Advertisement

ಪುಟ್ಟರಾಜ ಕವಿ ಗವಾಯಿ ಜಯಂತಿ  

06:26 PM Mar 04, 2021 | Team Udayavani |

ಗದಗ: ಅಂಧ ಮಕ್ಕಳಿಗೆ ಕಣ್ಣು ಕಾಣದಿದ್ದರೂ ಜಗತ್ತೇ ಅವರತ್ತ ತಿರುಗಿ ನೋಡುವಂತೆ ಮಾಡಿದ ಕೀರ್ತಿ ಲಿಂ| ಪಂ|ಪುಟ್ಟರಾಜ ಕವಿ ಗವಾಯಿಗಳಿಗೆ ಸಲ್ಲುತ್ತದೆ. ಸಾಮಾಜಿಕ ಸೇವೆ, ಸಾಹಿತ್ಯ ಹಾಗೂ ಸಂಗೀತ ಲೋಕದ ಧೃವತಾರೆಯಾಗಿ ಮೆರೆದ ಶ್ರೀಗುರು ಪುಟ್ಟರಾಜರು ವಿಶ್ವದ ಎಂಟನೇ ಅದ್ಭುತ ಎಂದು ಕೊಪ್ಪಳ ಗವಿ ಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಬಣ್ಣಿಸಿದರು.

Advertisement

ದಿ| ಕೆ.ಎಚ್‌. ಪಾಟೀಲ ಅಭಿಮಾನಿ ಬಳಗದಿಂದ ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಬುಧವಾರ ನಡೆದ ಪದ್ಮಭೂಷಣ ಲಿಂ| ಪಂ| ಡಾ| ಪುಟ್ಟರಾಜ ಕವಿ ಗವಾಯಿಗಳ 107ನೇ ಜಯಂತ್ಯುತ್ಸವ ಹಾಗೂ ಸರ್ವ ಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪುಟ್ಟರಾಜ ಗವಾಯಿಗಳು ಕಣ್ಣಿಲ್ಲದ ಮಕ್ಕಳ ಭವಿಷ್ಯಕ್ಕೆ ಬೆಳದಿಂಗಳ ಬೆಳಕು ನೀಡಿದ್ದಾರೆ ಎಂದು ಸ್ಮರಿಸಿದರು. ಸಾನ್ನಿಧ್ಯ ವಹಿಸಿದ್ದ ಜ| ತೋಂಟದ ಸಿದ್ಧರಾಮ ಸ್ವಾಮೀಜಿ ಮಾತನಾಡಿ, ಸ್ವತಃ ಅಂಧರಾಗಿದ್ದರೂ ಶ್ರೀಗುರು ಪುಟ್ಟರಾಜರು ಜಗತ್ತಿಗೆ ಜ್ಞಾನದ ಬೆಳಕು ನೀಡಿದ್ದಾರೆ. 12ನೇ ಶತಮಾನದ ಶರಣರ ವಾಣಿಯಂತೆ ಬಾಳಿ ಬದುಕಿದ ಪೂಜ್ಯರು, ತಮ್ಮ ಇಡೀ ಜೀವನವನ್ನು ಸಮಾಜಕ್ಕಾಗಿ ಅರ್ಪಿಸಿದ್ದರು. ಅಂತಹವರನ್ನು ಸಮಾಜವೂ ಸದಾ ಸ್ಮರಿಸುತ್ತದೆ.  ಪುಣ್ಯಪುರುಷರ ಸ್ಮರಣೆಯಿಂದ  ಹೃದಯದಲ್ಲಿ ಜ್ಞಾನದ ಜ್ಯೋತಿ ಬೆಳಗುತ್ತದೆ. ಜೀವನದಲ್ಲಿ ಸುಖ, ಶಾಂತಿ ನೆಲೆಗೊಳ್ಳುತ್ತದೆ ಎಂದು ಹೇಳಿದರು.

ಬಳಗಾನೂರು ಚಿಕೇನಕೊಪ್ಪದ ಶಿವಶಾಂತವೀರ ಶರಣರು ಮಾತನಾಡಿ, ಇದು ಬಡವರ ಮಕ್ಕಳ ಮದುವೆಯಲ್ಲ. ಪೂಜ್ಯರ ಜನ್ಮದಿನದಂದು ನಡೆಯುತ್ತಿರುವ ಭಾಗ್ಯವಂತರ ಮಕ್ಕಳ ವಿವಾಹ. ನವ ದಂಪತಿಗಳು ಶರಣರ ಆಶಯದಂತೆ ಕಾಯಕ ಜೀವಿಗಳಾಗಿ ಬಾಳಬೇಕು. ದಯವೇ ಧರ್ಮದ ಮೂಲವಯ್ಯ ಎಂಬಂತೆ ದಯಪರವಾದ ಗುಣಗಳನ್ನು ಬೆಳೆಸಿಕೊಂಡು ಬದುಕಿನಲ್ಲಿ ಸಾರ್ಥಕತೆ ಕಾಣಬೇಕು ಎಂದು ಕಿವಿಮಾತು ಹೇಳಿದರು.

ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು, ಸಿಐಡಿ ಕಾನೂನು ಸಲಹೆಗಾರ ಮಹೇಶ ವೈದ್ಯ, ಕಪ್ಪತ್ತಗಿರಿ ನಂದಿವೇರಿ ಮಠದ ಶಿವಕುಮಾರ ಸ್ವಾಮೀಜಿ, ನಗರಸಭೆ ಪೌರಾಯುಕ್ತ ರಮೇಶ ಜಾದವ್‌, ಡಾ|ಅರ್ಜುನ ಬಸರೀಗಿಡದ, ನಗರಸಭೆ ಮಾಜಿ ಅಧ್ಯಕ್ಷರಾದ ಪೀರಸಾಬ ಕೌತಾಳ, ಶಿವಲೀಲ ಅಕ್ಕಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಂ.ಎ. ಮೌಲ್ವಿ, ಪಿ.ಸಿ. ಹಿರೇಮಠ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next