Advertisement
ರಾಜಕಾಲುವೆ ಮತ್ತು ಕೆರೆಗಳ ಒತ್ತುವರಿ ತೆರವಿಗೆ ಒತ್ತಾಯಿಸಿ ದೊರೆಸ್ವಾಮಿ ಅವರ ನೇತೃತ್ವದಲ್ಲಿ ಭೂ ಕಬಳಿಕೆ ವಿರೋಧ ಹೋರಾಟ ಸಮಿತಿಯಿಂದ ಬಿಬಿಎಂಪಿ ಕೇಂದ್ರ ಕಚೇರಿಯ ಎದುರು ಪ್ರತಿಭಟನೆ ನಡೆಸಲಾಯಿತು.
Related Articles
Advertisement
ನಗರದ ಜನತೆಯ ಕ್ಷೇಮಕ್ಕಾಗಿ ಸರ್ಕಾರದ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು. ನಿಜವಾಗಿಯೂ ಎಲ್ಲಿ ಸಮಸ್ಯೆ ಆಗುತ್ತಿದೆಯೋ ಅಲ್ಲಿ ಯಾವುದೇ ಮುಲಾಜಿಲ್ಲದೆ ತೆರವುಗೊಳಿಸುವ ಸಾಮರ್ಥಯ ಅಧಿಕಾರಿಗಳಲ್ಲಿರಬೇಕು. ಆದರೆ, ನೀವುಗಳು ರಾಜಕಾರಣಿಗಳ ಗುಲಾಮರಾಗಿ ಅವರೇಳಿದ ರೀತಿಯಲ್ಲಿ ಕೆಲಸ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ತರಾಟೆಗೆ ತೆಗೆದುಕೊಂಡರು.
ಒತ್ತುವರಿ ತೆರವುಗೊಳಿಸುವ ಮೊದಲು ಅವರಿಗೆ ನೋಟಿಸ್ ಜಾರಿಗೊಳಿಸಬೇಕು. ಜತೆಗೆ ಅವರಿಗೆ ಪುನರ್ವಸತಿ ಕಲ್ಪಿಸಬೇಕಾಗುತ್ತದೆ. ಆದರೆ, ಪಾಲಿಕೆಯ ಅಧಿಕಾರಿಗಳು ಯಾವುದೇ ನೋಟಿಸ್ ನೀಡದೆ ಏಕಾಏಕಿ ಬಡವರ ಮನೆಗಳನ್ನು ಒಡೆದು ಅವರನ್ನು ಬೀದಿಗೆ ತಳ್ಳಿದಿರಿ ಎಂದು ದೂರಿದರು.
ನಗರದಲ್ಲಿನ ರಾಜಕಾಲುವೆ ಒತ್ತುವರಿ ಪ್ರಕರಣಗಳ ತೆರವಿಗೆ ಕೂಡಲೇ ಕ್ರಿಯಾ ಯೋಜನೆ ರೂಪಿಸಿ, ಮುಂದಿನ 15 ದಿನಗಳಲ್ಲಿ ಅಂತಹ ಪ್ರಕರಣಗಳಲ್ಲಿ ಪಾಲಿಕೆಯಿಂದ ಕೈಗೊಂಡಿರುವ ಕ್ರಮಗಳು ಕುರಿತು ಮಾಹಿತಿ ನೀಡಬೇಕು. ಇಲ್ಲದಿದ್ದರೆ ಅನಿರ್ದಿಷ್ಟಾವಧಿ ಧರಣಿ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ವಾರದಲ್ಲಿ ಕ್ರಿಯಾಯೋಜನೆ: ಒಂದು ವಾರದಲ್ಲಿ ರಾಜಕಾಲುವೆ ಒತ್ತುವರಿ ತೆರವಿಗೆ ಕೈಗೊಂಡಿರುವ ಕ್ರಮಗಳು ಮತ್ತು ಕೆರೆಗಳ ಅಭಿವೃದ್ಧಿ ಕುರಿತ ವಿಸ್ತೃತವಾದ ಕ್ರಿಯಾಯೋಜನಾ ವರದಿ ನೀಡಲಾಗುವುದು. ಜತೆಗೆ ಪಾಲಿಕೆಯ ವೆಬ್‌ಸೈಟ್‌ನಲ್ಲಿ ಫೋಟೊ ಸಹಿತ ವಿವರಗಳನ್ನು ಪ್ರಕಟಿಸಲಾಗುವುದು ಎಂದು ಮನವಿ ಪತ್ರ ಸ್ವೀಕರಿಸಿದ ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ಭರವಸೆ ನೀಡಿದರು.
ಕೆರೆಗಳ ಒಡೆತನ ಕಂದಾಯ ಇಲಾಖೆಯದ್ದಾಗಿದ್ದು, ಬಿಬಿಎಂಪಿಯಿಂದ ಕೆರೆಗಳ ನಿರ್ವಹಣೆ ಮಾತ್ರ ಮಾಡಲಾಗುತ್ತಿದೆ. ಈಗಾಗಲೇ ಪಾಲಿಕೆಯಿಂದ 74 ಕೆರೆಗಳನ್ನು ಅಭಿವೃದ್ಧಿಪಡಿಸಿದ್ದು, ಒಳಚರಂಡಿ ನೀರು ಕೆರೆಗಳಿಗೆ ಹರಿಯದಂತೆ ಕ್ರಮಕೈಗೊಳ್ಳಲಾಗಿದೆ. ಕೆರೆಗಳ ಒತ್ತುವರಿ ತೆರವಿಗೆ ಕಂದಾಯ ಇಲಾಖೆಯೊಂದಿಗೆ ಚರ್ಚಿಸಿ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದರು.
ನಗರದಲ್ಲಿ 842 ಕಿ.ಮೀ ಉದ್ದದ ರಾಜಕಾಲುವೆ ಮಾರ್ಗವಿದ್ದು, ಈಗಾಗಲೇ 349 ಕಿ.ಮೀ ಉದ್ದದ ಕಾಲುವೆ ಅಭಿವೃದ್ಧಿಪಡಿಸಿ, ತಡೆಗೋಡೆ ನಿರ್ಮಿಸಲಾಗಿದೆ. ಭೂಮಾಪಕರಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿ 1950 ಒತ್ತುವರಿ ಪ್ರಕರಣಗಳನ್ನು ಗುರುತಿಸಿದ್ದು, ತೆರವು ಕಾರ್ಯಾಚರಣೆ ಆರಂಭಿಸಲಾಗಿದೆ.
ಕಂದಾಯ ವಿಭಾಗ ಹಾಗೂ ಬಿಬಿಎಂಪಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಭೂಮಾಪಕರ ಮೂಲಕ ತಿಂಗಳಿಗೆ 250 ಒತ್ತುವರಿಗಳನ್ನು ಗುರುತಿಸಿ, ಅದನ್ನು ತೆರವುಗೊಳಿಸುವ ಯೋಜನೆ ರೂಪಿಸಲಾಗಿದ್ದು, ಒತ್ತುವರಿಗೆ ಸಹಕರಿಸದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.