ಮುದ್ದೇಬಿಹಾಳ: ಇತ್ತೀಚೆಗೆ ಬೀದರ ಜಿಲ್ಲೆ ಭಾಲ್ಕಿ ತಾಲೂಕು ಕೋಸಮ್ ಗ್ರಾಮದಲ್ಲಿ, ಎರಡು ವರ್ಷದ ಹಿಂದೆ ಮುದ್ದೇಬಿಹಾಳ ತಾಲೂಕು ಬಿಜೂರು ಗ್ರಾಮದಲ್ಲಿ ನಡೆದ ಹಡಪದ ಸಮಾಜಕ್ಕೆ ಸೇರಿದ ಇಬ್ಬರು ಯುವತಿಯರ ಅತ್ಯಾಚಾರ ಮಾಡಿ ಹತ್ಯೆಗೈದ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ಇಲ್ಲಿನ ಹಡಪದ ಅಪ್ಪಣ್ಣ ಸಮಾಜ ಕ್ಷೇಮಾಭಿವೃದ್ಧಿ ಸಂಘ, ಸವಿತಾ ಸಮಾಜ ಸೇವಾ ಸಂಘ ಹಾಗೂ ವಿವಿಧ ಸಂಘಟನೆ ಸದಸ್ಯರು ತಹಶೀಲ್ದಾರ್ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.
ಮಿನಿ ವಿಧಾನಸೌಧಕ್ಕೆ ಆಗಮಿಸಿದ ಪ್ರತಿಭಟನಾಕಾರರು ಕೋಸಮ್ ಗ್ರಾಮದ ಯುವತಿಯ ಹತ್ಯೆ ಆರೋಪಿ ಶಮಸುದ್ದೀನ್ ಎಂಬಾತ ತಪ್ಪು ಒಪ್ಪಿಕೊಂಡಿದ್ದಾನೆ. ಆತನಿಗೆ ಗಲ್ಲು ಶಿಕ್ಷೆ ದೊರಕುವಂತೆ ನೋಡಿಕೊಳ್ಳಬೇಕು. ಬಿಜೂರು ಗ್ರಾಮದ ಯುವತಿ ಪ್ರಕರಣದಲ್ಲಿ ಆರೋಪಿಗಳು ರಾಜಾರೋಷವಾಗಿ ಹೊರಗಡೆ ತಿರುಗಾಡಿಕೊಂಡಿದ್ದಾರೆ.
ಈ ಪ್ರಕರಣ ಮತ್ತೂಮ್ಮೆ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿ ಇವರಿಗೂ ಗಲ್ಲು ಶಿಕ್ಷೆ ದೊರಕುವಂತೆ ನೋಡಿಕೊಳ್ಳಬೇಕು. ಅಂದಾಗ ಮಾತ್ರ ರಾಜ್ಯದಲ್ಲಿ ಹೆಚ್ಚುತ್ತಿರುವ ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕುವುದು ಸಾಧ್ಯವಾಗುತ್ತದೆ ಎಂದರು.
ತಂಗಡಗಿಯ ಹಡಪದ ಅಪ್ಪಣ್ಣ ಸಂಸ್ಥಾನಮಠದ ಅನ್ನದಾನಭಾರತಿ ಅಪ್ಪಣ್ಣ ಶ್ರೀ, ಹೇಮರಡ್ಡಿ ಮಲ್ಲಮ್ಮ ಸೇವಾ ಸಂಘದ ಅಧ್ಯಕ್ಷ ಶೃಂಗಾರಗೌಡ ಪಾಟೀಲ, ಬಿಜೆಪಿ ಮುಖಂಡರಾದ ಆರ್.ಎಸ್. ಪಾಟೀಲ ಕೂಚಬಾಳ, ಮಂಗಳಾದೇವಿ ಬಿರಾದಾರ, ಪರಶುರಾಮ ಪವಾರ, ಸಿದ್ದರಾಜ ಹೊಳಿ, ದಲಿತ ಮುಖಂಡ ಡಿ.ಬಿ. ಮುದೂರ, ವಕೀಲರ ಸಂಘದ ಮುಖಂಡ ವಿಜಯಮಹಾಂತೇಶ ಸಾಲಿಮಠ ಸಂತ್ರಸ್ತ ಕುಟುಂಬಗಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿದರು.
ಕೊಲೆಗೀಡಾದ ಯುವತಿಯರ ಕುಟುಂಬಕ್ಕೆ ಸೂಕ್ತ ಪರಿಹಾರ, ಭದ್ರತೆ ಒದಗಿಸಬೇಕು. ಇಂಥ ಘಟನೆ ಮರುಕಳಿಸದಂತೆ ಕಠಿಣ ಕ್ರಮ ಜಾರಿಗೊಳಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಪ್ರತಿಭಟನೆ ಹಿನ್ನೆಲೆ ಪಟ್ಟಣದ ಕಟಿಂಗ್ ಶಾಪ್‌ಗ್ಳನ್ನು ಸ್ವಯಂಪ್ರೇರಿತವಾಗಿ ಬಂದ್ ಮಾಡಲಾಗಿತ್ತು. ಮನವಿ ಸಲ್ಲಿಕೆಗೂ ಮುನ್ನ ಬನಶಂಕರಿ ದೇವಸ್ಥಾನದಿಂದ ಮಿನಿ ವಿಧಾನಸೌಧವರೆಗೆ ಪ್ರತಿಭಟನಾ ರ್ಯಾಲಿ ನಡೆಸಲಾಯಿತು.