ಸುಮನಸಾ ಕೊಡವೂರು ತಂಡದವರು ಜ.6ರಂದು ಎಂ.ಜಿ.ಎಂ. ಕಾಲೇಜಿನಲ್ಲಿ ಪ್ರಸಿದ್ಧ ನಾಟಕಕಾರ ಗುರುರಾಜ ಮಾರ್ಪಳ್ಳಿ ಬರೆದು, ನಿರ್ದೇಶಿಸಿದ “ಪುಟುಗೋಸಿ ಮನುಷ್ಯ’ ಎಂಬ ಅಸಂಗತ ನಾಟಕವನ್ನು ಪ್ರದರ್ಶಿಸಿದ ರು. ವರ್ತಮಾನ ಕಾಲದ ಭೀಕರ ದುರಂತಗಳು, ರಾಜಕಾರಣ, ಧರ್ಮ, ವಿಜ್ಞಾನಗಳಿಂದ ಸಂಭವಿಸುತ್ತಿರುವ ಹಿನ್ನೆಲೆಯನ್ನು ಇಟ್ಟುಕೊಂಡು ಈ ನಾಟಕ ರಚಿಸಲಾಗಿದೆ.
ನಾಟಕಕಾರನೊಬ್ಬ ಭಯೋತ್ಪಾದಕರ ಪ್ರೇತಗಳೊಂದಿಗೆ ಸಂಭಾಷಿಸುವ ಘಟನೆಯಿಂದ ಪ್ರರಂಭವಾಗುತ್ತದೆ. ಭಯೋತ್ಪಾದಕ ಪ್ರೇತಗಳು ನಾಟಕಕಾರನನ್ನು ಕೊಲ್ಲುವುದಕ್ಕಾಗಿ ಹೆದರಿಸಿದರೆ, ನಾಟಕಕಾರ ತಾನೇ ಭಯೋತ್ಪಾದಕದಿಂದ ದೊಡ್ಡ ಕೊಲೆಯನ್ನು ಮಾಡುವುದಾಗಿ ಹೇಳುತ್ತಾನೆ. ಅಂದರೆ ಜೀವಂತವಾಗಿರುವ ಆಧುನಿಕ ನಾಗರಿಕತೆಯನ್ನು ಕೊಂದು ಅದನ್ನು ಪೋಸ್ಟ್ ಮಾರ್ಟಮ್ ಮಾಡುತ್ತಾನೆ. ಟ್ರಂಪ್ ಮತ್ತು ಕಿಮ್ ಮೂರನೆಯ ಮಹಾಯುದ್ಧ ಮಾಡಿ ಭೂಮಿ ನಾಶವಾಗುವ ಕಾಲ್ಪನಿಕ ಹಿನ್ನಲೆಯಿಂದ ನಾಟಕ ಪ್ರಾರಂಭವಾಗುತ್ತದೆ.
ಪ್ರಕೃತಿ ವಿಕೋಪಗಳಾದ ಚಂಡಮಾರುತ, ಭೂಕಂಪ, ಅತಿವೃಷ್ಟಿಯಿಂದ ಭೂಮಿ ಘಾಸಿಗೊಂಡರೂ ಮತ್ತೆ ಚಿಗುರುತ್ತದೆ. ಆದರೆ ಅಣ್ವಸ್ತ್ರಗಳಿಂದ ನಾಶವಾಗುವ ಭೂಮಿ ಶತಮಾನಗಳ ಕಾಲ ವಿಕೃತಿಗೆ ಒಳಗಾಗುತ್ತದೆ. ಭೂಮಿಯಲ್ಲಿ ಆಧುನಿಕ ನಾಗರಿಕತೆ ನಾಶವಾದರೆ ಪುನಃ ಅಂಥದೇ ನಾಗರಿಕತೆಯನ್ನು ಕಟ್ಟಬೇಕೆ ಎಂದು ಪುಟುಗೋಸಿ ಮನುಷ್ಯ ರಾಷ್ಟ್ರಪತಿಯಾಗಿ ಪ್ರಶ್ನಿಸುತ್ತಾನೆ. ಬತ್ತಿದ ನದಿಗಳ ತೊರೆಗಳ ಬಾಯಾರಿದ ಭೂಮಿಯ ಪುನರಜ್ಜೀವನ ಹೇಗೆ ಎಂಬು ಪ್ರಶ್ನೆ.
ನಾಟಕಕಾರ ಭಯೋತ್ಪಾದಕ ಪ್ರೇತಗಳು ಮತ್ತು ಗಾಂಧೀಜಿಯ ಕೋತಿಗಳು ಭೇಟಿಯಾಗುವ ಘಟನೆಯನ್ನು ಘೋಷಾಪುರದ ಸ್ಮಶಾನದಲ್ಲಿ ಸೃಷ್ಟಿ ಮಾಡುತ್ತಾನೆ. ಅಮೆರಿಕದ ಜೀವನ ಕ್ರಮ ಅತಿರೇಕದ ಸ್ವತ್ಛಂದತೆ, ಆಧುನಿಕ ನಾಗರಿಕತೆಯ ಜಾಹೀರಾತು ಜಗತ್ತು, ಧಾರವಾಹಿ, ಸಿನಿಮಾಗಳು, ಲಿವಿಂಗ್ ಟುಗೆದರ್ ಶೈಲಿಗಳು ಎಲ್ಲವೂ ವಿದೂಷಕನ ಬಾಯಲ್ಲಿ ಮೂಡಿಬಂದಿದೆ. ಹಾಡುಗಳಂತೂ ಮಾರ್ಮಿಕವಾಗಿವೆ.
ಪದೇ ಪದೆ ಆಧುನಿಕ ದುರಂತಗಳ ಬಗ್ಗೆ ಯೋಚಿಸುವಂತೆ ಮಾಡುತ್ತದೆ. ಈ ನಾಟಕದ ಪ್ರಸ್ತುತಿಯಲ್ಲಿ ಕಾಣುವ ವಿಶೇಷವೆಂದರೆ ದುರಂತವನ್ನು ಅಂತ್ಯದ ನಗೆಗಡಲಲ್ಲಿ ತೇಲಿಸಿ ಹೇಳುವ ರೀತಿ. ನಟರಾದ ಎಂ. ಎಸ್. ಭಟ್, ಯೊಗೀಶ್ ಕೊಳಲಗಿರಿ, ದಿವಾಕರ್ ಕಟೀಲ್, ನೂತನ್ ಕುಮಾರ್, ಜೀವನ್, ಅಕ್ಷತ್, ಪ್ರಜ್ಞಾಶ್ರೀ, ಕವನ, ಕಾವ್ಯ ಹಾಗೂ ಸಿಂಚನ ಲವಲವಿಕೆಯಿಂದ ನಟಿಸಿದರು.
ರಂಗ ಸಜ್ಜಿಕೆಯಲ್ಲಿ ಜಗದೀಶ್ ಚೆನ್ನಂಗಡಿ, ನೆರಳು ಬೆಳಕಿನ ಸಂಯೋಜನೆ ಬೆಳಕಿನ ಆಟ ನಾಟಕಕ್ಕೆ ಪೂರಕವಾಗಿ ಪ್ರವೀಣ್ ಜಿ.ಕೊಡವೂರು ನಿರ್ವಹಿಸಿದರು. ರಂಗ ಸಂಗೀತವು ನಾಟಕಕ್ಕೆ ಪೂರಕವಾಗಿ ಮೂಡಿಬಂತು ಯನ್‌ಸ್ಟನ್ ಹಾಗೂ ವಾರ್ಷಿತಾ ಅಭಿನಂದನೆಗೆ ಆರ್ಹರು.ಶ್ರೀಮಂತ ರಾಷ್ಟ್ರಗಳು ಜಗತ್ತಿಗೆ ತಂದಿರುವ ಕ್ಷಿಪಣಿ, ರಾಸಾಯನಿಕ ಅಸ್ತ್ರಗಳ ಕುರಿತು ಯೋಚಿಸುವಂತೆ ಮಾಡುವ ನಾಟಕ.
ಜಯರಾಮ್, ನೀಲಾವರ