ವೇಣೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಪ್ರಥಮ ಬಾರಿಗೆ ವೇಣೂರಿನಲ್ಲಿ ಚಾತುರ್ಮಾಸ್ಯ ವ್ರತಾಚರಣೆಗೆ ಅವಕಾಶ ಸಿಕ್ಕಿದೆ. ಸಾಧು – ಸಂತರ ಸಂಗದಿಂದ ಪಾಪ ಕರ್ಮಗಳನ್ನು ನಿವಾರಿಸಿಕೊಂಡು ಸಿಕ್ಕಿದ ಮಾರ್ಗದರ್ಶನವನ್ನು ಅನುಸರಿಸಿ ಮುಂದಿನ ಪೀಳಿಗೆಗೆ ದಾಟಿಸಬೇಕು ಎಂದು ಪುಷ್ಪಗಿರಿ ಮುನಿಶ್ರೀ 108 ಶ್ರೀ ಪ್ರಸಂಗ ಸಾಗರ ಮಹಾರಾಜರು ನುಡಿದರು. ಅವರು ಜು. 7ರಿಂದ ಅ. 10ರವರೆಗೆ ಜರಗಲಿರುವ ಚಾತುರ್ಮಾಸ್ಯ ವ್ರತಾಚರಣೆಯ ಹಿನ್ನೆಲೆಯಲ್ಲಿ ರವಿವಾರ ವೇಣೂರಿಗೆ ಪುರಪ್ರವೇಶ ಮಾಡಿ ಆಶೀರ್ವಚನ ನೀಡಿದರು.
ವೇಣೂರಿನಲ್ಲಿ ಚಾತುರ್ಮಾಸ್ಯ ಸೌಭಾಗ್ಯ
ಐತಿಹಾಸಿಕ ಹಿನ್ನೆಲೆಯುಳ್ಳ ವೇಣೂರು ಶ್ರೀ ಗೋಮಟೇಶ್ವರ ಹಾಗೂ ಪಾರ್ಶ್ವನಾಥನ ಸನ್ನಿಧಿಯಲ್ಲಿ ನನಗೆ ಚಾತುರ್ಮಾಸ್ಯ ನಡೆಸಲು ಅವಕಾಶ ಸಿಕ್ಕಿರುವುದು ಸೌಭಾಗ್ಯ. ಪುರಪ್ರವೇಶ ಮಾಡಿರುವುದು ಗೋಮಟೇಶ್ವರ ಸ್ವಾಮಿ. ಇಂದು ನೀವೆಲ್ಲ ಸ್ವಾಗತ ಮಾಡಿದ್ದು ಶ್ರೀ ಗೋಮಟೇಶ್ವರ ಸ್ವಾಮಿಯನ್ನೇ ಹೊರತು ನನ್ನನ್ನಲ್ಲ. ಹೀಗಾಗಿ ಗೋಮಟೇಶ್ವರನ, ಪಾರ್ಶ್ವನಾಥನ ಚರಣಕಮಲಗಳಲ್ಲಿ ಚಾತುರ್ಮಾಸ್ಯ ಮಾಡುವ ಅವಕಾಶ ಸಿಕ್ಕಿರುವುದು ನನ್ನ ಪುಣ್ಯ ಎಂದರು. ಜು. 14ರಂದು ಚಾತುರ್ಮಾಸ್ಯ ಕಲಶ ಸ್ಥಾಪನಾ ಕಾರ್ಯಕ್ರಮ ಇದ್ದು, ಅಂದು ರಾಜ್ಯದ ವಿವಿಧ ಭಾಗಗಳಿಂದ ಪಂಡಿತರು, ಸಂಗೀತಕಾರರು ಆಗಮಿಸಲಿದ್ದಾರೆ ಎಂದರು.
ಸಚಿವ ಬಿ. ರಮಾನಾಥ ರೈ, ಬೆಳ್ತಂಗಡಿ ತಹಶೀಲ್ದಾರ್ ತಿಪ್ಪೇಸ್ವಾಮಿ, ದ.ಕ. ಜಿಲ್ಲಾ ಬಿಜೆಪಿ ಯುವಮೋರ್ಚಾದ ಅಧ್ಯಕ್ಷ ಹರೀಶ್ ಪೂಂಜ, ದ.ಕ. ಜಿ.ಪಂ. ಮಾಜಿ ಉಪಾಧ್ಯಕ್ಷ ರಾಜಶ್ರೀ ಹೆಗ್ಡೆ, ಜಿಲ್ಲಾ ಜಿ.ಪಂ. ಸದಸ್ಯ ಬಿ. ಪದ್ಮಶೇಖರ ಜೈನ್, ಪ್ರವೀಣ್‌ಚಂದ್ರ ನಡಿಬೆಟ್ಟು, ಭಾರತೀಯ ಜೈನ್ ಮಿಲನ್ ವಲಯ ಉಪಾಧ್ಯಕ್ಷ ಪುಷ್ಪರಾಜ ಜೈನ್, ಉಜಿರೆ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಪ್ರೊ| ಎಸ್. ಪ್ರಭಾಕರ್, ಚಾತುರ್ಮಾಸ್ಯ ವ್ಯವಸ್ಥಾಪನ ಸಮಿತಿ ಕಾರ್ಯಾಧ್ಯಕ್ಷ ನವೀನ್‌ಚಂದ್ ಬಲ್ಲಾಳ್ ಉಪಸ್ಥಿತರಿದ್ದರು. ಉಪನ್ಯಾಸಕ ಮಹಾವೀರ ಜೈನ್ ಮೂಡುಕೋಡಿ ಕಾರ್ಯಕ್ರಮ ನಿರ್ವಹಿಸಿದರು.
ಜು. 9ರಂದು ಗುರುಪೂರ್ಣಿಮೆ; ಎಲ್ಲ ಶ್ರಾವಕ-ಶ್ರಾವಕಿಯರು ತಮ್ಮ ಮಕ್ಕಳೊಂದಿಗೆ ಬರಬೇಕು. ಅಂದು ಮಕ್ಕಳಿಗೆ ಗುರುಮಂತ್ರ ದೀಕ್ಷೆಯನ್ನು ನೀಡಲಿದ್ದೇನೆ. ಈ ಮೂಲಕ ಮಕ್ಕಳಲ್ಲಿ ಜ್ಞಾನದ ಪರಿವರ್ತನೆ ಆಗಬೇಕು ಎಂಬ ಬಯಕೆ ನನ್ನದು.
– ಮುನಿಶ್ರೀ ಪ್ರಸಂಗಸಾಗರ ಮಹಾರಾಜರು