Advertisement

ಪುರಿ ಜಗನ್ನಾಥನ ರಥಯಾತ್ರೆ ಆರಂಭ

12:15 PM Jul 06, 2019 | Team Udayavani |

ಭುವನೇಶ್ವರ/ಕೋಲ್ಕತಾ: ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಒಡಿಶಾದ ಪುರಿಯಲ್ಲಿ ಜಗನ್ನಾಥನ ವಾರ್ಷಿಕ ರಥಯಾತ್ರೆಗೆ ಗುರುವಾರ ಚಾಲನೆ ದೊರೆಯಿತು. ಪುರಿ ಜಗನ್ನಾಥ ದೇಗುಲದಿಂದ ಬಲಭದ್ರ, ಜಗನ್ನಾಥ, ದೇವಿ ಸುಭದ್ರೆ ಹಾಗೂ ಸುದರ್ಶನರ ಮೂರ್ತಿಗಳನ್ನು ಹೊತ್ತ ಬೃಹತ್‌ ರಥಗಳನ್ನು ಮೆರವಣಿಗೆ ಮೂಲಕ ಸಾಗಿಸಲಾಯಿತು. 9 ದಿನಗಳ ಕಾಲ ಈ ಕಾರ್ಯಕ್ರಮ ನಡೆಯಲಿದೆ. ಪುರಿ ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ ಅವರು ಈ ಎಲ್ಲ ಮೂರ್ತಿಗಳಿಗೂ ಪೂಜೆ ಸಲ್ಲಿಸಿದರು. ಒಡಿಶಾ ಸಿಎಂ ನವೀನ್‌ ಪಟ್ನಾಯಕ್‌, ಇತರ ಸಚಿವರು, ಶಾಸಕರು ಹಾಗೂ ಇತರೆ ಗಣ್ಯರು ಸಮಾರಂಭಕ್ಕೆ ಸಾಕ್ಷಿಯಾದರು.

Advertisement

ಸಾಮರಸ್ಯದ ಕರೆ:ಪಶ್ಚಿಮ ಬಂಗಾಲದ ಕೋಲ್ಕತಾದಲ್ಲಿ ಇಸ್ಕಾನ್‌ ಆಯೋಜಿಸಿದ್ದ ರಥಯಾತ್ರೆಗೆ ಸಿಎಂ ಮಮತಾ ಬ್ಯಾನರ್ಜಿ ಚಾಲನೆ ನೀಡಿದರು. ಟಿಎಂಸಿ ಸಂಸದೆ ನುಸ್ರತ್‌ ಜಹಾನ್‌ ಮುಖ್ಯ ಅತಿಥಿಯಾಗಿದ್ದರು. ಅವರ ಪತಿ ನಿಖೀಲ್ ಜೈನ್‌ ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇಲ್ಲಿ ಧಾರ್ಮಿಕ ಸಾಮರಸ್ಯಕ್ಕೆ ಕರೆ ನೀಡಿದ ಸಿಎಂ ಮಮತಾ, ‘ಎಲ್ಲ ಧರ್ಮಗಳ ಬಗ್ಗೆಯೂ ಸಹಿಷ್ಣುತೆ ಮತ್ತು ಎಲ್ಲರೂ ಒಂದೇ ಎಂಬ ಭಾವನೆಯೇ ನೈಜ ಧರ್ಮ’ ಎಂದಿದ್ದಾರೆ. ಇದೇ ವೇಳೆ ಮಾತನಾಡಿದ ನುಸ್ರತ್‌, ‘ರಾಜಕೀಯ ಮತ್ತು ಧರ್ಮವನ್ನು ನಾವು ಬೇರೆ ಬೇರೆಯಾಗಿಯೇ ನೋಡಬೇಕು’ ಎಂದು ಹೇಳಿದ್ದಾರೆ.

ಇನ್ನು, ಗುಜರಾತ್‌ನಲ್ಲಿ ನಡೆದ ರಥ ಯಾತ್ರೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಕುಟುಂಬ ಸಮೇತರಾಗಿ ಪಾಲ್ಗೊಂಡಿದ್ದಾರೆ. ಇದಕ್ಕೂ ಮುನ್ನ, ಪ್ರಧಾನಿ ನರೇಂದ್ರ ಮೋದಿಯವರು ರಥಯಾತ್ರೆ ಹಿನ್ನೆಲೆಯಲ್ಲಿ ದೇಶದ ಜನತೆಗೆ ಟ್ವಿಟರ್‌ ಮೂಲಕ ಶುಭಾಶಯ ಕೋರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next