Advertisement

ಪುರುಷಾರ್ಥಗಳು ಭಾರತೀಯ ಜೀವನ ಮೌಲ್ಯಗಳು: ಸ್ವರ್ಣವಲ್ಲೀ ಶ್ರೀ

10:08 PM Jul 30, 2022 | Team Udayavani |

ಶಿರಸಿ: ವೈದಿಕ ವಾಙ್ಮಯದಲ್ಲಿ ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ನಾಲ್ಕು ಪುರುಷಾರ್ಥಗಳನ್ನು ಹೇಳಿದ್ದಾರೆ. ಇವು ಭಾರತೀಯ ಜೀವನ ಮೌಲ್ಯಗಳಾಗಿವೆ ಎಂದು ಸೋಂದಾ ಶ್ರೀ ಸ್ವರ್ಣವಲ್ಲೀ ಮಠಾಧೀಶ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ನುಡಿದರು.

Advertisement

ಅವರು ಅವರ 32 ನೇ ಚಾತುರ್ಮಾಸ್ಯದ ಸಂದರ್ಭದಲ್ಲಿ ಶಿರಸಿ ಸೀಮೆಯ ಒಳಭಾಗಿ ಮತ್ತು ಬೆಟ್ಟಳ್ಳಿಭಾಗಿಯ ಶಿಷ್ಯ ಭಕ್ತರು ಸಮರ್ಪಿಸಿದ ಭಿಕ್ಷೆ, ಪಾದಪೂಜೆ ಸೇವೆಗಳನ್ನು ಸ್ವೀಕರಿಸಿ ಸಭೆಯಲ್ಲಿ ಆಶೀರ್ವಚನ‌ ನುಡಿದರು.

ಧರ್ಮ, ಅರ್ಥ, ಕಾಮ, ಮೋಕ್ಷ ನಾಲ್ಕು ಪುರುಷಾರ್ಥಗಳು. ಅಂದರೆ ಮನುಷ್ಯನಿಂದ ಬಯಸಲ್ಪಡುವವುಗಳು, ಸಾಧಿಸಬೇಕಾದವುಗಳಾಗಿವೆ. ಧಾರ್ಮಿಕ ಯಜ್ಞ, ಯಾಗ, ಪೂಜೆ, ತೀರ್ಥ ಕ್ಷೇತ್ರಗಳ ದರ್ಶನ, ದಾನ ಮಾಡುವುದೇ ಮೊದಲಾದವುಗಳು ಧರ್ಮ ಎಂಬ ಪುರುಷಾರ್ಥದಲ್ಲಿ ಸೇರುತ್ತವೆ. ಕೃಷಿ, ಪಶುಪಾಲನೆ, ವ್ಯಾಪಾರ ಇತ್ಯಾದಿಗಳ ಮೂಲಕ ಸಂಪತ್ತಿನ ಸಂಪಾದನೆ ಅರ್ಥ ಎಂಬ ಪುರುಷಾರ್ಥದಲ್ಲಿ ಸೇರುತ್ತದೆ ಎಂದ ಶ್ರೀಗಳು, ಕಾಮ ಎಂದರೆ ಶಾರೀರಿಕ ಸುಖ, ಇಂದ್ರಿಯ ಸಂಬಂಧಿಸಿದ ಆಸೆಗಳನ್ನು ಪೂರೈಸುವುದು. ವಿವಾಹ ಮೊದಲಾದ ಸಂಸ್ಕಾರಗಳಿಂದ ಪಡೆದುಕೊಳ್ಳುವವುಗಳು. ಇವು ಧರ್ಮ ಸಮ್ಮತವಾಗಿರಬೇಕು. ಮೋಕ್ಷ ವೆಂದರೆ ಸಂಸಾರ ಚಕ್ರದಿಂದ ಬಿಡುಗಡೆ ಬಯಸುವುದು. ಸದಾ ಅಧ್ಯಾತ್ಮ ಚಿಂತನೆಗಳಿಂದ ಸಿದ್ಧಿಸಿಕೋಳ್ಳಬೇಕಾಗುತ್ತದೆ. ಇವುಗಳನ್ನು ತ್ರಿಕಾಲ ಜ್ಞಾನಿಗಳಾದ ಋಷಿಮುನಿಗಳು ನಮಗೆ ತಿಳಿಸಿದ್ದಾರೆ. ಇವು ನಮ್ಮ ಭಾರತೀಯ ಜೀವನದ ಮೌಲ್ಯಗಳು ಎಂದರು.

ಬದುಕನ್ನು ಸರಿಯಾಗಿ ರೂಪಿಸುವ ಸೂತ್ರಗಳೇ ಮೌಲ್ಯಗಳು. ಪ್ರತಿಯೊಬ್ಬ ವ್ಯಕ್ತಿಯೂ ಈ ಪುರುಷಾರ್ಥಗಳ ಚೌಕಟ್ಟಿನಲ್ಲಿ ಮುನ್ನಡೆದರೆ ಜೀವನ ಉತ್ತಮವಾಗುತ್ತದೆ. ಸುಗಮವಾಗುತ್ತದೆ. ಕೊನೆಯಲ್ಲಿ ಮೋಕ್ಷ ಲಭಿಸುತ್ತದೆ. ಚೌಕಟ್ಟು ಎಂದರೆ ನಾಲ್ಕು ಮೂಲೆಯಲ್ಲಿ ಕಟ್ಟಿದ ಕಟ್ಟುಗಳು. ನಮ್ಮ ಜೀವನ ನಾಲ್ಕು ಪುರುಷಾರ್ಥ ಗಳೆಂಬ ಸೂತ್ರಗಳಿಂದ ಕಟ್ಟಲ್ಪಟ್ಟಿದೆ. ಅದು ಯಾವುದೇ ಮೂಲೆಯಲ್ಲಿ ಕಳಚಿದರೂ ಹಾನಿ ಖಚಿತ ಎಂದರು.

ಇವತ್ತು ಸಮಾಜ ಯಾವುದು ಸುಲಭವಾಗಿ ಸಿಗುವುದೋ ಅದನ್ನು ವಿಚಾರ ಮಾಡದೆ ಸ್ವೀಕರಿಸುತ್ತದೆ. ಆದರೆ ಅದನ್ನು ಸ್ವೀಕರಿಸುವಾಗ ಅದು ನಮ್ಮ ಚೌಕಟ್ಟು ಮೀರಿದ್ದೋ ಅಥವಾ ಅದರೊಳಗೇ ಇರುವಂತಹದ್ದೋ ಹಾಗೂ ನಮಗೆ ಸಾಧಕವೋ, ಬಾಧಕವೋ ಯೋಚಿಸಬೇಕು ಎಂದರು.

Advertisement

ನಾಲ್ಕು ಪುರುಷಾರ್ಥಗಳಲ್ಲಿ ಅರ್ಥ, ಕಾಮಗಳಲ್ಲಿ ಮನುಷ್ಯನಿಗೆ ಒಲವು ಹೆಚ್ಚು. ಆದರೆ ಅವು ಧರ್ಮದ ಎಲ್ಲೆಯನ್ನು ಮೀರಬಾರದು. ಹಾಗೆಯೇ ಮೋಕ್ಷಕ್ಕೆ ಸಹಕಾರಿ ಆಗಿರಬೇಕು. ಹಾಗಾಗಿಯೇ ಇವೆರಡೂ ಧರ್ಮ ಮತ್ತು ಮೋಕ್ಷಗಳ ಮಧ್ಯದಲ್ಲಿವೆ ಎಂದೂ ಹೇಳಿದರು.

ನಮಗೆ ಹಾಕಿಕೊಟ್ಟ ಈ ಪುರುಷಾರ್ಥವೆಂಬ ಚೌಕಟ್ಟು ಹಿರಿಯರು ತಮ್ಮ ಅನುಭವದಿಂದ ಕಂಡು ಹೇಳಿದ್ದು. ಅದನ್ನು ನಾವು ಮೀರಕೂಡದು. ಅದಕ್ಕೆ ಸೂಕ್ತವಲ್ಲದ್ದನ್ನು ನಾವು ಆದರಿಸಬಾರದು ಎಂದು ಶ್ರೀಗಳು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next