ಬೆಂಗಳೂರು: ರಾಜ್ಯದಲ್ಲಿ ವಿವಾದಕ್ಕೆ ಕಾರಣವಾದ ಪಡಿತರ ಪರಿಷ್ಕರಣೆ ವಿಚಾರಕ್ಕೆ ಸಂಬಂಧಿಸಿದಂತೆ ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ (K. H. Muniyappa) ಗುರುವಾರ (ನ.21) ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಹಲವು ವಿಚಾರಗಳಿಗೆ ಸ್ಪಷ್ಟನೆ ನೀಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಒಟ್ಟು 1,50,59,431 ಕಾರ್ಡ್ಗಳಿವೆ. ಸಿಎಂ ಸಿದ್ದರಾಮಯ್ಯ ಸೂಚನೆ ಮೇರೆಗೆ ಸದ್ಯ 1,02,509 ಕಾರ್ಡ್ಗಳನ್ನು ಪರಿಷ್ಕರಣೆ ಮಾಡಿದ್ದೇವೆ. ಉಳಿದ ಎಲ್ಲ ಬಿಪಿಎಲ್, ಎಪಿಎಲ್ ಕಾರ್ಡ್ಗಳನ್ನು ಯಥಾಸ್ಥಿತಿ ಕಾಯ್ದುಕೊಳ್ಳಲು ನಿರ್ಧರಿಸಲಾಗಿದೆ ಎಂದರು.
ಕೇಂದ್ರ ಸರ್ಕಾರದ ನಿಯಮಗಳ ಅನ್ವಯ ಪರಿಶೀಲನೆ ಮಾಡಿ ಪರಿಷ್ಕರಣೆ ಮಾಡಲಾಗಿದೆ. ಅನರ್ಹ ಎಂಬ ಕಾರ್ಡ್ಗಳನ್ನು ತಾತ್ಕಾಲಿಕವಾಗಿ ಅಮಾನತ್ತಿನಲ್ಲಿ ಇಡಲಾಗಿದೆ. ಬಿಪಿಎಲ್ ಗೆ ಅನರ್ಹರು ಎಂದು ಕಂಡು ಬಂದಿರುವ ಕಾರ್ಡ್ ಗಳನ್ನು ಎಪಿಎಲ್ ಗೆ ಸೇರಿಸಲಾಗಿದೆ. ಬಿಪಿಎಲ್ ಗೆ ಅರ್ಹರಿದ್ದೂ ಕೂಡ ಎಪಿಎಲ್ ಗೆ ಸೇರ್ಪಡೆಯಾಗಿದ್ದರೆ ಅಂಥವರಿಗೆ ಮರು ಹಂಚಿಕೆ ಮಾಡುತ್ತೇವೆ ಎಂದು ಮುನಿಯಪ್ಪ ಹೇಳಿದರು.
ಬಿಪಿಎಲ್ ಕಾರ್ಡ್ ರದ್ದಾದವರಿಗೆ ಏಳು ದಿನದೊಳಗೆ ಅದೇ ಐಡಿಯಲ್ಲಿ ಲಾಗಿನ್‌ಗೆ ಅವಕಾಶ ಮಾಡಿಕೊಡುತ್ತೇವೆ. ತೆರಿಗೆದಾರರು ಹಾಗೂ ಸರ್ಕಾರಿ ನೌಕರರ ಕಾರ್ಡ್ ರದ್ದು ಮಾಡಿದ್ದೇವೆ, ಹೊರತು ಬೇರೆಯವರ ಕಾರ್ಡ್ ಯಥಾವತ್ತಾಗಿ ಮುಂದುವರಿಯಲಿದೆ ಎಂದರು.
ಯಾವುದೇ ಅರ್ಹ ಕಾರ್ಡ್ ಗಳನ್ನು ರದ್ದು ಮಾಡಲಾಗುವುದಿಲ್ಲ. ಎಲ್ಲಾ ಗೊಂದಲಗಳ ಹೊಣೆಯನ್ನು ನಾನೇ ಹೊರುತ್ತೇನೆ. ಇದರಲ್ಲಿ ಅಧಿಕಾರಿಗಳ ತಪ್ಪಿಲ್ಲ. ಅಧಿಕಾರಿಗಳ ಸಭೆ ನಡೆಸಿ ಅವರಿಗೆ ಸೂಕ್ತ ಸಲಹೆ ನೀಡುತ್ತೇನೆ ಎಂದು ಮುನಿಯಪ್ಪ ಹೇಳಿದರು.