಗಳ ಹಿಂದೆ, ನಮ್ಮ ಪ್ರಪಂಚ ಶಾಂತಿ ಮತ್ತು ಅಭಿವೃದ್ಧಿಯ ಒಂದು ಸ್ವರ್ಗವಾಗುತ್ತದೆಂಬ ಹೊಸ ಭರವಸೆಯೊಂದಿಗೆ ನಾವು ಒಂದು ಹೊಸ ಶತಮಾನಕ್ಕೆ ಪದಾರ್ಪಣ ಮಾಡಿದೆವು. ಆದರೆ ನಾವು ಕಳೆದ ದಶಕದಲ್ಲಿ ಹಿಂಸಾತ್ಮಕ ತೀವ್ರವಾದದ ಆಘಾತಕಾರಿ ಹೆಚ್ಚಳವನ್ನಲ್ಲದೆ ಬೇರೇನನ್ನೂ ಕಂಡಿಲ್ಲ. ಲಭ್ಯ ದತ್ತಾಂಶಗಳ ಪ್ರಕಾರ, 2013ರ ಕೇವಲ ಒಂದು ವರ್ಷದಲ್ಲಿ ಹಿಂಸೆಯಿಂದಾಗಿ 18,000 ಮಂದಿ ಮೃತಪಟ್ಟಿದ್ದಾರೆ.
Related Articles
Advertisement
ಭಯೋತ್ಪಾದನೆಗೆ ಮೂಲಕಾರಣವೆಂದು ಪರಿ ಗಣಿಸಬಹುದಾದ ಸಾಮಾಜಿಕ, ಆರ್ಥಿಕ ಅಂಶಗಳಲ್ಲಿ ಒಂದು ಪ್ರಧಾನ ಅಂಶ: ಸಮಾಜದಲ್ಲಿ ಉನ್ನತಿಗೆ ಬರಲು ಬೇಕಾದ ಅವಕಾಶದ ಕೊರತೆ ಮತ್ತು ಶಿಕ್ಷಣವೂ ಸೇರಿದಂತೆ ಪ್ರಾಥಮಿಕ ಆವಶ್ಯಕತೆಗಳನ್ನು ಪೂರೈಸುವಲ್ಲಿ ಸರಕಾರಗಳ ವೈಫಲ್ಯ. ಸಮಾಜದಲ್ಲಿರುವ ಶೈಕ್ಷಣಿಕ ಅವಕಾಶದ ಕೊರತೆಗೂ ತೀವ್ರ ಬಡತನಕ್ಕೂ ಸಂಬಂಧವಿದೆ. ಭಾರತದಲ್ಲಿ ಸಹಭಾಗಿತ್ವದಲ್ಲಿ ಎಲ್ಲ ಧರ್ಮಗಳ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಊಟವನ್ನು ನೀಡುವ ಮೂಲಕ ತೀವ್ರ ಬಡತನ, ಹಸಿವನ್ನು ನಿವಾರಿಸುವ ಕಾರ್ಯಕ್ರಮ ನಡೆಯುತ್ತಿದೆ. ಪರಿಣಾಮವಾಗಿ ಶಾಲೆಗಳಿಗೆ ಸೇರುವ ಮಕ್ಕಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡುಬಂತು.
ಶಿಕ್ಷಣವು ಬಡತನ ನಿರ್ಮೂಲನವನ್ನಷ್ಟೆ ಅಲ್ಲದೆ ಅಜ್ಞಾನ, ಭಯೋತ್ಪಾದನೆಯನ್ನು ಕೂಡ ನಿರ್ಮೂಲನ ಮಾಡಬಲ್ಲ ಪ್ರಬಲ ಅಸ್ತ್ರವಾಗಿದೆ. ಭಗವದ್ಗೀತೆಯಿಂದ ಆರಂಭಿಸಿ ಬೈಬಲ…, ಗುರುಗ್ರಂಥಸಾಹಿಬ್, ಕುರಾನ್‌ನ ವರೆಗೆ ಎಲ್ಲ ಧರ್ಮಗಳ ಬೋಧನೆಗಳು ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಅಡಕವಾಗಲು ಸಮುದಾಯ ನಾಯಕರು, ಧಾರ್ಮಿಕ ಮುಖಂಡರು ಮುಖ್ಯ ಪಾತ್ರ ವಹಿಸಬೇಕಾಗಿದೆ.
ಹಿಂಸೆ, ಭಯೋತ್ಪಾದನೆ ಒಮ್ಮಿಂದೊಮ್ಮೆಗೆ ಹೆಚ್ಚಾಗಲು ಧಾರ್ಮಿಕ ಬೋಧನೆಗಳ, ತತ್ತ್ವ ಗಳ ತಪ್ಪು ಅರ್ಥವಿವರಣೆ ಮತ್ತು ಒಂದು ನಿರ್ದಿಷ್ಟ ಧಾರ್ಮಿಕ ಆಚರಣೆಯನ್ನು ಅನುಸರಿಸುವಂತೆ ಜನರನ್ನು ಬಲವಂತ ಮಾಡುವುದೇ ಮುಖ್ಯ ಮೂಲ ಕಾರಣವಾಗಿದೆ. ನಾವು ಧಾರ್ಮಿಕ ನಾಯಕರಾಗಿ ಯಾವುದೇ ಧಾರ್ಮಿಕ ತೀವ್ರಗಾಮಿತ್ವವನ್ನು ಮತ್ತು ಅದರ ತಥಾಕಥಿತ ಸಮರ್ಥನೆಯನ್ನು ಖಂಡಿಸಲೇಬೇಕು.
ಒಂದು ನಿರ್ದಿಷ್ಟ ಧರ್ಮದ ಸತ್ಯವನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ ಎಂದು ಪ್ರತಿಪಾದಿಸುವ ಹಲವಾರು ಸುಳ್ಳು ಸಿದ್ಧಾಂತಗಳು, ಕಥಾನಕಗಳನ್ನು ಬದಿಗೆ ಸರಿಸಿ ಮಾನವ ಘನತೆ, ಶಾಂತಿಯನ್ನು ಗೌರವಿಸುವ ಸಾಚಾ ಕಥಾನಕಗಳನ್ನು ಮುನ್ನೆಲೆಗೆ ತರಲೇಬೇಕು.ಧಾರ್ಮಿಕ ರಂಗದಲ್ಲಿ ದುಂಬಿಯಂತೆ ಕಾರ್ಯ ಎಸಗಬೇಕು. ದುಂಬಿ ಎಲ್ಲ ಬಗೆಯ ಹೂವುಗಳಿಂದ ಜೇನನ್ನು ತೆಗೆದು, ಸಂಗ್ರಹಿಸಿ ಹಂಚುತ್ತದೆ. ಅದೇ ರೀತಿಯಾಗಿ ಪ್ರತಿಯೊಬ್ಬರೂ ದುಂಬಿಯಂತಾಗಿ ಎಲ್ಲ ಧರ್ಮಗಳಿಂದ ಎಲ್ಲ ಉತ್ತಮ ಅಂಶಗಳನ್ನು ಸಂಗ್ರಹಿಸಿ ಆನಂದವನ್ನು ಹಂಚಬೇಕು.
“ನೀನು ತಿಳಿದುಕೊಳ್ಳಬೇಕಾದುದನ್ನೆಲ್ಲ ನಾನು ನಿನಗೆ ಹೇಳಿದ್ದೇನೆ. ಯೋಚಿಸಿ ನಿನಗೆ ಸರಿ ಕಂಡಂತೆ ಮಾಡು’ ಎಂದು ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳುತ್ತಾನೆ. ನಾವು ಬಯಸುವ ಧರ್ಮವನ್ನು ನಾವು ಆಯ್ಕೆ ಮಾಡಿಕೊಳ್ಳಬೇಕು. ಭಯೋ ತ್ಪಾದನೆಯನ್ನು ಎದುರಿಸಿ ಶಾಂತಿಯುತವಾದ, ಎಲ್ಲರನ್ನೂ ಒಳಗೊಳ್ಳುವ ಸಮಾಜದ ನಿರ್ಮಾಣಕ್ಕಾಗಿ ನಾಲ್ಕು ಅಂಶಗಳ ಕಾರ್ಯಯೋಜನೆಯನ್ನು ಸೂಚಿ ಸಬಯಸುತ್ತೇವೆ. 1. ಹಿಂಸಾತ್ಮಕವಾದ ಧಾರ್ಮಿಕ ತೀವ್ರಗಾಮಿತ್ವಕ್ಕೆ ಸುಳ್ಳು ಸಮರ್ಥನೆಯಾಗಿ ಧರ್ಮ ದುರುಪಯೋ ಗಪಡಿಸುವಿಕೆಯ ಮುಖವಾಡವನ್ನು ಕಳಚಿ, ಅದರ ಟೊಳ್ಳುತವನ್ನು ಬಯಲು ಮಾಡಿ ಅದನ್ನು ನಿರಾಕರಿಸುವ ನಿಟ್ಟಿನಲ್ಲಿ ನೇತೃತ್ವ ವಹಿಸಬೇಕು. ತೀವ್ರಗಾಮಿತ್ವವನ್ನು ನಿರಾಕರಿಸಿ ಸಾರ್ವಕಾಲಿಕ ಮಾನವ ಘನತೆಯನ್ನು ಎತ್ತಿಹಿಡಿಯುವ ನಿರ್ದಿಷ್ಟ ಧರ್ಮದ ಸಾಚಾ ಬೋಧನೆಗಳನ್ನು ಜನತೆಯ ಮುಂದೆ ಪ್ರಸ್ತುತ ಪಡಿಸಬೇಕು. ವಿಶೇಷವಾಗಿ ಸ್ಥಳೀಯ ಪೂಜಾಸ್ಥಳಗಳಲ್ಲಿ ನಡೆಯುವ ಧಾರ್ಮಿಕ ಶಿಕ್ಷಣದ ಮೂಲಕ ಮಾನವ ಘನತೆಯನ್ನು ಎತ್ತಿಹಿಡಿಯುವ ಧರ್ಮದ ಬೋಧನೆಗಳನ್ನು ತಿಳಿಸಬೇಕು. 2. ಮಾನವ ಹಕ್ಕುಗಳ ಉಲ್ಲಂಘನೆ, ಬಡತನ, ಮೂಲಸೌಕರ್ಯಗಳ ಕೊರತೆಯನ್ನು ನೀಗಿಸುವ ಉದ್ದೇಶದಿಂದ ಯುವ ಜನತೆ, ಮಹಿಳೆಯರ ಸಶಕ್ತೀಕರಣವನ್ನು ಬಲಪಡಿಸುವ ಮೂರ್ತ ಯೋಜನೆಗಳನ್ನು ಜಾರಿಗೊಳಿಸಬೇಕು. 3. ಘರ್ಷಣೆಯನ್ನು ನಿವಾರಿಸಲು ಸಂವಾದದಲ್ಲಿ ತೊಡಗಿಕೊಳ್ಳಬೇಕು. ಸಹಜೀವನ, ಮಾನವ ಘನತೆಯನ್ನು ವೃದ್ಧಿಸಲು ಅಂತರ್ ಸಾಮುದಾಯಿಕ ತಿಳಿವಳಿಕೆಯನ್ನು ಹೆಚ್ಚಿಸಬೇಕು. 4. ಸಮವಯಸ್ಕರ ತರಬೇತಿಗಾಗಿ ಯುವ ಧಾರ್ಮಿಕ ತಂಡಗಳನ್ನು ಸಿದ್ಧಗೊಳಿಸಿ ಹಿಂಸಾತ್ಮಕ ಧಾರ್ಮಿಕ ತೀವ್ರವಾದವನ್ನು ನಿರಾಕರಿಸಬೇಕು.
ಒಗ್ಗಟ್ಟಾಗಿ ನಿಂತು ಧಾರ್ಮಿಕ ಸ್ವಾತಂತ್ರ್ಯ, ಶಾಂತಿ, ಅಭಿವೃದ್ಧಿಯ ಮಾರ್ಗದಲ್ಲಿ ಪ್ರಪಂಚವನ್ನು ಮುನ್ನ ಡೆಸುವ ಶಕ್ತಿ, ಮನೋಬಲ, ಬದ್ಧತೆಯನ್ನು ನೀಡುವಂತೆ ದೇವರಲ್ಲಿ ಪ್ರಾರ್ಥನೆ ಮಾಡುತ್ತೇವೆ. “ವಸುಧೈವ ಕುಟುಂಬಕಂ’ ಎಂಬಂತೆ ಬದುಕೋಣ. ಭಯೋತ್ಪಾ ದನೆಯನ್ನು ನಿರ್ಮೂಲನೆ ಮಾಡುವ ಪ್ರಯತ್ನವು ವಿಶ್ವಸಂಸ್ಥೆಯನ್ನು ಇನ್ನಷ್ಟು ಬಲಪಡಿಸುತ್ತದೆ. ಎಲ್ಲರನ್ನು ಇಡೀ ವಿಶ್ವವನ್ನು ಹರಸುವಂತೆ ದೇವರಲ್ಲಿ ಪ್ರಾರ್ಥಿಸುತ್ತೇವೆ. (ಕನ್ನಡಕ್ಕೆ : ಡಾ| ಬಿ.ಭಾಸ್ಕರ ರಾವ್)