ನವದೆಹಲಿ:ದೆಹಲಿ ಗಡಿಯಲ್ಲಿ ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆ ರದ್ದುಗೊಳಿಸಬೇಕೆಂದು ಆಗ್ರಹಿಸಿ ರೈತರು ಇನ್ನೂ ಪ್ರತಿಭಟನೆ ಮುಂದುವರಿಸಿದ್ದು ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಒಂದೋ ನೀವು (ಕೇಂದ್ರ ಸರ್ಕಾರ) ಕಾಯ್ದೆಯನ್ನು ತಾತ್ಕಾಲಿಕವಾಗಿ ತಡೆ ಹಿಡಿಯದಿದ್ದರೆ, ಆ ಕೆಲಸವನ್ನು ನಾವು(ಸುಪ್ರೀಂಕೋರ್ಟ್) ಮಾಡುತ್ತೇವೆ. ಇದರಲ್ಲಿ ಪ್ರತಿಷ್ಠೆಯ ಪ್ರಶ್ನೆ ಏನಿದೆ? ಎಂದು ಸೋಮವಾರ(ಜನವರಿ 11, 2021) ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಯನ್ನು ಪ್ರಶ್ನಿಸಿ ರೈತ ಸಂಘಟನೆಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಈ ಆದೇಶ ನೀಡಿರುವುದಾಗಿ ವರದಿ ತಿಳಿಸಿದೆ.
ಈ ವಿಚಾರದಲ್ಲಿ ಏನೇ ಅನಾಹುತ ಸಂಭವಿಸಿದರು ಅದಕ್ಕೆ ನಾವು ಪ್ರತಿಯೊಬ್ಬರು ಹೊಣೆಗಾರರಾಗಬೇಕಾಗುತ್ತದೆ. ಈ ನಿಟ್ಟಿನಲ್ಲಿ ನಮ್ಮ ಕೈಗೆ ಯಾವುದೇ ರಕ್ತದ ಕಲೆ ಅಂಟಿಕೊಳ್ಳುವುದನ್ನು ನಾವು ಬಯಸುವುದಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಎಸ್ ಎ ಬೋಬ್ಡೆ ಕಟು ಶಬ್ದಗಳಲ್ಲಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ನೂತನ ಕೃಷಿ ಕಾಯ್ದೆಯನ್ನು ತಾತ್ಕಾಲಿಕ ರದ್ದುಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕ್ರಮ ತೆಗೆದುಕೊಂಡಿದೆ. ಈವರೆಗೂ ರೈತರ ಸಮಸ್ಯೆ ಬಗೆಹರಿಸುವ ಬಗ್ಗೆ ನಿಮ್ಮ ನಿಲುವೇನು? ಎಂದು ಪ್ರಶ್ನಿಸಿರುವ ಸುಪ್ರೀಂಕೋರ್ಟ್, ನೀವು ಕಾಯ್ದೆ ಅಮಾನತು ಮಾಡದಿದ್ದರೆ, ನಾವು ಆ ಕೆಲಸ ಮಾಡುತ್ತೇವೆ ಎಂದು ಹೇಳಿದೆ.
ಯಾವ ರೀತಿಯ ಮಾತುಕತೆ ನಡೆಯುತ್ತಿದೆ ಎಂಬುದು ನಮಗೆ ಗೊತ್ತಿಲ್ಲ. ಆದರೆ ಕೆಲವು ಸಮಯದವರೆಗೆ ನೂತನ ಕೃಷಿ ಕಾಯ್ದೆಯನ್ನು ರದ್ದು ಮಾಡಲು ಸಾಧ್ಯವಿಲ್ಲವೇ? ನಮ್ಮ ಉದ್ದೇಶ ಕೂಡಾ ಸಮಸ್ಯೆಗೆ ಪರಿಹಾರ ಕಂಡುಹುಡುಕುವುದು ಎಂದು ಸಿಜೆಐ ಹೇಳಿದರು.
ನೂತನ ಕೃಷಿ ಕಾಯ್ದೆ ರದ್ದುಗೊಳಿಸಬೇಕೆಂದು ಪಟ್ಟು ಹಿಡಿದು ಪ್ರತಿಭಟನೆ ನಡೆಸುತ್ತಿರುವ ರೈತ ಸಂಘಟನೆ ಜತೆ ಕೇಂದ್ರ ಸರ್ಕಾರ ಈಗಾಗಲೇ ನಡೆಸಿರುವ ಎಂಟು ಸುತ್ತಿನ ಮಾತುಕತೆಯೂ ವಿಫಲಗೊಂಡಿದ್ದು, ಜನವರಿ 15ರಂದು ಒಂಬತ್ತನೇ ಸುತ್ತಿನ ಮಾತುಕತೆ ನಡೆಯಲಿದೆ.