Advertisement

ದಾಹ ತೀರಿಸದ ಶುದ್ಧ ನೀರಿನ ಘಟಕಗಳು

10:26 AM Jun 09, 2019 | Suhan S |

ಬೆಳಗಾವಿ: ಸ್ಮಾರ್ಟ್‌ ಸಿಟಿ ಯೋಜನೆಯಡಿ ಆಯ್ಕೆಯಾದ ಬೆಳಗಾವಿ ನಗರದಲ್ಲಿ ಜನರ ದಾಹ ತೀರಿಸಲು ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕಗಳು ಇದ್ದೂ ಇಲ್ಲದಂತಾಗಿದ್ದು, ಪ್ರಾಯೋಗಿಕವಾಗಿ ಐದು ಕಡೆ ಆರಂಭವಾಗಿದ್ದರೂ ಸಮರ್ಪಕ ನೀರು ಸರಬರಾಜು ಇಲ್ಲದೇ ಕೆಲವು ಘಟಕಗಳು ಬಂದ್‌ ಬಿದ್ದಿದ್ದರಿಂದ ಜನರು ಪರಿತಪಿಸುವಂತಾಗಿದೆ.

Advertisement

ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ಸರಿಯಾಗಿ ನೀರು ಪೂರೈಕೆ ಆಗುತ್ತಿಲ್ಲ ಒಂದೆಡೆ ಸ್ಮಾರ್ಟ್‌ ಸಿಟಿ ಅಧಿಕಾರಿಗಳು ಹಾಗೂ ಇನ್ನೊಂದೆಡೆ ನಗರ ನೀರು ಸರಬರಾಜು ಮಂಡಳಿ ಅಧಿಕಾರಿಗಳ ಮಧ್ಯೆ ಸಮನ್ವಯ ಕೊರತೆಯಿಂದಾಗಿ ಜನ ತೊಂದರೆ ಅನುಭವಿಸುವಂತಾಗಿದೆ. ಸರಿಯಾದ ನಿರ್ವಹಣೆಯೂ ಇಲ್ಲದ ಈ ಘಟಕಗಳನ್ನು ಆರಂಭಿಸಿದ್ದಾದರೂ ಎಕೆ ಎಂದು ಜನರು ಪ್ರಶ್ನಿಸುತ್ತಿದ್ದಾರೆ.

ತರಾತುರಿಯಲ್ಲಿ ನಿರ್ಮಾಣ: ಸಾರ್ವಜನಿಕರ ಅನುಕೂಲಕ್ಕಾಗಿ ನಿರ್ಮಿಸಿರುವ ಈ ಘಟಕಗಳು ಕೇವಲ ಕಾಟಾಚಾರಕ್ಕೆ ಮಾಡಿದಂತಾಗಿದೆ. ನಿರಂತರ ನೀರು ಪೂರೈಕೆ ಆಗದ ಸ್ಥಳದಲ್ಲಿಯೇ ಈ ಘಟಕಗಳು ನಿರ್ಮಾಣ ಮಾಡಲಾಗಿದೆ. ಸರಿಯಾಗಿ ಸರ್ವೇ ನಡೆಸದೇ ಘಟಕಗಳನ್ನು ತರಾತುರಿಯಲ್ಲಿ ಆರಂಭಿಸಲಾಗಿದೆ. ಸ್ಮಾರ್ಟ್‌ ಸಿಟಿ ಯೋಜನೆಯಡಿ ತಮಗೆ ಕೊಟ್ಟಿರುವ ಟಾರ್ಗೆಟ್ ಪೂರ್ಣಗೊಳಿಸಲು ಘಟಕ ಮಾಡಿ ಜನರೊಂದಿಗೆ ಚೆಲ್ಲಾಟ ಆಡುತ್ತಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂಬ ಆರೋಪ ಸಾರ್ವಜನಿಕರದ್ದಾಗಿದೆ.

ಈಗಾಗಲೇ ನಗರದ ಐದು ಕಡೆ ಶುದ್ಧ ಕುಡಿಯುವ ನೀರಿನ ಘಟಕಗಳು ನಿರ್ಮಾಣವಾಗಿದೆ. ರವಿವಾರ ಪೇಟೆ, ಧರ್ಮವೀರ ಸಂಭಾಜಿ ವೃತ್ತ, ಗೋವಾವೇಸ್‌, ಶ್ರೀನಗರ ಗಾರ್ಡನ್‌ ಹಾಗೂ ಜಿಲ್ಲಾಧಿಕಾರಿ ಕಚೇರಿ ಬಳಿಯ ಕೋರ್ಟ್‌ ಆವರಣದಲ್ಲಿ ಘಟಕಗಳು ನಿರ್ಮಾಣವಾಗಿವೆ.

ಅಧಿಕಾರಿಗಳಿಗೆ ಹಿಡಿಶಾಪ: ರವಿವಾರ ಪೇಟೆಯಲ್ಲಿರುವ ಘಟಕದಲ್ಲಿ ಅಂತೂ ನೀರೇ ಸಿಗುವುದಿಲ್ಲ. ಈ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಪಾರಸ್ಥರು ಇದ್ದಾರೆ. ಜನರ ಓಡಾಟ ಹೆಚ್ಚಾಗಿ ಇರುವುದರಿಂದ ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಅಗತ್ಯವಿದೆ. ಆದರೆ ಘಟಕ ನಿರ್ಮಾಣ ಮಾಡಿದರೂ ನೀರು ಬಾರದಿರುವುದಕ್ಕೆ ಜನರು ಹಿಡಿಶಾಪ ಹಾಕುವಂತಾಗಿದೆ. ಇಲ್ಲಿ ನೀರು ಬರುತ್ತಿಲ್ಲ ಎಂಬುದನ್ನು ಪಾಲಿಕೆಯ ಗಮನಕ್ಕೆ ತಂದರೂ ಯಾವೊಬ್ಬ ಅಧಿಕಾರಿಗಳು ಇತ್ತ ಗಮನಹರಿಸಿಲ್ಲ ಎಂಬುದು ಜನರ ಆರೋಪ.

Advertisement

ಘಟಕ ನಿರ್ಮಾಣವಾಗಿ ಕೆಲವೇ ದಿನಗಳಲ್ಲಿ ಬಂದ್‌ ಆಗಿದೆ. ನೀರಿಗಾಗಿ ಚಿಲ್ಲರೆ ಹಾಕಿದರೆ ಹಣ ವಾಪಸ್ಸು ಬರುತ್ತದೆಯೇ ಹೊರತು ನೀರು ಬರುವುದಿಲ್ಲ. ಒಂದು ಲೀಟರ್‌ಗೆ ಒಂದು ರೂ., ಐದು ಲೀಟರ್‌ಗೆ 2 ರೂ. ಹಾಗೂ 10 ಲೀಟರ್‌ ನೀರಿಗಾಗಿ 5 ರೂ. ನಿಗದಿ ಮಾಡಲಾಗಿದೆ. ಆದರೆ ನೀರೇ ಇಲ್ಲದಿದ್ದಾಗ ಎಲ್ಲಿಂದ ಬರಬೇಕು. ಆರ್‌ಒ ಪ್ಲಸ್‌ ಯುವಿ ನೀರು ಸಿಗುತ್ತದೆ ಎಂಬ ಫಲಕ ಇದ್ದರೂ ನೀರು ಮಾತ್ರ ಯಾರ ಕಣ್ಣಿಗೂ ಕಾಣ್ತಿಲ್ಲ.

ನಿರ್ವಹಣೆ ಇಲ್ಲದ ಘಟಕಗಳು: ನಿರ್ವಹಣೆ ಇಲ್ಲದೇ ರವಿವಾರ ಪೇಟೆಯ ನೀರಿನ ಘಟಕ ಅನಾಥವಾಗಿ ಬಿದ್ದಿದೆ. ನರಗುಂದಕರ ಭಾವೆ ಚೌಕ್‌ದಲ್ಲಿಯೇ ನಿರ್ಮಿಸಿರುವ ಈ ಘಟಕದ ಸುತ್ತಲೂ ಬೀದಿ ಬದಿ ತರಕಾರಿ ವ್ಯಾಪಾರಸ್ಥರು ಕುಳಿತಿರುತ್ತಾರೆ. ಘಟಕ ಆರಂಭವಾಗಿದ್ದಾಗ ಜನ ಇಲ್ಲಿ ನೀರು ತರಲೂ ಹೋಗಲು ಪರದಾಡುವಂತಿತ್ತು. ಈಗಂತೂ ಇಲ್ಲಿ ನೀರಿಲ್ಲದ್ದಕ್ಕೆ ಜನ ತೊಂದರೆ ಪಡುತ್ತಿದ್ದಾರೆ. ಇದರ ಪಕ್ಕದಲ್ಲಿಯೇ ಈ ಮುಂಚೆ ಕುಡಿಯುವ ನೀರಿನ ಟ್ಯಾಂಕ್‌ ಅಳವಡಿಸಲಾಗಿತ್ತು. ಈಗ ಈ ಘಟಕವೂ ಇಲ್ಲ, ಟ್ಯಾಂಕರ್‌ ಕೂಡ ಇಲ್ಲವಾಗಿದೆ.

ಡಿಸಿ ಕಚೇರಿ ಆವರಣ, ಶ್ರೀನಗರ, ಧರ್ಮವೀರ ಸಂಭಾಜಿ ವೃತ್ತದಲ್ಲಿರುವ ಘಟಕಗಳಲ್ಲಿಯೂ ಒಂದೊಂದು ದಿನ ನೀರೇ ಇರುವುದಿಲ್ಲ. ಸರಿಯಾದ ನಿರ್ವಹಣೆ ಮಾಡದ್ದಕ್ಕೆ ನೀರು ಬರುತ್ತಿಲ್ಲ. ಸಂಬಂಧಿಸಿದ ಗುತ್ತಿಗೆದಾರರು ಹಾಗೂ ಪಾಲಿಕೆ ಅಧಿಕಾರಿಗಳಿಗೆ, ನೀರು ಸರಬರಾಜು ಮಂಡಳಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾರೊಬ್ಬರೂ ಇತ್ತ ಗಮನ ಹರಿಸುತ್ತಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next