Advertisement
ಅದೊಂದು ದಿನ ತನ್ನ ಹೆಂಡತಿಯಾದ ಮದನಮಂಜರಿಯೊಂದಿಗೆ ವನವಿಹಾರಕ್ಕೆ ಹೋಗಿದ್ದ ಪ್ರವೀರ ಅವಸರದಲ್ಲಿ ಹಿಂದಿರುಗಿ ಬಂದ. “ಪಿತಾಶ್ರೀ, ಇಂದು ನಮ್ಮ ವನದಲ್ಲಿ ಹಸ್ತಿನಾವತಿಯ ಪಾಂಡವರ ಅಶ್ವಮೇಧದ ಕುದುರೆಯನ್ನು ನೋಡಿದೆ. ಅದರ ಹಣೆಯಲ್ಲಿ “ಬಲವುಳ್ಳವರು ಕಟ್ಟಿ ಯುದ್ಧ ಮಾಡಿ. ಬಲವಿಲ್ಲದವರು ಕಪ್ಪ ಕಾಣಿಕೆಯನ್ನು ಕೊಟ್ಟು ಶರಣಾಗಿ’ ಎನ್ನುವ ಬರಹವಿತ್ತು. ಕುದುರೆಯ ಬೆಂಗಾವಲಿಗಾಗಿ ಅರ್ಜುನ ಬಂದಿರುವನೆಂಬ ವಿಷಯವೂ ತಿಳಿಯಿತು.
Related Articles
Advertisement
ಆತ ನನ್ನ ಅಪೇಕ್ಷೆಯನ್ನು ಮನ್ನಿಸಿ ಬಂದು, ತನ್ನ ಪ್ರತಾಪವನ್ನು ತೋರಿಸಿದ. ಆದರೆ ಯುದ್ಧದಲ್ಲಿನ ಪರಿಣಾಮ ನನ್ನ ಅಪೇಕ್ಷೆಗಿಂತ ಬೇರೆಯೇ ಆಯಿತು! ಎದುರಾಳಿಯಾಗಿ ಬಂದ ಅರ್ಜುನ ಅಗ್ನಿಯನ್ನು ಕುರಿತು, “ನಿನ್ನ ಮಗಳಾದ ಪಾಂಚಾಲಿಯ ಗಂಡ ನಾನು. ಅದ್ದರಿಂದ ನಿನಗೆ ಅಳಿಯ. ಅಲ್ಲದೆ ನಿನಗೆ ಖಾಂಡವ ವನವನ್ನು ಸಮರ್ಪಿಸಿ, ನಿನ್ನನ್ನು ಮೆಚ್ಚಿಸಿದವ ನಾನು. ಇಂದು ನಿನ್ನತ್ತೆಯ ಸಂತೃಪ್ತಿಗೆ ಬೇಕಾಗಿ ನಮ್ಮ ಮೇಲೆ ನಿನ್ನ ಪ್ರತಾಪವನ್ನು ತೋರುವುದು ತರವಲ್ಲ. ಅನುಗ್ರಹಿಸು’ ಎಂದು ಬೇಡಿದ.
ಅಗ್ನಿ ಅರ್ಜುನನಿಗೆ ಒಲಿದುಬಿಟ್ಟ! ಯುದ್ಧವನ್ನು ಪ್ರಾರಂಭಿಸಿ ಆಗಿತ್ತು. ಅರ್ಧದಲ್ಲಿ ನಿಲ್ಲಿಸುವಂತಿರಲಿಲ್ಲ. ಸುನಂದೆಯ ಮಗ ಪ್ರವೀರ ತನ್ನ ಶಕ್ತಿ ಮೀರಿ ಹೋರಾಡಿ, ಯುದ್ಧದಲ್ಲಿ ಸಾವನ್ನಪ್ಪಿದ. ಪುತ್ರ ಶೋಕದಿಂದ ಸುನಂದೆ ಕಂಗೆಟ್ಟಳು. ನೀಲಧ್ವಜರೂ ಗಾಯಗೊಂಡು ಹಿಂದಿರುಗಿದರು. ಆಗಲೂ ನೀಲಧ್ವಜರಿಗೆ ಅರ್ಜುನನೊಂದಿಗೆ ಸಂಧಿಯದೇ ಕನಸು. ಮಗ ಪ್ರವೀರನನ್ನು ಕೊಂದ ಅರ್ಜುನನ ಮೇಲೆ ನನಗೆ ತೀವ್ರ ಅಸಮಾಧಾನವಾಗಿತ್ತು.
“ಮಗ ಪ್ರವೀರನನ್ನು ರಕ್ಷಿಸಲಂತೂ ಆಗಲಿಲ್ಲ. ಕಡೇಪಕ್ಷ ಮಗನನ್ನು ಕೊಂದ ಆ ಅರ್ಜುನನಿಗೆ ಸೋಲುಣ್ಣಿಸುವಲ್ಲಿಯೂ ನಿಮ್ಮ ಅಸಮರ್ಥತೆ ತೋರಿದಿರಲ್ಲ. ಛೀ! ಹೇಡಿಗಳು ನೀವು. ನಿಮ್ಮಿಂದ ಏನಾದೀತು? ನಾನೇ ಮಗನ ಸಾವಿನ ಸೇಡನ್ನು ತೀರಿಸಿಕೊಳ್ಳುತ್ತೇನೆ’ ಬಿರುನುಡಿಗಳನ್ನು ನುಡಿದು ಅರಮನೆಯಿಂದ ಹೊರಟುಬಿಟ್ಟೆ. ಗಂಗಾನದಿ ಎದುರಾಯಿತು. ಗಂಗೆಯ ಬಗೆಗೆ ಕ್ರೋಧ ಉಕ್ಕಿತು. ಅಂಬಿಗರು ನನ್ನನ್ನು ಆಚೆಯ ದಡಕ್ಕೆ ಕರೆದೊಯ್ಯಲು ಸಿದ್ಧರಾದರು.
“ಗಂಗೆಯ ಒಂದು ಹನಿ ನೀರೂ ನನ್ನ ಮೈಗೆ ತಾಕದಂತೆ ಈ ನದಿಯನ್ನು ಉತ್ತರಿಸಬೇಕೆಂಬ ನನ್ನಿಚ್ಛೆ. ಆ ರೀತಿಯಲ್ಲಿ ಯಾರು ನನ್ನನ್ನು ಆಚೆಯ ತೀರಕ್ಕೆ ಕರೆದೊಯ್ಯಬಲ್ಲಿರಿ?’ ಎಂದೆ. ಅಂಬಿಗರು ಅಚ್ಚರಿಯಿಂದ ಪರಸ್ಪರ ಮುಖಮುಖ ನೋಡಿಕೊಂಡರು. ರಾಣಿಯಾದ ನನ್ನಿಂದ ತಮಗೆ ಇನ್ನು ಯಾವ ಶಿಕ್ಷೆ ಕಾದಿದೆಯೋ ಎನ್ನುವ ಭಯದಿಂದ ನಡುಗುತ್ತಾ ಕೈಮುಗಿದು ನಿಂತರು. ನನ್ನ ಕೋರಿಕೆಯನ್ನು ಪೂರೈಸಲು ಯಾರೂ ಮುಂದೆ ಬರಲಿಲ್ಲ. ನನ್ನ ಕೋರಿಕೆಯನ್ನು ಕೇಳಿ ಆಶ್ಚರ್ಯಗೊಂಡ ಗಂಗೆ ನನ್ನೆದುರು ಪ್ರತ್ಯಕ್ಷಳಾದಳು. “ಯಾಕೆ ಜ್ವಾಲೆ ಹಾಗೆನ್ನುವೆ? ಈ ಲೋಕದ ಜನರಿಗೆ ಗಂಗೆ ಎಂದರೆ ಎಷ್ಟೊಂದು ಭಕ್ತಿ ಭಾವವಿದೆ. ಎಲ್ಲರೂ ನನ್ನಲ್ಲಿ ಮಿಂದು ತಮ್ಮ ಪಾಪವನ್ನು ಕಳೆದುಕೊಳ್ಳಲು ಬಯಸುತ್ತಾರೆ.
ಆದರೆ ನೀನೇಕೆ ಹೀಗೆ ಹೇಳುತ್ತಿರುವೆ?’ ಎಂದಳು. “ಇದೇನಿದು ಗಂಗೆ? ಕುರುಕ್ಷೇತ್ರ ಯುದ್ಧದ ವಿಷಯಗಳನ್ನು ನೀನು ಪೂರ್ಣವಾಗಿ ಮರೆತೇ ಬಿಟ್ಟಿರುವೆ ಎಂದು ಕಾಣಿಸುತ್ತಿದೆ. ಶಿಖಂಡಿಯನ್ನು ಎದುರು ನಿಲ್ಲಿಸಿ ಮೋಸದಿಂದ ನಿನ್ನ ಮಗ ಭೀಷ್ಮನನ್ನು ಕೊಲ್ಲಿಸಿದ ಆ ಅರ್ಜುನನ ಮೇಲೆ ನಿನಗೆ ಸೇಡಿಲ್ಲವೇ? ಆ ಸೇಡು ತೀರಿಸಿಕೊಳ್ಳುವಲ್ಲಿ ನೀನು ಅಸಮರ್ಥಳಾಗಿರುವೆ. ಅರ್ಜುನನ ಮೇಲೆ ದ್ವೇಷ ತೀರಿಸಿಕೊಳ್ಳಲು ಹೊರಟಿರುವ ನನಗೆ ನಿನ್ನಂತಹ ಹೇಡಿಯ ಸ್ಪರ್ಶವೂ ನಿಷಿದ್ಧ. ನಿನಗೆ ನಿನ್ನ ಮಗನ ಮೇಲೆ ಅಭಿಮಾನ, ಪ್ರೀತಿ ಇದ್ದದ್ದೇ ಹೌದಾದರೆ, ಅರ್ಜುನನ ಮೇಲೆ ಸೇಡು ತೀರಿಸಿಕೊ, ನೋಡೋಣ…’ ಎಂದು ಸವಾಲು ಹಾಕಿದೆ.
ಗಂಗೆಗೆ ನನ್ನ ಮಾತಿನಲ್ಲಿ ಸತ್ಯ ಕಂಡಿತು. ಆಕೆಯೊಳಗಿನಿಂದ ದ್ವೇಷದ ಜ್ವಾಲೆ ಜ್ವಲಿಸಿತು. ಕ್ಷಣ ಮಾತ್ರವೂ ವಿಳಂಬಿಸದೆ, “ನನ್ನ ಮಗನನ್ನು ಮೋಸದಿಂದ ಕೊಂದ ಅರ್ಜುನನಿಗೆ ಅವನ ಮಗನಿಂದಲೇ ಮರಣ ಬರಲಿ’ ಎಂದು ಶಪಿಸಿಬಿಟ್ಟಳು! ಇದನ್ನೇ ತಾನೆ ನಾನು ಬಯಸಿದ್ದು? ಸ್ವಲ್ಪ ಸಮಾಧಾನವಾಯಿತಾದರೂ ಪ್ರವೀರನ ಮುಖ ಕಣ್ಮುಂದೆ ಬಂದು ದ್ವೇಷದ ಜ್ವಾಲೆ ಮತ್ತೆ ಪ್ರಜ್ವಲಿಸಿತು. ಪುತ್ರಶೋಕದ ಪ್ರತೀಕಾರಕ್ಕೆ ಮನಸ್ಸು ಹಾತೊರೆಯಿತು. ನೇರ ಯುದ್ಧದಲ್ಲಿ ನನಗೆ ಅರ್ಜುನ ನೊಡನೆ ಹೋರಾಡಿ ಗೆಲ್ಲಲು ಸಾಧ್ಯವಿಲ್ಲವೆಂಬುದು ಗೊತ್ತಿತ್ತು. ಪರ್ಯಾಯ ಮಾರ್ಗವೇನು ಎಂಬ ಬಗ್ಗೆ ಯೋಚಿಸಿದೆ. ನನ್ನ ಆದೇಶದಂತೆ ಚಿತೆ ಸಿದ್ಧವಾಯಿತು. “ಅರ್ಜುನನ ಮಗ ಬಬ್ರುವಾಹನನ ಬತ್ತಳಿಕೆಯಲ್ಲಿನ ಬಾಣವಾಗಿ ಸೇರಿ ಅರ್ಜುನನ ಪ್ರಾಣ ತೆಗೆಯುತ್ತೇನೆ’ – ಎಂದು ಪ್ರತಿಜ್ಞೆಗೈದೆ.
ಕ್ಷಣದಲ್ಲಿಯೇ ಅಗ್ನಿಪ್ರವೇಶವನ್ನು ಮಾಡಿದೆ. ನಾನೀಗ ಮಾನವ ರೂಪಿನ ಜ್ವಾಲೆಯಲ್ಲ. ಅರ್ಜುನನ ಮೇಲಿನ ಸೇಡನ್ನು ತೀರಿಸಿಕೊಳ್ಳುವುದಕ್ಕೆ ಬೇಕಾಗಿ ಬಬ್ರುವಾಹನನ ಬತ್ತಳಿಕೆಯನ್ನು ಸೇರಿಕೊಳ್ಳಲು ಹೊರಟಿರುವ ಬಾಣ. ಅಜ್ಞಾತವಾಗಿ ಅಲ್ಲಿದ್ದು ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದೇನೆ. ಸಕಾಲದಲ್ಲಿ ಬಬ್ರುವಾಹನ ಬಿಲ್ಲಿನಿಂದ ಚಿಮ್ಮಿ, ಆ ದುರುಳ ಅರ್ಜುನನ ಪ್ರಾಣ ತೆಗೆಯುತ್ತೇನೆ. ಆಗಲೇ ನನ್ನ ಹಾಗೂ ನನ್ನ ಮಗ ಪ್ರವೀರನ ಆತ್ಮಕ್ಕೆ ಶಾಂತಿ.
– ಸುರೇಖಾ ಭೀಮಗುಳಿ