ಕಾಂಗ್ರಾ (ಹಿಮಾಚಲ ಪ್ರದೇಶ): ಚುನಾವಣೆಯ ಹೊಸ್ತಿಲಲ್ಲಿರುವ ಹಿಮಾಚಲ ಪ್ರದೇಶದಲ್ಲಿ ಗುರುವಾರ ತಮ್ಮ ಮೊಟ್ಟಮೊದಲ ರ್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಆಡಳಿತಾರೂಢ ಕಾಂಗ್ರೆಸ್ ಸರಕಾರವನ್ನು ಅಧಿಕಾರದಿಂದ ಕಿತ್ತೂಗೆಯಬೇಕೆಂದು ರಾಜ್ಯದ ಜನತೆಯನ್ನು ಬಲವಾಗಿ ಆಗ್ರಹಿಸಿದರು.
ಇದೇ ತಿಂಗಳ 9ರಂದು ನಡೆಯಲಿರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಗುರುವಾರ ಕಾಂಗ್ರಾದಲ್ಲಿ ನಡೆದ ಬೃಹತ್ ರ್ಯಾಲಿಯಲ್ಲಿ ಮಾತನಾಡಿದ ಅವರು “”ದೇವಭೂಮಿಯಾದ ಹಿಮಾಚಲ ಪ್ರದೇಶದಲ್ಲಿ ಗಣಿಗಾರಿಕೆ ಮಾಫಿಯಾ, ಅರಣ್ಯ ಮಾಫಿಯಾ, ಡ್ರಗ್ಸ್ ಮಾಫಿಯಾ, ಟೆಂಡರ್ ಮಾಫಿಯಾ ಹಾಗೂ ವರ್ಗಾ ವಣೆ ಮಾಫಿಯಾ ಎಂಬ ಪಂಚ ದಾನವರು ತಾಂಡವ ವಾಡುತ್ತಿದ್ದಾರೆ. ಈ ರಕ್ಕಸರನ್ನು ರಾಜ್ಯದಿಂದ ಕೂಡಲೇ ಹೊಡೆದೋಡಿಸಲು ಜನರು ಈ ಬಾರಿ ಬಿಜೆಪಿಯನ್ನು ಬೆಂಬಲಿಸಬೇಕು” ಎಂದು ಪ್ರಾರ್ಥಿಸಿದರು.
ಇದೇ ವೇಳೆ, ಕಾಂಗ್ರೆಸ್ ವಿರುದ್ಧ ಟೀಕೆ ಮಾಡಿದ ಅವರು, “”ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬಂದರೆ, ಭ್ರಷ್ಟಾಚಾರದ ವಿರುದ್ಧ ಉಗ್ರ ಕ್ರಮ ಕೈಗೊಳ್ಳುವುದಾಗಿ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿಕೊಂಡಿದೆ. ಇಲ್ಲಿನ ಸಿಎಂ ವೀರಭದ್ರ ಸಿಂಗ್ ಅವರೇ ಭ್ರಷ್ಟಾಚಾರದ ಆರೋಪ ಹೊತ್ತು ಸದ್ಯಕ್ಕೆ ಜಾಮೀನಿನ ಮೇಲೆ ಹೊರಗಿದ್ದಾರೆ. ಅವರಿಂದಲೇ ಈ ಪ್ರಣಾಳಿಕೆ ಬಿಡುಗಡೆ ಮಾಡಿಸಲಾಗಿದೆ” ಎಂದು ವ್ಯಂಗ್ಯವಾಡಿದರಲ್ಲದೆ, ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವೀಗ “ಲಾಫಿಂಗ್ ಕ್ಲಬ್’ ಆಗಿ ಪರಿವರ್ತನೆಗೊಂಡಿದೆ” ಎಂದು ಚುಚ್ಚಿದರು.
ಸೇನೆಗೆ ಅವಮಾನಿಸಿದ ರಾಹುಲ್: ಆನಂತರ, ತಮ್ಮ ಟೀಕಾಸ್ತ್ರವನ್ನು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕಡೆ ತಿರುಗಿಸಿದ ಅವರು, “”ರಾಹುಲ್ ಗಾಂಧಿಯವರ ಅಪ್ಪ, ಅಜ್ಜಿ ಹಾಗೂ ಮುತ್ತಾತ ಈ ದೇಶದ ಪ್ರಧಾನಿಗಳಾಗಿದ್ದವರು. ಇಂಥ “ಆಡಳಿತಾರೂಢ’ ಕುಟುಂಬದಲ್ಲಿ ಹುಟ್ಟಿರುವ ರಾಹುಲ್ ಗಾಂಧಿ, ಡೋಕ್ಲಾಂ ಸಮಸ್ಯೆ ವೇಳೆ ಚೀನ ಸರಕಾರದ ನಡೆ ಪ್ರಶ್ನಿಸುವುದನ್ನು ಬಿಟ್ಟು ಆ ದೇಶದ ಕೆಲ ನಾಯಕರೊಂದಿಗೆ ಸಭೆ ನಡೆಸಿ ದೇಶದ ಸ್ವಾಭಿಮಾನಕ್ಕೆ ಧಕ್ಕೆ ತಂದರು” ಎಂದು ಟೀಕಿಸಿದರು.
ಆನಂತರ ನೆಹರೂ ವಿರುದ್ಧ ಟೀಕಿಸಿದ ಅವರು, “”ಕಾಂಗ್ರೆಸ್‌ನ ದುರಾಡಳಿತ ಪ್ರಶ್ನಿಸಲೆಂದೇ ಹುಟ್ಟಿಕೊಂಡ ಜನಸಂಘವನ್ನು ಬೇರು ಸಮೇತ ಕಿತ್ತು ಹಾಕುವುದಾಗಿ ನೆಹರೂ ಹೇಳಿದ್ದರು. ಆದರೆ, ಆನಂತರದಲ್ಲಿ ಅವರ ಪಕ್ಷವೇ ಭ್ರಷ್ಟಾಚಾರ ಹಾಗೂ ಕುಟುಂಬ ರಾಜಕೀಯದ ತಾಣವಾಗಿ ಪರಿವರ್ತನೆಯಾಯಿತು” ಎಂದು ವಿಷಾದಿಸಿದರು. ಅಲ್ಲದೆ, ಸ್ವತ್ಛ ಭಾರತ ಅಭಿಯಾನದಡಿ ಕಸ ದೂಡುವಂತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ಕಿತ್ತೂಗೆಯಬೇಕು” ಎಂದು ಆಗ್ರಹಿಸಿದರು.
ಆಧಾರ್‌ಗೆ ಸಮರ್ಥನೆ
ತಮ್ಮ ಮಾತಿನ ನಡುವೆ ಸರಕಾರಿ ಯೋಜನೆಗಳಿಗೆ ಆಧಾರ್ ಸಂಖ್ಯೆ ಜೋಡಣೆ ಸಮರ್ಥಿಸಿಕೊಂಡ ಮೋದಿ, “”ಸರಕಾರಿ ಯೋಜನೆ ಫಲಾನುಭವಿಗಳು ಆಧಾರ್ ಜೋಡಣೆ ಮಾಡಿದ್ದರಿಂದಾಗಿ ಅವರಿಗೆ ಸಲ್ಲಬೇಕಾದ ಹಣ ನೇರವಾಗಿ ಅವರ ಖಾತೆಗಳಿಗೇ ವರ್ಗಾವಣೆಯಾಗುತ್ತಿದೆ. ಇದರಿಂದ, ಸೋರಿಕೆಯಾಗುತ್ತಿದ್ದ 57 ಸಾವಿರ ಕೋಟಿ ರೂ. ಉಳಿತಾಯವಾದಂತಾಗಿದೆ” ಎಂದರು.