Advertisement

ತ್ಯಾಜ್ಯ ಕೇಂದ್ರವಾಯಿತು ಪುಷ್ಕರಣಿ!

11:57 AM Oct 05, 2018 | Team Udayavani |

ಬಸವಕಲ್ಯಾಣ: ನಗರ ಸಮೀಪದ ಶಿವಪೂರ ಗ್ರಾಮದ ಐತಿಹಾಸಿಕ ಹಿನ್ನೆಲೆ ಹೊಂದಿದ ಶ್ರೀ ಕೊಂಡಲೇಶ್ವರ (ಸಿದ್ಧೇಶ್ವರ) ದೇವಸ್ಥಾನದ ಎದುರು ಇರುವ ಹಳೆಯ ಪುಷ್ಕರಣಿ (ಕಲ್ಯಾಣಿ) ಇಂದು ನಿರ್ಲಕ್ಷ್ಯಕ್ಕೊಳಗಾಗಿ ಹಾಳಾಗುತ್ತಿರುವುದು ಭಕ್ತರು ಮತ್ತು ಸಾರ್ವಜನಿಕರಿಗೆ ಬೇಸರ ತಂದಿದೆ.

Advertisement

ಬಸವಕಲ್ಯಾಣ ಮತ್ತು ಶಿವಪೂರದ ರಸ್ತೆ ಮಧ್ಯದಲ್ಲಿ ಶ್ರೀ ಕೊಂಡಲೇಶ್ವರ ದೇವಸ್ಥಾನ ಇದೆ. ಈ ದೇವಸ್ಥಾನಕ್ಕೆ ತನ್ನದೆ ಆದ ಐತಿಹಾಸಿಕ ಹಿನ್ನೆಲೆ ಇದೆ. ಹಾಗಾಗಿ ಪ್ರತಿವರ್ಷ ಶ್ರಾವಣ ಮಾಸದಲ್ಲಿ ಒಂದು ತಿಂಗಳ ಕಾಲ ಭಜನೆ, ಕೀರ್ತನೆ, ಧಾರ್ಮಿಕ ಕಾರ್ಯಕ್ರಮಗಳು ಮತ್ತು ಮದುವೆ ಸಮಾರಂಭ, ತೊಟ್ಟಿಲು, ಮಕ್ಕಳ ಉಪನಯನ ಸಮಾರಂಭಗಳು ವರ್ಷಪೂರ್ತಿ ನಡೆಯುತ್ತವೆ. ಆದ್ದರಿಂದ ಭಕ್ತರಿಗೆ ಇದು ಪುಣ್ಯಕ್ಷೇತ್ರವಾಗಿದೆ. ಆದರೆ ಪುಷ್ಕರಣಿ ಹಾಗೂ ನೀರು ಮಾತ್ರ ನಿರ್ಲಕ್ಷ್ಯಕ್ಕೆ ಇಳಗಾಗಿರುವುದರಿಂದ ಉಪಯೋಗಕ್ಕೆ ಬಾರದಂತೆ ಕಲುಷಿತವಾಗಿದೆ.

ಒಂದು ಕಾಲದಲ್ಲಿ ಗರ್ಭಗುಡಿ, ದೇವರ ಮೂರ್ತಿಯಿಂದ ಹಿಡಿದು, ಅಡುಗೆ ಮಾಡಲು, ಕುಡಿಯಲು ಈ ಪುಷ್ಕರಣಿ ನೀರನ್ನು ಅಮೃತ ಎಂದು ಭಾವಿಸಿ ಉಪಯೋಗಿಸುತ್ತಿದ್ದರು. ಆದರೆ ಇಂದು ಕಲ್ಯಾಣಿ ಸುತ್ತ ಕಪ್ಪುಕಲ್ಲಿನಿಂದ ನಿರ್ಮಿಸಲಾದ ಗೋಡೆ ಸಂಪೂರ್ಣ ಹಾಳಾಗಿದೆ. ಅಲಲ್ಲಿ ಗೋಡೆ ಬಿರುಕುಬಿಟ್ಟು, ಕಲ್ಲುಗಳು ಕೆಳಗೆ ಬಿದ್ದಿವೆ. ಸಾರ್ವಜನಿಕರು ಗಣೇಶ ವಿಸರ್ಜನೆ ಮಾಡುವ ಮತ್ತು ದಸರಾ, ದೀಪಾವಳಿ ಸಂದರ್ಭದಲ್ಲಿ ಪ್ಲಾಸ್ಟಿಕ್‌ ಚೀಲ, ಬಾಳೆ ಎಲೆ, ಕಬ್ಬು ಸೇರಿದಂತೆ ತ್ಯಾಜ್ಯ ಹಾಕುವ ಕೇಂದ್ರವಾಗಿ ಮಾರ್ಪಟ್ಟಿದೆ. ಬರಗಾಲ ಇದ್ದಾಗ ಗ್ರಾಮದ ಸುತ್ತಮುತ್ತ ಇರುವ ಬಾವಿಗಳು ಬತ್ತಿ ಹೋಗಿರುವ ಉದಾಹರಣೆ ಇದೆ. ಆದರೆ ಪುಷ್ಕರಣಿ ಮಾತ್ರ ಬತ್ತಿಲ್ಲ. ಆದರೆ ಈಗ ಪುಷ್ಕರಣಿ ತುಂಬ ಹೂಳು ತುಂಬಿ ಮಳೆ ನೀರು ಕೂಡ ಸಂಗ್ರಹವಾಗುತ್ತಿಲ್ಲ.

ಇದರ ಸಂರಕ್ಷಣೆಗಾಗಿ ಸಂಬಂಧ ಪಟ್ಟವರನ್ನು ಭೇಟಿ ಮಾಡಿದರೂ ಯಾವುದೇ ಪ್ರಯೋಜವಾಗಿಲ್ಲ ಎಂಬುದು ಗ್ರಾಮಸ್ಥರ ಆರೋಪವಾಗಿದೆ. ಒಟ್ಟಿನಲ್ಲಿ ಭಕ್ತಾದಿಗಳು ಅಮೃತ ಎಂದು ಕುಡಿಯುವ ಪುಷ್ಕರಣಿ(ಕಲ್ಯಾಣಿ) ನೀರು ಇಂದು ನಿರ್ಲಕ್ಷ್ಯದಿಂದ ಕಲ್ಮಷವಾಗಿರುವುದು ನೋವಿನ ಸಂಗತಿಯಾಗಿದೆ.

ಶಿವಪುರದ ಶ್ರೀ ಕೊಂಡಲೇಶ್ವರ (ಸಿದ್ದೇಶ್ವರ) ದೇವಸ್ಥಾನ ಪುಷ್ಕರಣಿ ಸಂರಕ್ಷಣೆಗೆ ಗ್ರಾಮಸ್ಥರು ಮತ್ತು ಭಕ್ತರಲ್ಲಿ ತುಂಬಾ
ಆಸಕ್ತಿ ಇದೆ. ಕೇವಲ ಗ್ರಾಮಸ್ಥರಿಂದ ಮಾತ್ರ ಇದು ಸಾಧ್ಯವಿಲ್ಲ. ಆದ್ದರಿಂದ ಜನಪ್ರತಿನಿಧಿಗಳು ಮತ್ತು ಸಂಘ, ಸಂಸ್ಥೆಗಳ ಸಹಕಾರ ನೀಡದರೆ ಪುಷ್ಕರಣಿಯಲ್ಲಿ ಭರ್ತಿಯಾದ ಹೂಳು ಎತ್ತುವುದು ಮತ್ತು ಸಾರ್ವಜನಿಕರು ತ್ಯಾಜ್ಯ ಬಿಸಾಡದಂತೆ ಸುತ್ತ ಕಬ್ಬಿಣದ ಸರಳು ಅಳವಡಿಸಲಾಗುವುದು.
 ಶ್ರೀ ಅಭಿನವ ಘನಲಿಂಗ ರುದ್ರಮುನಿ , ಶಿವಾಚಾರ್ಯ, ತ್ರೀಪುರಾಂತ

Advertisement

ಪುಷ್ಕರಣಿ ಸಂರಕ್ಷಣೆಗಾಗಿ ಸಂಬಂಧ ಪಟ್ಟವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿತ್ತು. ಆದರೆ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ವರ್ಷ ಕಳೆದಂತೆ
ಪುಷ್ಕರಣಿ ಹಾಳಾಗುತ್ತಿದೆ. ದೇವಸ್ಥಾನದ ಅರ್ಚಕರು

„ವೀರಾರೆಡ್ಡಿ ಆರ್‌.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next