ತಿ.ನರಸೀಪುರ: ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಯಾರೂ ಮಿತ್ರರಲ್ಲ ಎಂಬ ಮಾತಿನಂತೆ ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ.ಎಚ್.ಸಿ.ಮಹದೇವಪ್ಪ ಅವರಿಗೆ ಪ್ರತಿಸ್ಪರ್ಧಿಯಾಗಿದ್ದ ಹಿರಿಯ ದಲಿತ ಮುಖಂಡ ಪುಟ್ಟಬಸವಯ್ಯ ಅವರು ನೂರಾರು ಬೆಂಬಲಿಗರೊಂದಿಗೆ ಶನಿವಾರ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ತಾಲೂಕಿನ ನಿಲಸೋಗೆ ಗ್ರಾಮದಲ್ಲಿರುವ ಜಿಪಂ ಮಾಜಿ ಸದಸ್ಯರಾದ ಪುಟ್ಟಬಸವಯ್ಯ ಅವರ ನಿವಾಸಕ್ಕೆ ಡಾ.ಎಚ್.ಸಿ.ಮಹದೇವಪ್ಪ ತೆರಳಿದ್ದರು. ಒಂದಾನೊಂದು ಕಾಲದಲ್ಲಿ ಎದುರಾಳಿಯಾಗಿದ್ದ ಪುಟ್ಟಬಸವಯ್ಯ ಅವರನ್ನು ಎರಡೂವರೆ ದಶಕಗಳ ನಂತರ ಕಾಂಗ್ರೆಸ್ ಪಕ್ಷಕ್ಕೆ ಮರಳಿ ಕರೆತರುವ ಮೂಲಕ ಚುನಾವಣೆಯಲ್ಲಿ ಗೆಲ್ಲಲು ಪ್ರತ್ಯೇಕವಾಗಿ ಅರ್ಧ ತಾಸಿಗೂ ಹೆಚ್ಚಾ ಕಾಲ ಸಮಾಲೋಚನೆಯನ್ನು ನಡೆಸಿದರು.
ದೇಶದಲ್ಲಿನ ಮತೀಯ ಕಿಚ್ಚನ್ನು ಹೊತ್ತಿಸುತ್ತಿರುವ ಮೂಲಭೂತವಾದಿಗಳು ಹಾಗೂ ಕೋಮುವಾದಿಗಳಿಗೆ ತಕ್ಕ ಪಾಠವನ್ನು ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಕಲಿಸಬೇಕಿದೆ. ಪ್ರಗತಿಪರ ಚಿಂತನೆಗಳ ಮೂಲಕ ರಾಜಕಾರಣ ಮಾಡುತ್ತಿರುವ ದಲಿತ ಮುಖಂಡರು ಹಾಗೂ ಸಾರ್ವಜನಿಕ ಜೀವನದಲ್ಲಿ ಬದ್ಧತೆಯನ್ನುಳ್ಳ ಸಂಘ ಸಂಸ್ಥೆಗಳ ಮುಖಂಡರು ಕಾಂಗ್ರೆಸ್ಸನ್ನು ಸಂಪೂರ್ಣವಾಗಿ ಬೆಂಬಲಿಸಬೇಕು. ಪುಟ್ಟಬಸವಯ್ಯ ಅವರು ನೂರಾರು ಬೆಂಬಲಿಗರೊಂದಿಗೆ ಪಕ್ಷಕ್ಕೆ ಮರಳುತ್ತಿರುವುದು ಹೊಸದೊಂದು ಶಕ್ತಿಯಾಗಲಿದೆ ಎಂದು ತಿಳಿಸಿದರು.
ಸೇರ್ಪಡೆಗೊಂಡ ಬೆಂಬಲಿಗರು: ಮಾದಾಪುರ ಗ್ರಾಪಂ ಉಪಾಧ್ಯಕ್ಷೆ ನಳಿನಾ ಸೋಮಣ್ಣ, ಸದಸ್ಯರಾದ ರತ್ನಮ್ಮ, ಪುಟ್ಟಮಾದಯ್ಯ, ಸಿದ್ದರಾಜು, ಬಸವರಾಜು, ಮಹದೇವಸ್ವಾಮಿ, ತಾಪಂ ಮಾಜಿ ಸದಸ್ಯ ಬಸವರಾಜು, ಮುಖಂಡರಾದ ರವಿ, ನಾಗರಾಜು, ಶಿವಣ್ಣ, ಪುರುಷೋತ್ತಮ ಸೇರಿದಂತೆ ನೂರಾರು ಮುಖಂಡರು ಮಹದೇವಪ್ಪ ಅವರನ್ನು ಬೆಂಬಲಿಸಿ ಪುಟ್ಟಬಸವಯ್ಯ ನೇತೃತ್ವದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಕಾಂಗ್ರೆಸ್ ಯುವ ಮುಖಂಡ ಸುನೀಲ್ ಬೋಸ್, ಕೆಪಿಸಿಸಿ ಉಪಾಧ್ಯಕ್ಷ ಹೊನ್ನನಾಯಕ, ಪ.ಜಾತಿ ವಿಭಾಗದ ಸಂಚಾಲಕ ಕಾಳಯ್ಯ, ಮಂಡಲ ಪಂಚಾಯಿತಿ ಮಾಜಿ ಪ್ರಧಾನ ಎಂ.ಡಿ.ಬಸವರಾಜು, ದಸಂಸ ಜಿಲ್ಲಾ ಸಂಚಾಲಕ ಆಲಗೂಡು ಶಿವಕುಮಾರ್, ಜಿಪಂ ಸದಸ್ಯ ಮಂಜುನಾಥನ್, ತಾಪಂ ಅಧ್ಯಕ್ಷ ಚಲುವರಾಜು, ಮಾಜಿ ಅಧ್ಯಕ್ಷ ಎಂ.ಮಲ್ಲಿಕಾರ್ಜುನಸ್ವಾಮಿ, ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಕೆ.ವಜ್ರೆàಗೌಡ ಇತರರರು ಹಾಜರಿದ್ದರು.
ಇಂದು ಹೆಚ್‌ಸಿಎಂ ನಾಮಪತ್ರ: ತಿ.ನರಸೀಪುರ ಮೀಸಲು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಸಚಿವ ಡಾ.ಎಚ್.ಸಿ.ಮಹದೇವಪ್ಪ ಸೋಮವಾರ ನಾಮಪತ್ರ ಸಲ್ಲಿಸಲಿದ್ದಾರೆ. ಬೆಳಗ್ಗೆ 10 ಘಂಟೆಗೆ ಶ್ರೀಗುಂಜಾ ನರಸಿಂಹಸ್ವಾಮಿ ದೇವಾಲಯದ ಬಳಿ ಪೂಜೆ ಸಲ್ಲಿಸಿದ ಬಳಿಕ ತಾಲೂಕು ಕಚೇರಿ ಕಟ್ಟಡ ಮಿನಿ ವಿಧಾನಸೌಧಕ್ಕೆ ಮೆರವಣಿಗೆಯಲ್ಲಿ ತೆರಳಿ ಚುನಾವಣಾಧಿಕಾರಿಗಳಿಗೆ ಉಮೇದುವಾರಿಕೆ ಸಲ್ಲಿಸುವರು. ಪಕ್ಷದ ಚುನಾಯಿತ ಜನಪ್ರತಿನಿಧಿಗಳು, ಕಾರ್ಯಕರ್ತರು ಹಾಗೂ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜಿಪಂ ಸದಸ್ಯ ಮಂಜುನಾಥನ್ ಪ್ರಕಟಣೆಯಲ್ಲಿ ಕೋರಿದ್ದಾರೆ.