ಬೆಂಗಳೂರು: ಮಲೆನಾಡು, ಕರಾವಳಿ ಭಾಗದಲ್ಲಿ ಪುಷ್ಯ ಮಳೆ ಅಬ್ಬರಿಸುತ್ತಿದ್ದು, ಪ್ರಮುಖ ನದಿಗಳ ನೀರಿನ ಮಟ್ಟದಲ್ಲಿ ಏರಿಕೆಯಾಗುತ್ತಿದೆ. ರಾಜಧಾನಿ ಬೆಂಗಳೂರಿನಲ್ಲಿ ಭಾನುವಾರ ಮಧ್ಯಾಹ್ನದ ನಂತರ ಉತ್ತಮ ಮಳೆಯಾಗಿದ್ದು, ತಗ್ಗು ಪ್ರದೇಶಗಳು ಜಲಾವೃತಗೊಂಡವು.
ಕೊಡಗು ಜಿಲ್ಲೆಯಾದ್ಯಂತ ಸಾಧಾರಣ ಮಳೆಯಾಗುತ್ತಿದ್ದು, ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ವಿರಾಜಪೇಟೆ ತಾಲೂಕಿನ ಮಲೆತಿರಿಕೆ ಬೆಟ್ಟದಲ್ಲಿರುವ ಎರಡು ಮನೆಗಳ ತಡೆಗೋಡೆಗಳ ಮೇಲೆ ಬರೆ ಕುಸಿದಿದೆ.
ಕಳೆದ ಬಾರಿ ಪ್ರಾಕೃತಿಕ ವಿಕೋಪಕ್ಕೆ ಸಿಲುಕಿ ಅಪಾರ ನಷ್ಟ, ಪ್ರಾಣ ಹಾನಿ ಉಂಟಾಗಿದ್ದ ಜೋಡುಪಾಲದಲ್ಲಿ ಭಾನುವಾರ ನಿರ್ಮಾಣ ಹಂತದಲ್ಲಿರುವ ಮನೆಯೊಂದರ ಮೇಲೆ ಗುಡ್ಡ ಕುಸಿದಿದೆ. ಮನೆ ಜಖಂಗೊಂಡಿದೆ. ಯಾವುದೇ ಜೀವಹಾನಿ ಉಂಟಾಗಿಲ್ಲ. ಕಳೆದ ಮಳೆಗಾಲದಲ್ಲಿ ಹಾನಿಗೀಡಾಗಿದ್ದ ಮಡಿಕೇರಿ ನಗರದ ಹಳೆಯ ಖಾಸಗಿ ಬಸ್ ನಿಲ್ದಾಣದ ಬೃಹತ್ ಬರೆ ಕುಸಿಯುತ್ತಲೇ ಇದೆ.
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಉತ್ತಮ ಮಳೆಯಾಗುತ್ತಿದೆ. ಸಮುದ್ರದಲ್ಲಿ ಅಲೆಗಳ ಅಬ್ಬರ ಕೂಡ ಜೋರಾಗಿದ್ದು, ಪ್ರವಾಸಿಗರನ್ನು ಸಮುದ್ರದ ಬಳಿ ಆಟವಾಡಲು ಬಿಡಲಾಗುತ್ತಿಲ್ಲ. ಸೋಮೇಶ್ವರ ಉಚ್ಚಿಲದಲ್ಲಿ ಕಡಲ್ಕೊರೆತ ಮುಂದುವರೆದಿದ್ದು, ಬೀಚ್ ರಸ್ತೆ ಸಮುದ್ರ ಪಾಲಾಗುವ ಭೀತಿಯಲ್ಲಿದೆ. ಸುಮಾರು 15ಕ್ಕೂ ಹೆಚ್ಚು ಮನೆಗಳಿಗೆ ಸಂಪರ್ಕ ಕಡಿತದ ಅಪಾಯವಿದೆ.
ಶೃಂಗೇರಿ ತಾಲೂಕಿನಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ತುಂಗಾ ನದಿ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ. ರಾಷ್ಟ್ರೀಯ ಹೆದ್ದಾರಿ 169ರ ರಸ್ತೆ ಆನೆಗುಂದ ಬಳಿ ಮಳೆಯಿಂದಾಗಿ ಚರಂಡಿ ನೀರು ಉಕ್ಕಿ ಹರಿದು ಸಂಚಾರಕ್ಕೆ ಅಡಚಣೆಯಾಗಿತ್ತು. ಜು.22ರ ವರೆಗೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಈಗಾಗಲೇ ರೆಡ್ ಅಲರ್ಟ್ ಘೋಷಿಸಿದೆ. ಈ ವೇಳೆ ಸುಮಾರು 40ರಿಂದ 50 ಕಿ.ಮೀ.ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯೂ ಇದೆ.
ಕುಸಿಯುವಂತಿದೆ ಇನ್ನೊಂದು ಬಂಡೆ
ಸುಬ್ರಹ್ಮಣ್ಯ: ಸುಬ್ರಹ್ಮಣ್ಯ-ಸಕಲೇಶಪುರ ರೈಲು ಮಾರ್ಗದ ನಡುವಣ ಸಿರಿಬಾಗಿಲು ಪ್ರದೇಶದ ಮಣಿಬಂಡ ಬಳಿ ಹಳಿಯ ಮೇಲೆ ಉರುಳಲು ಸಿದ್ಧವಾಗಿರುವ ಬಂಡೆಗಲ್ಲು ತೆರವು ಪ್ರಯತ್ನ ಸತತವಾಗಿ ನಡೆಯುತ್ತಿದೆ. ಇದೇ ಸ್ಥಳದಲ್ಲಿ ಇನ್ನೊಂದು ಬಂಡೆ ಕುಸಿಯುವ ಹಂತದಲ್ಲಿದ್ದು, ಆತಂಕಕ್ಕೆ ಕಾರಣವಾಗಿದೆ.
ಜು.20ರಂದು ಬೆಳಗ್ಗೆ ಆರಂಭಗೊಂಡ ಕೆಲಸ ತಡರಾತ್ರಿಯ ತನಕವೂ ಮುಂದುವರಿದಿತ್ತು. ಸಕಲೇಶಪುರ ಮತ್ತು ಸುಬ್ರಹ್ಮಣ್ಯ ವಿಭಾಗದ 80 ಮಂದಿ ಕಾರ್ಮಿಕರು ಕೆಲಸ ನಿರತರಾಗಿದ್ದಾರೆ. ಕಾರ್ಯಾಚರಣೆ ಸೋಮವಾರ ರಾತ್ರಿ ತನಕವೂ ನಡೆಯುವ ಕುರಿತು ರೈಲ್ವೆ ಮೂಲಗಳಿಂದ ಮಾಹಿತಿ ದೊರಕಿದೆ. ಕಾರ್ಯಾಚರಣೆ ಹಿನ್ನೆಲೆಯಲ್ಲಿ ಭಾನುವಾರವೂ ಈ ಮಾರ್ಗದ ರೈಲುಗಳ ಸಂಚಾರವನ್ನು ರದ್ದುಪಡಿಸಲಾಗಿದೆ.