ಸವಣೂರು, ಅ. 11: ಲಾಕ್‌ಡೌನ್ ಸಂದರ್ಭದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ, ಪೂರೈಕೆಯಲ್ಲಿ ವ್ಯತ್ಯಯ, ಮಾರುಕಟ್ಟೆಗೆ ಹೋಗಲಾಗದ ಪರಿಸ್ಥಿತಿಯನ್ನು ಎದುರಿಸಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮಗಳ ಜನ ಇದೀಗ ತಾವೇ ಭತ್ತ ಹಾಗೂ ತರಕಾರಿಯನ್ನು ಬೆಳೆಯಲಾರಂಭಿಸಿದ್ದಾರೆ. ಗದ್ದೆ ಇಲ್ಲದೇ ಹೋದಲ್ಲಿ ಇತರರ ಜಮೀನಿನಲ್ಲಿರುವ ಖಾಲಿ ಜಾಗವನ್ನು ಸಮತಟ್ಟುಗೊಳಿಸಿ ಕೃಷಿ ಮಾಡುತ್ತಿದ್ದಾರೆ.
ಪಾಲ್ತಾಡಿ ಮಂಜುನಾಥನಗರ ಸ.ಹಿ.ಪ್ರಾ. ಶಾಲೆಯ ಅಭಿವೃದ್ದಿ ಸಮಿತಿಯ ಅಧ್ಯಕ್ಷರಾಗಿರುವ ಸವಣೂರು ಸಮೀಪದ ಪರಣೆ ನಿವಾಸಿ ಪುಟ್ಟಣ್ಣ ಮಡಿವಾಳ ಅವರ ಕಥೆಯೂ ಇದಕ್ಕಿಂತ ಭಿನ್ನವಾಗಿಲ್ಲ. ಅವರಿಗೆ ಸ್ವಂತ ಗದ್ದೆ ಇಲ್ಲ. ಆದರೂ ಭತ್ತದ ಗದ್ದೆ ಮಾಡಬೇಕೆಂಬ ಅದಮ್ಯ ಉತ್ಸಾಹ ಅವರಲ್ಲಿತ್ತು. ಅದಕ್ಕೆ ಪೂರಕವಾಗಿ ಬಂಬಿಲಗುತ್ತು ಮಿತ್ರಾ ಜೈನ್ ಕೆಲವು ವರ್ಷಗಳಿಂದ ಭತ್ತದ ಕೃಷಿ ನಿಲ್ಲಿಸಿ ಹಡಿಲು ಬಿದ್ದಿದ್ದ ತಮ್ಮ ಗದ್ದೆ ನೀಡಿ ಅದಕ್ಕೆ ಬೇಕಾದ ಪೂರಕ ವ್ಯವಸ್ಥೆ ಕಲ್ಪಿಸಿದ್ದರು. ಅದರಂತೆ ಇದೀಗ ಭತ್ತ ಕೊಯ್ಲಿಗೆ ಸಿದ್ಧವಾಗಿದೆ.
ಸಸಿ ಮಡಿ : ಶ್ರೀ ಪದ್ಧತಿಯಂತೆ ನೇಜಿ ನಾಟಿ ಮಾಡಿದ ಪುಟ್ಟಣ್ಣ ಹೊಸ ಪ್ರಯೋಗದ ಮೂಲಕ ನೇಜಿ ಬೆಳೆಸಿದರು. ಮಣ್ಣಿನ ಹೆಂಚುಗಳನ್ನು ನೆಲದ ಮೇಲೆ ಹಾಸಿ ಅದರ ಮೇಲೆ ಸೋಸಿದ ಮಣ್ಣು ಹಾಕಿ ಭತ್ತದ ಬೀಜ ಹಾಕಿ ಸಸಿ ಮಾಡಿ ಹೆಂಚು ಸಮೇತ ನೇಜಿಯನ್ನು ಗದ್ದೆಗೆ ಕೊಂಡು ಹೋಗಿ ಅಲ್ಲಿ ನಾಟಿ ಮಾಡಿದರು. ಭತ್ತದ ಬೀಜವನ್ನು ಉಪ್ಪು ನೀರಿನಲ್ಲಿ ಹಾಕಿದಾಗ ಅದರಲ್ಲಿ ಉತ್ತಮ ಭತ್ತ ಹಾಗೂ ಜೊಲ್ಲು ಭತ್ತ ಪ್ರತ್ಯೇಕವಾಗುತ್ತದೆ. ಉಪ್ಪು ನೀರಿನಿಂದ ತೆಗೆದು ಶುದ್ಧ ನೀರಿನಲ್ಲಿ ತೊಳೆದು ಸಗಣಿ ಮಿಶ್ರಿತ ಭತ್ತವನ್ನು ಗೋಣಿಯಲ್ಲಿ ಇಟ್ಟೋವು ಜಾತಿಯ ಗಿಡದ ಎಲೆಯನ್ನು ಹಾಕಿಟ್ಟು ಬಳಿಕ ಹೆಂಚಿನ ಮೇಲೆ ಮಣ್ಣು ಹಾಕಿ ಭತ್ತ ಭಿತ್ತನೆ ಮಾಡಿದ್ದೇನೆ. ಗಿಡವಾದ 22ನೇ ದಿನದಲ್ಲಿ ನಾಟಿ ಮಾಡಿದ್ದೇನೆ ಎಂದು ವಿವರಿಸುತ್ತಾರೆ ಪುಟ್ಟಣ್ಣ. ಒಂದೂವರೆ ಎಕ್ರೆಯಲ್ಲಿ ಅಂದಾಜು ಸುಮಾರು 50 ಕ್ವಿಂಟಾಲ್ ಇಳುವರಿ ಪಡೆಯುವ ನಿರೀಕ್ಷೆ ಹೊಂದಿದ್ದಾರೆ.
ನಮ್ಮ ಊರಿನ ಮಿತ್ರ ಜೈನ್ ತಮ್ಮ ಹಡಿಲು ಬಿದ್ದಿದ್ದ ಗದ್ದೆಯಲ್ಲಿ ಬೇಸಾಯ ಮಾಡುವ ಕುರಿತು ಆಸಕ್ತಿ ಇದೆಯಾ ಎಂದು ಕೇಳಿದರು. ಅದಕ್ಕೆ ಪೂರಕವಾಗಿ ಭತ್ತದ ಕೃಷಿಗೆ ಇಳಿದೆ. ಹೊಸ ಪದ್ಧತಿಯಿಂದ ಗದ್ದೆ ಮಾಡಿದೆ. ಅವರ ಸಹಕಾರವೂ ಸಿಕ್ಕಿದೆ.ನಿರೀಕ್ಷೆಗೂ ಮೀರಿದ ಬೆಳೆಯಾಗಿದೆ. ಇದನ್ನು ಮುಂದುವರಿಸುತ್ತೇನೆ.
–ಪುಟ್ಟಣ್ಣ ಪರಣೆ, ಭತ್ತದ ಕೃಷಿಕ
–ಸುದಿನ ವಿಶೇಷ