Advertisement

Pustaka Sante: ನಾಡಿದ್ದಿನಿಂದ 2 ದಿನ ನಗರದಲ್ಲಿ ಪುಸ್ತಕ ಸಂತೆ

12:34 PM Feb 08, 2024 | Team Udayavani |

ಬೆಂಗಳೂರು: ವಾರಾಂತ್ಯ ಫೆ.10 ಮತ್ತು 11 ರಂದು ಎಚ್‌ಎಸ್‌ಆರ್‌ ಬಡಾವಣೆ 3ನೇ ಸೆಕ್ಟೆರ್‌ ನಲ್ಲಿರುವ ಸ್ವಾಭಿಮಾನ ಉದ್ಯಾನವನದಲ್ಲಿ ಪುಸ್ತಕ ಲೋಕವೇ ಜಾಗೃತವಾಗಲಿದ್ದು, ಇದರೊಂದಿಗೆ ಆಹಾರ ಮೇಳದ ಸವಿ, ರಂಗೋಲಿ ಸ್ಪರ್ಧೆಯ ರಂಗು, ಮಕ್ಕಳ ಸಂತೆಯ ಸಿರಿ ಅನಾವರಣಗೊಳ್ಳಲಿದೆ.

Advertisement

ವೀರಲೋಕ ಪ್ರತಿಷ್ಠಾನ, ಕರ್ನಾಟಕ ಪ್ರಕಾಶಕರ ಸಂಘಗಳ ಸಹಯೋಗದಲ್ಲಿ 2 ದಿನಗಳ ಪುಸ್ತಕ ಸಂತೆ ಆಯೋಜಿಸಲಾಗಿದ್ದು, ಓದುಗರು, ಪ್ರಕಾಶಕರು, ಲೇಖಕರ ಸಂಗಮವಾಗಲಿದೆ. ಅಲ್ಲದೆ ಪುಸ್ತಕ ಪ್ರದರ್ಶನ ಮತ್ತು ಮಾರಾಟಕ್ಕೂ ವ್ಯವಸ್ಥೆ ಕಲ್ಪಿಸಲಾಗಿದೆ. ಬೆಳಗ್ಗೆ 7 ರಿಂದ ರಾತ್ರಿ 10 ರವರೆಗೆ ವಿವಿಧ ಕಾರ್ಯಕ್ರಮ ನಡೆಯಲಿವೆ.

ಈ ಕುರಿತು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ವಿವರಣೆ ನೀಡಿದ ವಿಧಾನಪರಿಷತ್‌ ವಿರೋಧ ಪಕ್ಷದ ಮಾಜಿ ನಾಯಕ ವಿ.ಎಸ್‌. ಉಗ್ರಪ್ಪ, ಭೂಗಳ್ಳರ ಪಾಲಾಗಬೇಕಿದ್ದ 1 ಸಾವಿರ ಕೋಟಿ ರೂ. ಬೆಲೆಬಾಳುವ ಉದ್ಯಾನವನದ ಜಾಗವನ್ನು ಸಾಕಷ್ಟು ಹೋರಾಟದ ಮೂಲಕ ಉಳಿಸಿಕೊಂಡಿದ್ದೇವೆ. ಆ ಜಾಗದಲ್ಲಿ 1 ಕೋಟಿ ರೂ. ವೆಚ್ಚದ ಬಯಲು ರಂಗಮಂದಿರ, ಪುರುಷರು, ಮಹಿಳೆಯರಿಗೆ ಪ್ರತ್ಯೇಕ ಜಿಮ್‌ ವ್ಯವಸ್ಥೆ, ಬುದ್ಧ ಮಂದಿರ, ಕಲ್ಯಾಣಗಳು, ವಾಯುವಿಹಾರಗಳಿಗೆ 1 ಕಿ.ಮೀ. ಉದ್ದದ ಪ್ರತ್ಯೇಕ ಪಥ, ಮಕ್ಕಳ ಆಟಿಕೆಗಳನ್ನು ಅಳವಡಿಸಲಾಗಿದೆ. ಅದೇ ಜಾಗದಲ್ಲಿ ಪುಸ್ತಕ ಸಂತೆಯನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಸಿಎಂರಿಂದ ಚಾಲನೆ, ಸಮಾರೋಪದಲ್ಲಿ ಡಿಸಿಎಂ ಭಾಗಿ: ಫೆ.10 ರ ಶನಿವಾರ ಬೆಳಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಲಿದ್ದು, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ, ಸಾಹಿತಿ ಬರಗೂರು ರಾಮಚಂದ್ರಪ್ಪ, ಪತ್ರಕರ್ತ ವಿಶ್ವೇಶ್ವರ ಭಟ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಧರಣಿದೇವಿ ಭಾಗಿಯಾಗಲಿದ್ದಾರೆ. ಅದೇ ದಿನ ಸಂಜೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಶಾಸಕ ಸತೀಶ್‌ ರೆಡ್ಡಿ, ರಾಜ್ಯಸಭೆ ಮಾಜಿ ಸದಸ್ಯ ಕುಪೇಂದ್ರ ರೆಡ್ಡಿ ಪಾಲ್ಗೊಳ್ಳಲಿದ್ದಾರೆ. ನಟಿ ಮಮತಾ ರಾವತ್‌ ಅವರು ಆಹಾರ ಮೇಳ ಉದ್ಘಾಟಿಸಿದರೆ, ಚೈತ್ರಾ ಕೊಟ್ಟೂರು ಅವರು ರಂಗೋಲಿ ಸ್ಪರ್ಧೆಗೆ ಚಾಲನೆ ನೀಡಲಿದ್ದಾರೆ.

ಕಲಾವಿದರಿಂದ ಮಕ್ಕಳ ಸಂತೆಗೆ ಚಾಲನೆ ಕೊಡಲಾಗುತ್ತದೆ. ಫೆ.11 ರ ಭಾನುವಾರ ಸಮಾರೋಪ ಸಮಾರಂಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ನಿವೃತ್ತ ನ್ಯಾ.ನಾಗಮೋಹನ್‌ ದಾಸ್‌, ಲೇಖಕಿಯರ ಸಂಘದ ಅಧ್ಯಕ್ಷೆ ಪುಷ್ಪಾ, ವಿಧಾನಪರಿಷತ್‌ ಸದಸ್ಯ ಗೋಪಿನಾಥ ರೆಡ್ಡಿ ಪಾಲ್ಗೊಳ್ಳಲಿದ್ದಾರೆ ಎಂದರು.

Advertisement

ರೋಟರಿ ಕ್ಲಬ್‌ ಎಚ್‌ಎಸ್‌ಆರ್‌ ಅಧ್ಯಕ್ಷ ರಾಜೀವ್‌ ಥ್ಯಾಕಟ್‌ ಇತರರಿದ್ದರು.

ಪ್ರಕಾಶಕರೆಲ್ಲರೂ ಸೇರಿ ಪುಸ್ತಕ ಸಂತೆ ಮಾಡುತ್ತಿರುವುದು ಇದೇ ಮೊದಲು. ಕೈಗೆಟಕುವ ದರದಲ್ಲಿ ಪುಸ್ತಕಗಳು ಸಿಗಬೇಕೆಂಬುದು ನಮ್ಮ ಆಶಯ. ಪ್ರತಿ 2 ತಿಂಗಳಿಗೊಮ್ಮೆ ಒಂದೊಂದು ಜಿಲ್ಲೆಯಲ್ಲೂ ಈ ರೀತಿಯ ಪುಸ್ತಕ ಸಂತೆ ನಡೆಸುವ ಅಭಿಲಾಷೆ ಇದೆ. ಮುಂದಿನ ದಿನಗಳಲ್ಲಿ ಬೀದರ್‌ ಜಿಲ್ಲೆಯಲ್ಲಿ ಪುಸ್ತಕ ಸಂತೆ ನಡೆಸುವ ಚಿಂತನೆ ಇದೆ. -ವೀರಕಪುತ್ರ ಶ್ರೀನಿವಾಸ್‌, ವೀರಲೋಕ ಪ್ರತಿಷ್ಠಾನದ ಸಂಸ್ಥಾಪಕ

ಹಳ್ಳಿಗಳಲ್ಲಿ ಚಿಕ್ಕವರಿಂದ ಸಂತೆಯನ್ನು ನೋಡಿಕೊಂಡೇ ಬೆಳೆದವರು ನಾವೆಲ್ಲಾ. ಚಿಂತ್ರಸಂತೆಯೂ ಆಗುತ್ತದೆ. ಆದರೆ, ಸಾಹಿತ್ಯ ಸಮ್ಮೇಳನ ಬಿಟ್ಟರೆ ಮತ್ಯಾವುದೇ ಸಂದರ್ಭದಲ್ಲೂ ಪುಸ್ತಕ ಸಂತೆ ಆಗಿರಲಿಲ್ಲ. ಜ್ಞಾನ ಹಂಚುವ ಈ ಕಾರ್ಯಕ್ಕೆ ಕೈಜೋಡಿಸೋಣ. ಭಾಷೆ ಬಾರದವರಿಗೆ ಭಾಷೆ ಕಲಿಸೋಣ. -ನಿಡುಸಾಲೆ ಪುಟ್ಟಸ್ವಾಮಯ್ಯ, ಪ್ರಕಾಶಕ-ಬರಹಗಾರರ ಸಂಘದ ಅಧ್ಯಕ

ಪುಸ್ತಕ ಸಂತೆಯಲ್ಲಿ ನೂರಕ್ಕೂ ಅಧಿಕ ಸಾಹಿತಿಗಳು, 20 ಸಾವಿರಕ್ಕೂ ಹೆಚ್ಚು ಪುಸ್ತಕ ಪ್ರೇಮಿಗಳು ಪಾಲ್ಗೊಳ್ಳಲಿದ್ದಾರೆ. ಪುಸ್ತಕ ಪ್ರದರ್ಶನ, ಮಾರಾಟ ಮಾತ್ರವಲ್ಲದೆ, ಆಹಾರ ಮೇಳ, ರಂಗೋಲಿ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮಗಳೂ ಇರಲಿವೆ. ಕನ್ನಡೇತರರೇ ಹೆಚ್ಚಾಗಿರುವ ಎಚ್‌ಎಸ್‌ಆರ್‌ ಬಡಾವಣೆಯಲ್ಲಿ ಎರಡು ದಿನಗಳ ಕಾಲ ಕನ್ನಡದ ಕಂಪು ಪಸರಿಸಲಿದೆ. – ಬಿ.ಎನ್‌. ಪರೆಡ್ಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿವೃತ್ತ ರಿಜಿಸ್ಟ್ರಾರ್‌

Advertisement

Udayavani is now on Telegram. Click here to join our channel and stay updated with the latest news.

Next