Advertisement

ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಇಂದಿನಿಂದ ಪುಷ್ಪೋತ್ಸವ

11:23 AM Jan 19, 2018 | Team Udayavani |

ಬೆಂಗಳೂರು: ಹಾಸನ ಜಿಲ್ಲೆ ಶ್ರವಣಬೆಳಗೊಳದಲ್ಲಿ ಬರುವ ಫೆಬ್ರವರಿಯಲ್ಲಿ ಜರುಗಲಿರುವ ಐತಿಹಾಸಿಕ ಮಹಾಮಸ್ತಕಾಭಿಷೇಕಕ್ಕೆ ಇಡೀ ವಿಶ್ವವೇ ಕಾತುರವಾಗಿದೆ. ಆದರೆ, ಅದಕ್ಕೂ ಮೊದಲೇ ಸಸ್ಯಕಾಶಿ ಲಾಲ್‌ಬಾಗ್‌ ಮಹಾಮಸ್ತಕಾಭಿಷೇಕಕ್ಕೆ ಸಾಕ್ಷಿಯಾಗಲಿದೆ.

Advertisement

ಜ.19ರಿಂದ 28ರವರೆಗೆ ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಅಕ್ಷರಶ: ಶ್ರವಣಬೆಳಗೊಳದ ಭವ್ಯ “ಇಂದ್ರಗಿರಿ ಬೆಟ್ಟ’ ಹಾಗೂ “ಗೊಮ್ಮಟಮೂರ್ತಿ’ ಅನಾವರಣಗೊಳ್ಳಲಿದೆ. ಪ್ರತಿನಿತ್ಯ ಬಾಹುಬಲಿ ಪಾದಗಳಿಗೆ ಪುಷ್ಪನಮನ, 2018ರ ಮಹಾಮಸ್ತಕಾಭಿಷೇಕದ ಲಾಂಛನದ ಪ್ರತಿ ರೂಪದ ಅನಾವರಣ, ಭಾರತ-ಬಾಹುಬಲಿಯ ನಡುವಿನ ಸಂಘರ್ಷದ ಪ್ರತಿರೂಪ, ಗಾಜಿನ ಮನೆಯಲ್ಲಿ ಬಾಹುಬಲಿಗೆ ಮಹಾಮಸ್ತಕಾಭಿಷೇಕಕ್ಕೆ ಗಣರಾಜ್ಯೋತ್ಸವ ಫ‌ಲಪುಷ್ಪ ಪ್ರದರ್ಶನ ವೇದಿಕೆಯಾಗಲಿದೆ.

ಈ ವಿಷಯ ತಿಳಿಸಿದ ತೋಟಗಾರಿಕೆ ಇಲಾಖೆ ಆಯುಕ್ತ ಪ್ರಭಾಷ್‌ ಚಂದ್ರ ರೇ, ಜ.19ರಂದು ಮಧ್ಯಾಹ್ನ 12 ಗಂಟೆಗೆ ಲಾಲ್‌ಬಾಗ್‌ನ ಗಾಜಿನ ಮನೆಯಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವಿರೇಂದ್ರ ಹೆಗ್ಗಡೆಯವರು ಈ ಬಾರಿಯ ಗಣರಾಜ್ಯೋತ್ಸವ ಫ‌ಲಪುಷ್ಪ ಪ್ರದರ್ಶನ ಉದ್ಘಾಟಿಸಲಿದ್ದಾರೆ.

ಶ್ರವಣಬೆಳಗೋಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಆದಿಚುಂಚನಗಿರಿ ಕ್ಷೇತ್ರದ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ತೋಟಗಾರಿಕೆ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌, ನಾಡೋಜ ಪ್ರೊ. ಹಂಪ ನಾಗರಾಜಯ್ಯ ಇತರರು ಭಾಗವಹಿಸಲಿದ್ದಾರೆ ಎಂದರು.

ಇಂದ್ರಗಿರಿ ಬೆಟ್ಟ-ಗೊಮ್ಮಟ ಮೂರ್ತಿ: ಗಾಜಿನ ಮನೆಯ ಮಧ್ಯ ಭಾಗದಲ್ಲಿ 60*40 ಅಡಿ ಪ್ರದೇಶದಲ್ಲಿ ಹಾಗೂ 30 ಅಡಿ ಎತ್ತರಕ್ಕೆ ಶ್ರವಣಬೆಳಗೊಳದ ಇಂದ್ರಗಿರಿ ಮೈದಳೆಯಲಿದೆ. ಗಿರಿಯ ಮೇಲೆ 15 ಅಡಿ ಎತ್ತರದ ಬಾಹುಬಲಿಯ ಪ್ರಧಾನ ಪುತ್ಥಳಿ, ಗೊಮ್ಮಟವನ್ನು ಸುತ್ತುವರಿದ ರಕ್ಷಣಾ ಕೋಟೆ, ಕಲ್ಲು-ಬಂಡೆ, ಗಿಡ-ಮರಗಳಿಂದ ಕಂಗೊಳಿಸುವ ಇಂದ್ರಗಿರಿ ಬೆಟ್ಟದ ನೋಟ, ಅಲ್ಲಲ್ಲಿ ವಿನ್ಯಾಸಗೊಂಡಿರುವ ಆಂಥೋರಿಯಂ, ಹೈಪರಿಕಂ, ಪಿನ್‌ಕುಷನ್‌, ಹೈಡ್ರಾಂಜಿಯಾ, ಏಷ್ಯಾಟಿಕ್‌ ಹಾಗೂ ಓರಿಯಂಟಲ್‌ ಲಿಲ್ಲಿಗಳು ಇತ್ಯಾದಿ ದೇಶಿ-ವಿದೇಶಿ ಹೂಗಳ ಪುಷ್ಪಪ್ರಭೆ ಹೊರಹೊಮ್ಮಲಿದೆ.

Advertisement

ಲಾಂಛನ ಪ್ರದರ್ಶನ, ಮಸ್ತಕಾಭಿಷೇಕ: ಗಾಜಿನ ಮನೆಯ ಎಡಭಾಗದಲ್ಲಿ 18 ಅಡಿ ಎತ್ತರ ಹಾಗೂ 20 ಅಡಿ ಆಗಲದ ಫೆಬ್ರವರಿಯಲ್ಲಿ ನಡೆಯಲಿರುವ 88ನೇ ಮಹಾಮಸ್ತಕಾಭಿಷೇಕ ಆಕರ್ಷಕ ಲಾಂಛನ ತಲೆ ಎತ್ತಲಿದೆ. ನಾಲ್ಕು ವೀಳ್ಯದ ಹಳಸುಗಳನ್ನು ಈ ಲಾಂಛನ ಒಳಗೊಂಡಿದ್ದು, ವಿಶ್ವಭೂಪಟ, ಭಾರತದ ಭೂಪಟ, ಕರ್ನಾಟಕದ ಭೂಪಟ ಹಾಗೂ ಹಾಸನ ಜಿಲ್ಲೆಯ ಭೂಪಟ ಒಳಗೊಂಡಿದೆ. ಮೂರು ಅಡಿ ಪೀಠದ ಮೇಲೆ ನಿಂತ 1 ಅಡಿ ಎತ್ತರದ ಬಾಹುಬಲಿ ಮೂರ್ತಿಗೆ ಕೆಂಪು, ಹಳದಿ ಹಾಗೂ ಗಂಧ ವರ್ಣದಿಂದ ಕೂಡಿದ ಅಭಿಷೇಕವನ್ನೂ ಏರ್ಪಡಿಸಲಾಗಿದೆ.

ಪ್ರವೇಶ ದರ: ಫ‌ಲಪುಷ್ಪ ಪ್ರದರ್ಶನಕ್ಕೆ ವಯಸ್ಕರಿಗೆ 60 ಹಾಗೂ ಮಕ್ಕಳಿಗೆ 20 ರೂ. ಪ್ರವೇಶ ದರ ನಿಗದಿ ಪಡಿಸಲಾಗಿದೆ. ಬುಕ್‌ ಮೈ ಶೋ ಅಪ್ಲಿಕೇಷನ್‌ ಮೂಲಕವೂ ಟಿಕೆಟ್‌ ಖರೀದಿಸಬಹುದು.  ಶಾಲಾ ಮಕ್ಕಳಿಗೆ ಜ. 20, 21, 26, 27 ಮತ್ತು 28 ರಂದು ಹೊರತು ಪಡಿಸಿ ಇತರೆ ದಿನಗಳಲ್ಲಿ ಶಾಲಾ ಸಮವಸ್ತ್ರದಲ್ಲಿ ಬಂದರೆ ಉಚಿತ ಪ್ರವೇಶ ಇರುತ್ತದೆ.

ಪೊಲೀಸ್‌ ಭದ್ರತೆ, ಪಾರ್ಕಿಂಗ್‌: ಲಾಲ್‌ಬಾಗ್‌ನ ನಾಲ್ಕು ದ್ವಾರಗಳಲ್ಲಿ ಲೋಹ ನಿರೋಧಕ ಯಂತ್ರ ಅಳವಡಿಸಲಾಗುತ್ತದೆ. ಹ್ಯಾಂಡ್‌ ಮೆಟಲ್‌ ಡಿಟೆಕ್ಟರ್‌ಗಳನ್ನು ನಿಯೋಜಿಸಲಾಗುತ್ತದೆ. ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಲು 100 ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಚಿಕಿತ್ಸೆಗೆ ಐದು ಆ್ಯಂಬುಲೆನ್ಸ್‌, ಅವಘಡವಾದರೆ ಒಂದು ಅಗ್ನಿ ಶಾಮಕದಳದ ವಾಹನ ಸ್ಥಳದಲ್ಲಿಯೇ ಇರಿಸಿಕೊಳ್ಳಲಾಗಿದೆ.

ಫ‌ಲಪುಷ್ಪ ಪ್ರದರ್ಶನಕ್ಕೆ ಬರುವವರ ವಾಹನಗಳನ್ನು ಶಾಂತಿನಗರ ಬಸ್‌ ನಿಲ್ದಾಣ, ಅಲ್‌ ಅಮೀನ್‌ ಕಾಲೇಜು ಕ್ರೀಡಾಂಗಣ ಹಾಗೂ ಜೆಸಿ ರಸ್ತೆಯ ಬಿಬಿಎಂಪಿಯ ವಾಹನ ನಿಲ್ದಾಣ ಕಟ್ಟಡದಲ್ಲಿ ನಿಲ್ಲಿಸಲು ವ್ಯವಸ್ಥೆ ಮಾಡಲಾಗಿದೆ.  ಲಾಲ್‌ಬಾಗ್‌ನ ಹೊರ ಭಾಗದ ಆಪ್‌ಕಾಮ್ಸ್‌ ಬಳಿಯಲ್ಲಿ ಓಲಾ ಹಾಗೂ ಉಬರ್‌ ವಾಹನಗಳ ಬಂದು ಹೋಗಲು ಅವಕಾಶ ಕಲ್ಪಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next