ಹೈದರಾಬಾದ್: ಅಲ್ಲು ಅರ್ಜುನ್ ಅವರ ಪ್ಯಾನ್ ಇಂಡಿಯಾ ʼಪುಷ್ಪ-2ʼ ಸಿನಿಮಾ ವರ್ಷದ ಬಹು ನಿರೀಕ್ಷಿತ ಸಿನಿಮಾಗಳಲ್ಲೊಂದು. ʼಕೆಜಿಎಫ್-2 ಹಾಗೂ ʼಬಾಹುಬಲಿ-2ʼ ಬಳಿಕ ಒಂದು ಸಿನಿಮಾಕ್ಕಾಗಿ ಪ್ರೇಕ್ಷಕರು ಅತ್ಯಂತ ಕಾತರದಿಂದ ಕಾಯುತ್ತಿದ್ದಾರೆ ಅಂದರೆ ಅದು ʼಪುಷ್ಪ-2ʼ ಸಿನಿಮಾಕ್ಕಾಗಿ ಎಂದರೆ ತಪ್ಪಾಗದು.
ಇತ್ತೀಚೆಗೆ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಅಲ್ಲು ಅರ್ಜುನ್ ಅವರು ನಾರಿಯ ವೇಷದಲ್ಲಿ ಮಾರಿಯ ರೋಷವನ್ನು ತಾಳಿ ಅಬ್ಬರಿಸಿದ್ದಾರೆ. ಇನ್ನು ಕೆಲ ದಿನಗಳಲ್ಲಿ ಎರಡನೇ ಟೀಸರ್ ರಿಲೀಸ್ ಆಗುವ ಸಾಧ್ಯತೆಯಿದೆ.
ಸುಕುಮಾರ್ ನಿರ್ದೇಶನದ ʼಪುಷ್ಪ- 2ʼ ಸಿನಿಮಾದ ಉತ್ತರ ಭಾರತ ವಿತರಣೆ ಹಕ್ಕುಗಳನ್ನು ಅನಿಲ್ ಥಡಾನಿ ಅವರು ಮುಂಗಡ ಆಧಾರದ ಮೇಲೆ 200 ಕೋಟಿ ರೂಪಾಯಿಗಳ ದಾಖಲೆ ಬೆಲೆಗೆ ಪಡೆದುಕೊಂಡಿರುವುದು ವರದಿಯಾಗಿದೆ.
ಇದೀಗ ಸಿನಿಮಾದ ಡಿಜಿಟಲ್ ಹಕ್ಕು ಕೂಡ ದಾಖಲೆಯ ಬೆಲೆಗೆ ಮಾರಾಟವಾಗಿದೆ ಎನ್ನುವ ಸುದ್ದಿಯೊಂದು ಟಾಲಿವುಡ್ ವಲಯದಲ್ಲಿ ಹರಿದಾಡುತ್ತಿದೆ ಎಂದು ʼಪಿಂಕ್ ವಿಲ್ಲಾʼ ವರದಿ ಮಾಡಿದೆ.
ʼಪುಷ್ಪ-2ʼ ಸಿನಿಮಾದ ಡಿಜಿಟಲ್ ಹಕ್ಕನ್ನು ನೆಟ್‌ಫ್ಲಿಕ್ಸ್ 250 ಕೋಟಿ ರೂ.ಗಳ ಮೂಲ ಬೆಲೆಗೆ ಖರೀದಿಸಿದೆ. ಸಿನಿಮಾ ರಿಲೀಸ್ ಆದ ಬಳಿಕ ಅದು ಬಾಕ್ಸ್ ಆಫೀಸ್ ನಲ್ಲಿ ಹೇಗೆ ಕಮಾಯಿ ಮಾಡುತ್ತದೆ ಎನ್ನುವುದರ ಮೇಲೆ ಈ ಮೂಲ ಬೆಲೆ ಹೆಚ್ಚಾಗುವ ಸಾಧ್ಯತೆಯಿದೆ. 300 ಕೋಟಿ ರೂಪಾಯಿವರೆಗೂ ಇದರ ಬೆಲೆ ವಿಸ್ತರಿಸಬಹುದು ಎಂದು ಮೂಲಗಳು ತಿಳಿಸಿರುವುದಾಗಿ ʼಪಿಂಕ್ ವಿಲ್ಲಾʼ ವರದಿ ಮಾಡಿದೆ.
ಈ ಹಿಂದೆ ʼಆರ್ ಆರ್ ಆರ್ʼ ಸಿನಿಮಾದ ಡಿಜಿಟಲ್ ಹಕ್ಕು 170 ಕೋಟಿ ರೂ.ಗೆ ಮಾರಾಟವಾಗಿತ್ತು. ʼಪುಷ್ಪ-2ʼ ಸಿನಿಮಾದ ಡಿಜಿಟಲ್ ಹಕ್ಕು 250 ಕೋಟಿ ರೂಪಾಯಿಗೆ ಮಾರಾಟವಾದರೆ ಎಲ್ಲಾ ಭಾಷೆಗಳಲ್ಲೂ ಇದು ದಾಖಲೆಯಾಗಲಿದೆ.
ಅಲ್ಲು ಅರ್ಜುನ್ ಜೊತೆ ಸಿನಿಮಾದಲ್ಲಿ ಫಾಹದ್ ಫಾಸಿಲ್, ರಶ್ಮಿಕಾ ಮಂದಣ್ಣ ಸೇರಿದಂತೆ ಇತರೆ ಪ್ರಮುಖರು ಕಾಣಿಸಿಕೊಳ್ಳಲಿದ್ದಾರೆ. ಇದೇ ವರ್ಷದ ಆಗಸ್ಟ್ 15 ರಂದು ಸಿನಿಮಾ ತೆರೆ ಕಾಣಲಿದೆ.