Advertisement

puthige paryaya 2024; ತಿರುವು ಸಾರಿದ “ಸಾಕ್ಷೀಕಲ್ಲು

11:12 AM Jan 04, 2024 | Team Udayavani |

ಉಡುಪಿ: ಉಡುಪಿ ರಥಬೀದಿ ಸುತ್ತಿದವರು ಶ್ರೀಅನಂತೇಶ್ವರ ದೇವಸ್ಥಾನದ ಎದುರಿಗಿರುವ ಸುಮಾರು 20 ಅಡಿ ಎತ್ತರದ ಪ್ರಾಚೀನ ಕಲ್ಲು ಕಂಬವಿರುವುದು ತೀಕ್ಷ್ಣದೃಷ್ಟಿಯಿಂದ ನೋಡಿದರೆ ಕಾಣಬಹುದೇ ವಿನಾ ಅಂಗಡಿಮುಂಗಟ್ಟುಗಳ ನಡುವೆ ಕಾಣದೆ ಹೋದರೂ ಅಚ್ಚರಿ ಪಡಬೇಕಾಗಿಲ್ಲ. ನಾವು ಮಾಸ್ತಿ ಕಲ್ಲು, ವೀರಗಲ್ಲು ಇತ್ಯಾದಿ ಹೆಸರುಗಳನ್ನು ಕೇಳಿದ್ದೇವೆ. ಈ ಕಂಬವನ್ನು
“ಸಾಕ್ಷಿಗಲ್ಲು’ ಎಂದರೆ ಹೆಚ್ಚು ಪ್ರಸ್ತುತವಾಗುತ್ತದೆ.

Advertisement

ಇದು ಅದೆಷ್ಟು ಮಳೆಗಾಲವನ್ನು ಕಂಡಿದೆಯೋ ದೇವರೇ ಬಲ್ಲ! ಆದರೂ ಗಟ್ಟಿಮುಟ್ಟಾಗಿ ಇದೆ. ಯಾವುದೇ ಅಳಿದರೂ ನನ್ನ ಸಾಕ್ಷಿ ಅಜರಾಮರ ಎಂದು ಸಾರುತ್ತದೋ ಎಂಬಂತಿದೆ, ಆ ಒಳದೃಷ್ಟಿಯಿಂದ ನೋಡಿದರೆ. ಈ ಕಲ್ಲು ಕಂಬದ ಸುತ್ತಲಿನ ಭಾಗ ಕೆಲವೆಡೆ ಚೌಕಾಕಾರದಲ್ಲಿಯೂ, ಕೆಲವು ಭಾಗ ದುಂಡಗೆಯೂ (ಮದ್ದಲೆಯಾಕಾರ) ಇದೆ. ಇದನ್ನು ಬುದ್ಧಿ ನೆಟ್ಟಗೆ ಇದ್ದ ಧಾಂಡಿಗನೂ ಸರಸರನೆ ಹತ್ತುವುದು ಕಷ್ಟ. ಇನ್ನು ಮಂದಬುದ್ಧಿಯವನೊಬ್ಬ ಹತ್ತುವುದು ಸಾಮಾನ್ಯವೇ? ಸುಮ್ಮನೆ ಹತ್ತಿದನೆ? ಇಲ್ಲ.

ಕಂಬದ ಮೇಲ್ಭಾಗ ನಿಂತು ನರ್ತಿಸಿದನಂತೆ. ಯಾವಾಗ? ಸುಮಾರು ಎಂಟು ಶತಮಾನಗಳಿಗೂ ಹಿಂದೆ… ಈಗ ಎಲ್ಲದಕ್ಕೂ ಸಾಕ್ಷಿ ಬೇಕಲ್ಲ? “ತತ್‌ ಪ್ರೀತಯೇ ರಜತಪೀಠ ಪುರಾಧಿವಾಸೀ| ದೇವೋ ವಿವೇಶ ಪುರುಷಂ ಶುಭ ಸೂಚನಾಯ|| ಉತ್ತುಂಗ ಕೇತು ಶಿಖರೇ ಸ ಕೃತಾಂಗ ಹಾರೋ| ರಂಗಾಂತರೇ ನಟ ಇವಾಖಿಲ ವಿಸ್ಮಯಾತ್ಮಾ||’ ಈ ಮಾತು ನಾರಾಯಣ ಪಂಡಿತಾಚಾರ್ಯರ ಕೃತಿ “ಮಧ್ವವಿಜಯ’ದ್ದು.

ಆ ಕಾಲದ ಘಟನೆಯನ್ನು ಸಾರುವ ಸಾಕ್ಷಿ. ಮಂದ ಬುದ್ಧಿಯ ಈತನನ್ನು “ಅಕುಶಲಂ’ ಎಂದು ಕರೆದಿದ್ದಾರೆ. ಕುಶಲ ಅಂದರೆ ಬುದ್ಧಿವಂತ. ಇದರ ವಿರುದ್ಧಾರ್ಥ ಪ್ರಯೋಗ “ಅಕುಶಲ’= ದಡ್ಡ, ಹುಂಬ…ಆತನು ಹೇಳಿದ್ದಾದರೂ ಏನನ್ನು? “ಎಲ್ಲ ಜನರಿಗೆ ಹಿತವ ತರಬಲ್ಲವನು, ಎಲ್ಲವನ್ನು ಬಲ್ಲವನು ಸದ್ಯದಲ್ಲಿಯೇ ಬರಲಿದ್ದಾನೆ”. ಹಾಗಿದ್ದರೆ ಬರುವವರಾದರೂ ಯಾರು? ಈತ ಹೇಳುವುದಕ್ಕೆ ಹಿಂದೆಯೇ ಉಡುಪಿ ಒಂದು ಧಾರ್ಮಿಕ ನಗರ. ಆದ್ದರಿಂದಲೇ ಉಡುಪಿಗೆ ಪರ್ಯಾಯ ಹೆಸರು ರಜತಪೀಠಪುರ.
ತುಳುನಾಡಿನ ಸಪ್ತಕ್ಷೇತ್ರಗಳಲ್ಲಿ ಮೊದಲ ಸ್ಥಾನವನ್ನು (ರೂಪ್ಯಪೀಠಂ ಕುಮಾರಾದ್ರಿಃ ಕುಂಭಾಸೀ ಚ ಧ್ವಜೇಶ್ವರಃ| ಕ್ರೋಡ ಗೋಕರ್ಣಮೂಕಾಂಬಾಃ ಸಪ್ತೈತಾ ಮೋಕ್ಷದಾಯಿಕಾ||) ಪಡೆದಿದೆ.

ಈಗ ಹೇಗೆ ಮಕರಸಂಕ್ರಾಂತಿ ಉತ್ಸವಕ್ಕೆ ಉಡುಪಿ ಹೆಸರುವಾಸಿಯೋ ಆಗಲೂ ಮಕರಸಂಕ್ರಾಂತಿ ಉತ್ಸವಕ್ಕೆ ಹೆಸರುವಾಸಿ. ಈಗಲೂ ಮಕರಸಂಕ್ರಾಂತಿ ಉತ್ಸವಕ್ಕೆ ಅನಂತೇಶ್ವರ ಮತ್ತು ಚಂದ್ರಮೌಳೀಶ್ವರ ದೇವಸ್ಥಾನದ ಉತ್ಸವಮೂರ್ತಿಗಳು ರಥಾರೂಢರಾಗಿ ಬರುವುದನ್ನು ಕಂಡಾಗ ನಾವು ಹಿಂದೆ ಹಿಂದೆ ಮಾನಸಿಕವಾಗಿ ಹೋಗಬೇಕು. ನಾವು ಎಷ್ಟೇ ಹಿಂದಕ್ಕೆ ಸರಿದರೂ ನಾವು ಕಂಡ ನಮ್ಮ ತಾತನ ಕಾಲದವರೆಗೆ ಮಾನಸಿಕವಾಗಿ ಪ್ರಯಾಣಿಸಬಹುದು. ಅದಕ್ಕೂ ಹಿಂದೆ ಯೋಚಿಸುವುದೂ ಕಷ್ಟ. ಆದರೂ ಐತಿಹಾಸಿಕ ಪುರಾವೆಗಳು ಇರುವಾಗ ಪ್ರಯತ್ನಪಟ್ಟು ಆ ಕಾಲ, ಆ ಲೋಕಕ್ಕೆ ಹೋಗುವುದಕ್ಕೆ ಪ್ರಯತ್ನಿಸಬೇಕು. ಇದು ಸಾಂದರ್ಭಿಕವಾಗಿ ಮಾತ್ರ ಎಂಟು ಶತಮಾನದ ಹಿಂದೆ ಎಂದದ್ದು. ಅದಕ್ಕೂ ಹಿಂದೆ ಈ ನೆಲದ ಬೇರುಗಳಿವೆ. ನಮ್ಮ ಎತ್ತರ ಎಷ್ಟೋ ಅಷ್ಟು ಅಂಕವನ್ನು ಮಾತ್ರ ಇತರರಿಗೆ ಕೊಡಲು ಮನಸ್ಸು ಹಾತೊರೆಯುತ್ತದೆ.

Advertisement

ಕೆಲವು ಬಾರಿ ಇತರರನ್ನು ಹಿಂದಿಕ್ಕುವ ಭರದಲ್ಲಿ 2,000 ವರ್ಷಗಳ ಹಿಂದೆ ನಾಗರಿಕತೆಯೇ ಇರಲಿಲ್ಲ ಎಂಬುದನ್ನು ಪ್ರಯತ್ನಪಟ್ಟು ಸಾಕ್ಷಿಗಳನ್ನು ಕಲೆ ಹಾಕುತ್ತೇವೆ, ಅದಕ್ಕಾಗಿಯೇ ಟಿಎ, ಡಿಎ ಪಡೆದು ಮಹಾಪ್ರಬಂಧವನ್ನೂ ಮಂಡಿಸಿ ನೂರಾರು,
ಸಾವಿರಾರು, ಲಕ್ಷಾಂತರ, ಕೋಟ್ಯಂತರ ಜನರನ್ನು ನಂಬುವಂತೆ ಮಾಡುತ್ತೇವೆ. ಇರಲಿ ಬಿಡಿ, ಈ 800 ವರ್ಷಗಳ ಹಿಂದಿನ ಆ ಉತ್ಸವದಲ್ಲಿಯೇ ಪೆದ್ದನೊಬ್ಬ ಕಲ್ಲುಕಂಬವನ್ನು ಏರಿ ಈ ಸಾಕ್ಷಿ ನುಡಿದದ್ದು. ಇದಾದ ಕೆಲವು ಸಮಯದಲ್ಲಿ ಶ್ರೀಮನ್ಮಧ್ವಾಚಾರ್ಯರು ಜನಿಸಿದರು.

ಈ ಸಾಕ್ಷಿಗಲ್ಲು ಕೇವಲ ಧಾರ್ಮಿಕ, ಆಧ್ಯಾತ್ಮಿಕ ಸಂದೇಶಕ್ಕೆ ಮಾತ್ರ ಸೀಮಿತವಲ್ಲ, 1942ರ ಕ್ವಿಟ್‌ ಇಂಡಿಯಾ ಚಳವಳಿಯಲ್ಲಿ ಯು. ಶೇಷ ಶೇರಿಗಾರರೆಂಬ ಸ್ವಾತಂತ್ರ್ಯ ಯೋಧ ಪೊಲೀಸರ ಹದ್ದುಗಣ್ಣುಗಳಿಗೆ ಮಣ್ಣೆರಚಿ ರಾತೋರಾತ್ರಿ ಈ ಕಂಬವನ್ನೇರಿ ರಾಷ್ಟ್ರಧ್ವಜ ಹಾರಿಸಿ ಮನಸ್ಸಿನಲ್ಲೇ ಧ್ವಜವಂದನೆ ಸಲ್ಲಿಸಿ ಸ್ವತಂತ್ರ ಭಾರತದ ಉದಯದ ಕನಸು ಕಂಡದ್ದು ಮಾತ್ರವಲ್ಲ ಮೆಲ್ಲಗೆ ಉಸುರಿದರು ಕೂಡ. ಅವರಿಗೇನು ಹೆದರಿಕೆ ಎನ್ನಬಹುದು. ಕಂಬದ ಕೆಳಗೇ ಬ್ರಿಟಿಷ್‌ ಪೊಲೀಸ್‌ ಸರ್ಪಗಾವಲು ಇತ್ತೆಂಬ ಸತ್ಯವನ್ನು ಮರೆಯಬಾರದು. ಮತ್ತೆ ಐದು ವರ್ಷಗಳಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂತು. ಶೇಷರಂತೆ ಲಕ್ಷಾಂತರ, ಕೋಟ್ಯಂತರ ಜನರು ದೇಶಾದ್ಯಂತ ಹೀಗೆ ಆಶಿಸಿದ್ದರು. ಆದರೆ ಶೇಷರಂತೆ ಕೃತಿಯಲ್ಲಿ ತೋರಿದವರು ಅಲ್ಲಲ್ಲಿ ಕೆಲವು ಮಂದಿ ಇರಬಹುದು.. ಆದರೆ ನಿಸರ್ಗಕ್ಕೂ ನಿಯಮವಿದೆಯಲ್ಲ? ಅದು ಯಾವತ್ತೂ ಸತ್ಯಪರಾಧೀನ, ಸತ್ಯಪಕ್ಷಪಾತಿ ಮಾತ್ರವಲ್ಲ ಭಗವಂತ ಭಕ್ತಪರಾಧೀನನಲ್ಲವೆ? ಆದ್ದರಿಂದಲೇ ಶೇಷರಿಗೆ ನಿಸರ್ಗ (ದೇವ(ತೆ) ತಥಾಸ್ತು ಎಂದುತ್ತರಿಸಿತು.

ದೇಶದ ಸ್ವಾತಂತ್ರ್ಯವೆಂಬ “ದೊಡ್ಡ ಹೆರಿಗೆ’ಯಾದ ಕಾರಣ ಐದು ವರ್ಷ ಕಾಯಬೇಕಾಯಿತು. 1942ರ ಶೇಷ ಶೇರಿಗಾರರ ಸಾಕ್ಷಿಯನ್ನು “ಉದಯವಾಣಿ’ ದಿನಪತ್ರಿಕೆಯಲ್ಲಿ (16-08-1992) ದಾಖಲಿಸಿದವರು ಆಗಿನ ಸಂಪಾದಕರಾಗಿದ್ದ ಬನ್ನಂಜೆ ರಾಮಾಚಾರ್ಯರು. ಮಧ್ವಾಚಾರ್ಯರ ಆಗಮನಕ್ಕೂ ಹುಂಬ ಭವಿಷ್ಯ ನುಡಿದ ಬಳಿಕ ಕೆಲವು ಕಾಲ ಬೇಕಾಯಿತು… ಅದು 1238ರಲ್ಲಿ…ಮಧ್ವಾಚಾರ್ಯರ ಜನನ…

Advertisement

Udayavani is now on Telegram. Click here to join our channel and stay updated with the latest news.

Next