Advertisement

ಪುಷ್ಪಗಿರಿ ತಪ್ಪಲಿನಲ್ಲಿ ಎಎನ್‌ಎಫ್ ಶೋಧ

11:06 PM Jul 22, 2019 | Lakshmi GovindaRaj |

ಸೋಮವಾರಪೇಟೆ: ಇಲ್ಲಿಗೆ ಸಮೀಪದ ಹೆಗ್ಗಡಮನೆ ಗ್ರಾಮದ ಪುಷ್ಪಗಿರಿ ತಪ್ಪಲಿನ ಸನಿಹ ಎಎನ್‌ಎಫ್‌ ತುಕಡಿ ಸೋಮವಾರ ಶೋಧ ಕಾರ್ಯಾಚರಣೆ ನಡೆಸಿದ ಬಗ್ಗೆ ವರದಿಯಾಗಿದೆ. ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಎಎನ್‌ಎಫ್ ಸಿಬ್ಬಂದಿ ಅರಣ್ಯದ ಸುತ್ತಮುತ್ತ ಪರಿಶೀಲನೆ ನಡೆಸಿದರು ಎಂದು ಸ್ಥಳೀಯರು ತಿಳಿಸಿದ್ದಾರೆ. ಎಎನ್‌ಎಫ್‌ ಶಸ್ತ್ರಸಜ್ಜಿತ ಸಿಬ್ಬಂದಿ ಹೆಗ್ಗಡಮನೆ ಗ್ರಾಮಕ್ಕೆ ಬಂದು ಪರಿಶೀಲಿಸಿರುವುದನ್ನು ಸೋಮವಾರಪೇಟೆ ವಲಯ ಅರಣ್ಯಾಧಿಕಾರಿ ಲಕ್ಷ್ಮೀಕಾಂತ್‌ ಖಚಿತಪಡಿಸಿದ್ದಾರೆ.

Advertisement

ಈ ಹಿಂದೆ ಪುಷ್ಪಗಿರಿ ತಪ್ಪಲಿನಲ್ಲಿ ನಕ್ಸಲರು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶೋಧ ನಡೆದಿತ್ತು. ಈ ಕಾರಣದಿಂದ ಆರು ತಿಂಗಳಿಗೊಮ್ಮೆ ಎಎನ್‌ಎಫ್‌ ಸಿಬ್ಬಂದಿ ಪರಿಶೀಲನೆ ನಡೆಸಲಿದ್ದಾರೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯವರ ಸೂಚನೆ ಮೇರೆಗೆ ಕಾರ್ಯಾಚರಣೆ ನಡೆಸಲಾಗಿದೆ ಎಂದು ಸೋಮವಾರಪೇಟೆ ಠಾಣಾಧಿಕಾರಿ ಶಿವಶಂಕರ್‌ ತಿಳಿಸಿದ್ದಾರೆ.

ಪುಷ್ಪಗಿರಿ ತಪ್ಪಲಿನಲ್ಲಿ ಹೆಗ್ಗಡಮನೆ ಗ್ರಾಮವಿದ್ದು 35 ಕೃಷಿಕ ಕುಟುಂಬಗಳು ವಾಸಿಸುತ್ತಿವೆ. ಮಳೆ ಸುರಿಯುತ್ತಿರುವುದರಿಂದ ಆಹಾರ ಪದಾರ್ಥಗಳನ್ನು ಪಡೆಯಲು ನಕ್ಸಲರು ಬರಬಹುದು ಎಂಬ ಊಹೆಯಿಂದ ಎಎನ್‌ಎಫ್‌ ಸಿಬ್ಬಂದಿ ಪರಿಶೀಲನೆ ಮಾಡಿರಬಹುದೆಂದು ಸ್ಥಳೀಯ ನಿವಾಸಿಯೊಬ್ಬರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next