Advertisement
“ಪುಟಿನ್ ಸಾರಿರುವ ಯುದ್ಧವು ಅಪ್ರಚೋದಿತವಾಗಿದೆ. ರಾಜತಾಂತ್ರಿಕತೆಯ ಎಲ್ಲ ಪ್ರಯತ್ನಗಳನ್ನೂ ಅವರು ತಿರಸ್ಕರಿಸಿದ್ದಾರೆ. ಪಾಶ್ಚಿಮಾತ್ಯ ರಾಷ್ಟ್ರಗಳು ಹಾಗೂ ನ್ಯಾಟೋ ಏನೂ ಮಾಡುವುದಿಲ್ಲ ಎಂದು ಪುಟಿನ್ ಭಾವಿಸಿದ್ದರು. ಆದರೆ, ಪುಟಿನ್ ಲೆಕ್ಕಾಚಾರ ತಪ್ಪಾಗಿದೆ. ನಾವು ರೆಡಿಯಾಗಿಯೇ ಇದ್ದೆವು’ ಎಂದು ಹೇಳುವ ಮೂಲಕ ಬೈಡೆನ್, ರಷ್ಯಾ ವಿರುದ್ಧ ಮತ್ತಷ್ಟು ಕ್ರಮ ಕೈಗೊಳ್ಳುವ ಸುಳಿವು ನೀಡಿದ್ದಾರೆ. ಅಲ್ಲದೇ, ಉಕ್ರೇನ್ ಮೇಲೆ ದಾಳಿ ನಡೆಸಿದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತಮ್ಮ ಕುಕೃತ್ಯಕ್ಕೆ ಬೆಲೆ ತೆರಲೇಬೇಕು ಎಂದಿದ್ದಾರೆ.
ಯುದ್ಧದ ಪರಿಣಾಮವಾಗಿ ಜಗತ್ತಿನಾದ್ಯಂತ ಕಚ್ಚಾ ತೈಲದ ಬೆಲೆ ಏರಿಕೆ ತಡೆಯುವ ನಿಟ್ಟಿನಲ್ಲಿ 30 ಶತಕೋಟಿ ಬ್ಯಾರೆಲ್ ಕಚ್ಚಾ ತೈಲವನ್ನು ವ್ಯೂಹಾತ್ಮಕ ಸಂಗ್ರಹದಿಂದ ಬಿಡುಗಡೆ ಮಾಡುವುದಾಗಿ ಬೈಡೆನ್ ಘೋಷಿಸಿದ್ದಾರೆ. ಜತೆಗೆ, ರಷ್ಯಾದ ವಿಮಾನಗಳಿಗೆ ಅಮೆರಿಕ ವಾಯುಪ್ರದೇಶದಲ್ಲಿ ಹಾರಾಟ ನಿಷೇಧದ ಘೋಷಣೆಯನ್ನೂ ಮಾಡಿದ್ದಾರೆ. ಆದರೆ, ಭಾರತಕ್ಕೆ ಆಗಮಿಸುವ ಕೆಲವು ವಿಮಾನಗಳು ರಷ್ಯಾದ ವಾಯು ಪ್ರದೇಶವನ್ನು ಬಳಸಿಕೊಂಡು ಸಾಗುತ್ತಿವೆ. ಹೊಸ ನಿರ್ಧಾರದಿಂದಾಗಿ, ಅಮೆರಿಕ ಮತ್ತು ಭಾರತ ನಡುವಿನ ವಿಮಾನ ಯಾನದ ಅವಧಿ ಇನ್ನೂ ಹೆಚ್ಚಾಗಲಿದೆ.
Related Articles
ವಿಶೇಷವೆಂದರೆ, ಇದೇ ಮೊದಲ ಬಾರಿಗೆ ಅಮೆರಿಕ ಅಧ್ಯಕ್ಷರ ಭಾಷಣದ ವೇಳೆ ಇಬ್ಬರು ಪ್ರಭಾವಿ ಮಹಿಳೆಯರು ವೇದಿಕೆ ಮೇಲೆ ಉಪಸ್ಥಿತರಿದ್ದರು. ಉಪಾಧ್ಯಕ್ಷ ಕಮಲಾ ಹ್ಯಾರಿಸ್ ಮತ್ತು ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರು ಬೈಡೆನ್ ಹಿಂದೆಯೇ ನಿಂತಿದ್ದರು. ತಮ್ಮ ಚೊಚ್ಚಲ ಭಾಷಣದ ವೇಳೆ ಬೈಡೆನ್ ಅವರು ಎಡವಟ್ಟು ಮಾಡಿಕೊಂಡ ಸನ್ನಿವೇಶವೂ ನಡೆಯಿತು. “ರಷ್ಯಾ ಆಕ್ರಮಣದ ವಿರುದ್ಧ ಎಲ್ಲ ಉಕ್ರೇನಿಯನ್ನರೂ ಒಗ್ಗಟ್ಟಾಗಿ ನಿಲ್ಲಬೇಕು’ ಎಂದು ಹೇಳುವಾಗ “ಉಕ್ರೇನಿಯನ್ನರು’ ಎಂಬ ಪದದ ಬದಲಿಗೆ “ಇರಾನಿಯನ್ನರು’ ಎಂದು ಬಳಸಿದರು. ಈ ವೇಳೆ, ಹಿಂದೆ ನಿಂತಿದ್ದ ಕಮಲಾ, “ಉಕ್ರೇನಿಯನ್ನರು’ ಎಂದು ಸರಿಪಡಿಸಲು ಯತ್ನಿಸಿದರಾದರೂ, ಅದು ಬೈಡೆನ್ ಕಿವಿಗೆ ಬೀಳಲೇ ಇಲ್ಲ.
Advertisement
“ಬೆಂಬಲ’ ಸೂಚಕ ಉಡುಗೆ!ಅಧ್ಯಕ್ಷರ ಭಾಷಣದ ವೇಳೆ ಅಮೆರಿಕದ ಪ್ರಥಮ ಮಹಿಳೆ ಜಿಲ್ ಬೈಡೆನ್ ಅವರು ತಮ್ಮ ಉಡುಗೆ-ತೊಡುಗೆಯ ಮೂಲಕವೇ “ಉಕ್ರೇನ್‌ಗೆ ಬೆಂಬಲ’ ವ್ಯಕ್ತಪಡಿಸಿದ್ದು ಕಂಡುಬಂತು. ಉಕ್ರೇನ್‌ನ ಧ್ವಜದ ಬಣ್ಣವಾದ “ನೀಲಿ’ ಬಣ್ಣದ ತುಂಬುತೋಳಿನ ಉಡುಪನ್ನು ಜಿಲ್ ಧರಿಸಿದ್ದರು. ಅಷ್ಟೇ ಅಲ್ಲ, ಬಲ ತೋಳಿನ ಅಂಗೈಯ ಭಾಗದಲ್ಲಿ “ಸೂರ್ಯಕಾಂತಿ’ ಹೂವಿನ ಪುಟ್ಟದಾದ ಎಂಬ್ರಾಯಿಡರಿ ವರ್ಕ್ ಕೂಡ ಎದ್ದುಕಾಣುತ್ತಿತ್ತು. ವಿಶೇಷವೆಂದರೆ, ಸೂರ್ಯಕಾಂತಿಯು ಉಕ್ರೇನ್‌ನ ರಾಷ್ಟ್ರೀಯ ಪುಷ್ಪವಾಗಿದೆ. ಜಿಲ್ ಮಾತ್ರವಲ್ಲದೇ, ಹೌಸ್ ಮತ್ತು ಸೆನೇಟ್‌ನಲ್ಲಿ ಹಲವರು ನೀಲಿ ಮತ್ತು ಹಳದಿ ಬಣ್ಣದ ರಿಬ್ಬನ್‌ಗಳನ್ನು ಧರಿಸುವ ಮೂಲಕ “ಉಕ್ರೇನ್ ಜತೆಗೆ ನಾವಿದ್ದೇವೆ’ ಎಂಬುದನ್ನು ತೋರಿಸಿದರು.