Advertisement

Drinking water units: ಕೆಟ್ಟುನಿಂತ ಶುದ್ಧ ಕುಡಿವ ನೀರಿನ ಘಟಕಗಳು

04:15 PM Nov 19, 2023 | Team Udayavani |

ಯಳಂದೂರು: ಪಟ್ಟಣದ ಬಳೇಪೇಟೆಯ ಕೆಇಬಿ ಇಲಾಖೆ ಹಾಗೂ ಸರ್ಕಾರಿ ಆಸ್ಪತ್ರೆಯ ಬಳಿ ಇರುವ ಶುದ್ಧ ಕುಡಿಯುವ ನೀರಿನ ಘಟಕಗಳು ಕೆಟ್ಟು ಹೋಗಿ ತಿಂಗಳಾಗುತ್ತಿದ್ದು, ಪಟ್ಟಣ ಪಂಚಾಯಿತಿ ಅಧಿಕಾರಿಗಳು ದುರಸ್ತಿಪಡಿಸುವಲ್ಲಿ ವಿಫ‌ಲರಾಗಿದ್ದು, ಖಾಸಗಿಯವರಿಂದ ಹೆಚ್ಚಿನ ಹಣ ನೀಡಿ ಶುದ್ಧ ಕುಡಿಯುವ ನೀರು ಖರೀದಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.!

Advertisement

ಶುದ್ಧವಾದ ಕುಡಿಯುವ ನೀರಿನ ಘಟಕದ ಬಳಿಕವಾದರೂ ಶುದ್ಧ ಕುಡಿಯುವ ನೀರು ದೊರೆಯಲಿದೆ ಎಂದು ನಾಗರಿಕರು ನೆಮ್ಮದಿಯ ನಿಟ್ಟುಸಿರುಬಿಟ್ಟಿದ್ದರು. ಅಶುದ್ಧ ಹಾಗೂ ಫ್ಲೋರೇಡ್‌ ಯುಕ್ತ ನೀರು ಕುಡಿದು ಜನರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತಿದ್ದ ಹಿನ್ನೆಲೆಯಲ್ಲಿ ಸಾಕಷ್ಟು ಕಡೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಿ ಈ ಮೂಲಕ ಜನರಿಗೆ ಉತ್ತಮ ಗುಣಮಟ್ಟದ ಕುಡಿಯುವ ನೀರು ಒದಗಿಸುವ ಸರ್ಕಾರದ ಯೋಜನೆ ಸಾಕಷ್ಟು ಅನುಕೂಲ ಕಲ್ಪಿಸಿದೆ. ಆದರೆ ಆ ಘಟಕಗಳು ಸರಿಯಾಗಿ ಕಾರ್ಯನಿರ್ವಹಿಸದೇ ಇರುವ ಪರಿಣಾಮ ಬಹುತೇಕ ಕಡೆಗಳಲ್ಲಿ ನೆಪಕ್ಕೆ ಮಾತ್ರ ಎನ್ನುವಂತಾಗಿದೆ.

ಆದರೆ ಆದರೆ ನಿರ್ವಹಣೆ ಹೊಣೆ ಹೊತ್ತಿರುವ ಪಟ್ಟಣ ಪಂಚಾಯಿತಿ ಸಿಬ್ಬಂದಿ ಬೇಜವಾಬ್ದಾರಿತನದಿಂದ ನೀರಿನ ಘಟಕ ಪದೇ ಪದೆ ಮತ್ತೆ ಕೆಟ್ಟು ಹೋಗಿದ್ದು, ಸಾರ್ವಜನಿಕರು ಖಾಸಗಿ ಶುದ್ಧ ಕುಡಿಯುವ ನೀರಿನ ಘಟಕದ ಮೊರೆ ಹೋಗುವಂತಾಗಿದೆ. ಈಗಾಗಲೇ ನೀರಿನ ಘಟಕ ಕೆಟ್ಟು ತಿಂಗಳು ಕಳೆಯುತ್ತಿದ್ದು, ದುರಸ್ತಿಪಡಿಸದೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ನಾಗರೀಕರು ಆರೋಪಿಸಿದ್ದಾರೆ.

ಖಾಸಗಿ ಮೊರೆ: ಶುದ್ಧ ಕುಡಿಯುವ ನೀರಿನ ಘಟಕದಲ್ಲಿ 10 ರೂ.ಗೆ 20 ಲೀಟರ್‌ ನೀರು ದೊರೆತರೆ, ಖಾಸಗಿ ಘಟಕಗಳಲ್ಲಿ 20 ಲೀಟರ್‌ ನೀರು ಪಡೆಯಲು 40 ರೂ. ನೀಡಬೇಕಿದೆ. ದಿನದ 24 ಗಂಟೆಯೂ ಸಾರ್ವಜನಿಕರ ಸೇವೆಗೆ ಲಭ್ಯವಿರಬೇಕಾದ ಶುದ್ಧ ಕುಡಿಯುವ ನೀರಿನ ಘಟಕದ ನಿರ್ವಹಣೆ ಜವಾಬ್ದಾರಿ ಹೊತ್ತಿರುವ ಸಿಬ್ಬಂದಿ ಸರಿಯಾಗಿ ಕಾಲ ಕಾಲಕ್ಕೆ ದುರಸ್ತಿ ಮಾಡುತ್ತಿಲ. ಈ ಬಗ್ಗೆ ಗಮನಹರಿಸದೇ ನಿರ್ಲಕ್ಷ್ಯವಹಿಸುತ್ತಿರುವ ಅಧಿಕಾರಿ ವೃಂದದ ಬಗ್ಗೆ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಶುದ್ಧ ಕುಡಿಯುವ ನೀರಿನ ಘಟಕ ಮೂರು ತಿಂಗಳಿಗೊಮ್ಮೆ ರಿಪೇರಿಗೆ ಬರುವುದು ಆಶ್ಚರ್ಯ ತರಿಸಿದೆ. ಹೀಗಾಗಿ 40 ರೂ. ನೀಡಿ ಖಾಸಗಿ ನೀರಿನ ಘಟಕದಲ್ಲಿ ನೀರು ಖರೀದಿಸುವಂತಾಗಿದೆ.

Advertisement

ದೂರು ನೀಡಿದರು ಸರಿಪಡಿಸುತ್ತಿಲ್ಲ: ಪಟ್ಟಣದ ಕೆಇಬಿ ಹಾಗೂ ಸರ್ಕಾರಿ ಆಸ್ಪತ್ರೆ ಬಳಿಇರುವ ಶುದ್ಧ ಕುಡಿಯುವ ನೀರಿನ ಘಟಕದ ಸಮಸ್ಯೆಯ ಬಗ್ಗೆ ಸಾಕಷ್ಟು ಬಾರಿ ಸಾರ್ವಜನಿಕರು ದೂರು ನೀಡಿದರು, ಸಂಬಂಧಪಟ್ಟ ಮುಖ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿಲ್ಲ, ಜತೆಗೆ ಕೆಟ್ಟು ಹೋಗಿ ಹಲವು ತಿಂಗಳು ಕಳೆದಿದ್ದರೂ ದುರಸ್ತಿಪಡಿಸುವ ಬಗ್ಗೆ ಗಮನನೀಡಿದ ನಿರ್ಲಕ್ಷ್ಯ ದೋರಣೆ ಮಾಡುತ್ತಿದ್ದಾರೆ. ಆದ್ದರಿಂದ ತಕ್ಷಣ ಸಂಬಂಧಪಟ್ಟ ಮೇಲಾಧಿಕಾರಿಗಳು ತಕ್ಷಣ ಕುಡಿಯುವ ನೀರು ಪೂರೈಕೆ ಮಾಡುವ ಬಗ್ಗೆ ಕ್ರಮವಹಿಸಬೇಕೆಂದು ಸಾರ್ವಜನಿಕರ ಒತ್ತಾಯವಾಗಿದೆ.

ಕುಡಿಯುವ ನೀರಿಗೆ ಪರದಾಟ: ಪಟ್ಟನದ ಕೆಇಬಿ ಹಾಗೂ ಸರ್ಕಾರಿ ಆಸ್ಪತ್ರೆ ಬಳಿಯಲ್ಲಿ ದಿನನಿತ್ಯ ನೂರಾರು ಜನರು ರೋಗಿಗಳು ಬಂದು ಹೋಗುವ ಸ್ಥಳದಲ್ಲಿ ಈ ರೀತಿಯ ಕುಡಿಯುವ ನೀರಿನ ಘಟಕಗಳು ಕೆಟ್ಟು ಹೋಗಿರುವುದನ್ನು ತಕ್ಷಣ ದುರಸ್ತಿಪಡಿಸುವದನ್ನು ಮಾಡದೇ ನಿರ್ಲಕ್ಷ್ಯವಹಿಸಿರುವುದರಿಂದ ಜನರು ಕುಡಿಯುವ ನೀರಿಗೆ ಖಾಸಗಿ ಅಂಗಡಿ, ಹೋಟೇಲ್‌ಗ‌ಳಿಗೆ ತೆರಳಿ ನೀರಿನ ಕುಡಿಯುವ ಪರಿಸ್ಥಿತಿ ನಿರ್ಮಾಣವಾಗಿ ಪರದಾಡುತ್ತಿದ್ದಾರೆ ಎಂದು ಸ್ಥಳೀಯ ಶಂಕರ್‌ ಸೇರಿದಂತೆ ಹಲವರ ದೂರಾಗಿದೆ.

ಪಟ್ಟಣದ ಕೆಇಬಿ ಹಾಗೂ ಆಸ್ಪತ್ರೆ ಬಳಿ ಇರುವ ಎರಡು ಶುದ್ಧ ಕುಡಿಯುವ ನೀರಿನ ಘಟಕಗಳು ದುರಸ್ತಿಪಡಿಸುವ ನಿಟ್ಟಿನಲ್ಲಿ ಗಮನ ಹರಿಸಲಾಗಿದೆ. ಈ ಬಗ್ಗೆ ಕಾಮಗಾರಿಯ ಅನುಮತಿ ಪತ್ರವನ್ನು ಗುತ್ತಿಗೆದಾರರಿಗೆ ನೀಡಿದ್ದು, ಅದಷ್ಟು ಬೇಗ ಸರಿಪಡಿಸಲಾಗುವುದು. ●ಮಹೇಶ್‌ ಕುಮಾರ್‌, ಮುಖ್ಯಾಧಿಕಾರಿ, ಪಪಂ

– ಫೈರೋಜ್‌ಖಾನ್‌

Advertisement

Udayavani is now on Telegram. Click here to join our channel and stay updated with the latest news.

Next