ಕಲಬುರಗಿ: ನಗರದ ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಬುಧವಾರ ನಡೆದ ಕರ್ನಾಟಕ ರಾಜ್ಯೋತ್ಸವ ಆಚರಣೆ ಸಮಾರಂಭದಲ್ಲಿ ಪುಟ್ಟಗೌರಿ ಧಾರವಾಹಿಯ ಖ್ಯಾತ ನಟಿ ರಂಜನಿ ರಾಘವನ್ ಭಾಗವಹಿಸಿದ್ದರಿಂದ ರಂಗಮಂದಿರ ಸಭಿಕರಿಂದ ತುಂಬಿ ತುಳುಕುತ್ತಿತ್ತು.
ವೇದಿಕೆ ಮೇಲಿದ್ದ ಪುಟ್ಟಗೌರಿ ನೋಡಲು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಅದರಲ್ಲಿಯೂ ಯುವಕರು
ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ವೇದಿಕೆ ಮುಂಭಾಗದಲ್ಲಿ ನೂಕುನುಗ್ಗಲಿನಲ್ಲಿ ನಿಂತು ಪುಟ್ಟಗೌರಿಯನ್ನು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದು ಸಂಭ್ರಮಿಸಿದರು.
ಪುಟ್ಟಗೌರಿಯ ಪಾತ್ರಧಾರಿ ಕಿರುತೆರೆ ನಟಿ ರಂಜಿನಿ ರಾಘವನ್ ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ ಅತೀ ಹೆಚ್ಚು ಅಂಕ ಪಡೆದ 51 ವಿದ್ಯಾರ್ಥಿಗಳನ್ನು ಪುರಸ್ಕರಿಸಿದರು. ಪಾಳಾದ ಗುರುಮೂರ್ತಿ ಶಿವಾಚಾರ್ಯರು, ಮಹಾಪೌರ ಶರಣಕುಮಾರ ಮೋದಿ ಡೊಳ್ಳು ಬಾರಿಸುವ ಮೂಲಕ ಹಾಗೂ ಗಿಡಕ್ಕೆ ನೀರು ಹಣಿಸಿ ಸಮಾರಂಭ ಉದ್ಘಾಟಿಸಿದರು.
ಕುಮಸಿವಾಡಿ ಮಠದ ಬಾಲ ಶಿವಯೋಗಿ ಚನ್ನವೀರ ಮಹಾಸ್ವಾಮೀಜಿ, ಮಹಾಗಾಂವದ ವಾಸುನಸಾಹೇಬ್ ದರ್ಗಾದ ಮೊದಿನ್ ಸಾಹೇಬ್ ಮುತ್ಯಾ ಹಾಜರಿದ್ದರು. ಬೀದಿ ವ್ಯಾಪಾರಿಗಳ ಸಂಘದ ರಾಜ್ಯಾಧ್ಯಕ್ಷ ಜಗನ್ನಾಥ ಸೂರ್ಯವಂಶಿ ಅಧ್ಯಕ್ಷತೆ ವಹಿಸಿದ್ದರು. ಭುವನೇಶ್ವರಿ ದೇವಿ ಪೂಜೆಯನ್ನು ಬಸವರಾಜದಿಗ್ಗಾವಿ ನೆರವೇರಿಸುವರು.
ಮುಖ್ಯ ಅತಿಥಿಗಳಾಗಿ ಜನಪ್ರತಿನಿಧಿಗಳು, ಉದ್ಯಮಿಗಳು, ರಾಜಕೀಯ ಮುಖಂಡರು, ಹೋರಾಟಗಾರರು, ನ್ಯಾಯವಾದಿಗಳು, ಅಧಿಕಾರಿಗಳು, ವೈದ್ಯರು ಮುಂತಾದವರು ಆಗಮಿಸಿದ್ದರು. ಗುಂಡಣ್ಣ ಡಿಗ್ಗಿ ಅವರಿಂದ ನಗೆಹನಿ, ಎಸ್.ಎಸ್. ಭಕ್ತ ಕುಂಬಾರ ಅವರಿಂದ ಜಾದೂ ಪ್ರದರ್ಶನ, ಗಜೇಂದ್ರ ಅವರಿಂದ ಗಾನ ಗಾಯನ, ಸಾಗರ್ ಗ್ರೂಪ್‌ನಿಂದ ನೃತ್ಯ ಪ್ರದರ್ಶನ ನಡೆಯಿತು, ವೀರ ಕನ್ನಡಿಗರ ಸೇನೆ ಸಂಸ್ಥಾಪಕ ಅಧ್ಯಕ್ಷ ಅಮೃತ ಪಾಟೀಲ್ ಸಿರನೂರ್ ರವಿ ಒಂಟಿ, ದತ್ತು ಭಾಸಗಿ, ತಿಪ್ಪಣ್ಣ ರದ್ದೆವಾಡಗಿ, ಮಹೇಶ ನಾಗನಳ್ಳಿ, ರಾಜು ಕಣ್ಣೂರ್ ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸಿದರು.
ಈ ಮಧ್ಯೆ ರಂಜನಿ ಅವರನ್ನು ಭೇಟಿ ಮಾಡಲು ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು, ಅಭಿಮಾನಿಗಳು ಮುಗಿಬಿದ್ದರು. ಈ ಸಂದರ್ಭದಲ್ಲಿ ಭಾರಿ ನೂಕುನುಗ್ಗಲು ಉಂಟಾಯಿತು. ಪರಿಸ್ಥಿತಿ ನಿಭಾಯಿಸಲು ಪೊಲೀಸರು ಕೆಲವರ ಮೇಲೆ ನವಿರಾಗಿ ಲಾಠಿ ಪ್ರಹಾರ ಮಾಡಿದರು.