ಸಿಂಧನೂರು: ಸರಕಾರ ಜೋಳ ಮತ್ತು ಭತ್ತ ಖರೀದಿಗೆ ಪ್ರಸಕ್ತ ಸಾಲಿನಲ್ಲಿ ವಿಧಿಸಿರುವ ಷರತ್ತನ್ನು ಸಡಿಲಗೊಳಿಸುವ ನಿಟ್ಟಿನಲ್ಲಿ ಪೂರಕವಾಗಿ ಸ್ಪಂದಿಸಿದ್ದು, ತಿಂಗಳಾಂತ್ಯದಲ್ಲಿ ಖರೀದಿ ಮಿತಿ ಗಡುವ ತೆಗೆಯುವ ವಿಶ್ವಾಸವಿದೆ ಎಂದು ರಾಜ್ಯ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಸನಗೌಡ ಬಾದರ್ಲಿ ವಿಶ್ವಾಸ ವ್ಯಕ್ತಪಡಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭತ್ತ 40 ಕ್ವಿಂಟಲ್, ಜೋಳ 20 ಕ್ವಿಂಟಲ್ ಮಾತ್ರ ಪ್ರತಿ ರೈತನಿಂದ ಖರೀದಿಸುವುದಕ್ಕೆ ಮಿತಿ ಹಾಕಲಾಗಿದೆ. ಈ ಬಗ್ಗೆ ರೈತ ಪರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಆಹಾರ ನಾಗರಿಕ ಸರಬರಾಜು ಇಲಾಖೆ ಆಯುಕ್ತರನ್ನು ಭೇಟಿ ಮಾಡಿದ್ದೇನೆ. ಮನವಿ ಪತ್ರವನ್ನೂ ಕೊಟ್ಟಿದ್ದೇನೆ. ಜನವರಿ ತಿಂಗಳಾಂತ್ಯಕ್ಕೆ ಷರತ್ತು ತೆಗೆದುಹಾಕುವ ಭರವಸೆ ನೀಡಿದ್ದಾರೆ. ರೈತರು ಆತಂಕಕ್ಕೆ ಒಳಗಾಗಬಾರದು ಎಂದರು.
ಆಸ್ಪತ್ರೆ ಕಾಮಗಾರಿ ನಿಲ್ಲಿಸಿ
ತಾಯಿ ಮಕ್ಕಳ ಆಸ್ಪತ್ರೆಯನ್ನು ನಗರದಿಂದ ಆರೇಳು ಕಿ.ಮೀ. ದೂರದಲ್ಲಿ ನಿರ್ಮಿಸಲಾಗುತ್ತಿದೆ. ಅಲ್ಲಿಗೆ ರಸ್ತೆಯೂ ಇಲ್ಲ. ಹಳ್ಳ ಮಾರ್ಗದಲ್ಲಿ ಹೋಗಬೇಕು. ಶಾಸಕ ವೆಂಕಟರಾವ್ ನಾಡಗೌಡ್ರು, ಸಂಸದ ಸಂಗಣ್ಣ ಕರಡಿ ಅವರು ಸ್ವಾರ್ಥಕ್ಕಾಗಿ ಇಂತಹ ನಿರ್ಧಾರ ಕೈಗೊಂಡಿದ್ದಾರೆಯೋ ಗೊತ್ತಾಗುತ್ತಿಲ್ಲ. ನಗರದಲ್ಲೇ ಬೇಕಾದಷ್ಟು ಜಾಗವಿದೆ. ನಿಮಗೆ ಅಧಿಕಾರವಿದೆ. ಅತಿಕ್ರಮಣವಾಗಿದ್ದರೆ, ತೆರವುಗೊಳಿಸಲು ಮುಂದಾಗಬೇಕು. ಅದು ಬೇಕಾದಷ್ಟು ಜಾಗವಿದ್ದರೂ ನಗರದಿಂದ ದೂರದಲ್ಲಿ ನಿರ್ಮಿಸುತ್ತಿರುವ ಆಸ್ಪತ್ರೆ ಕಾಮಗಾರಿ ನಿಲ್ಲಿಸಬೇಕು. ಈ ಬಗ್ಗೆ ಗುತ್ತಿಗೆದಾರರಿಗೆ ನಾನು ಎಚ್ಚರಿಕೆ ನೀಡುತ್ತಿದ್ದೇನೆ. ಯಾವುದೇ ಕಾರಣಕ್ಕೂ ಕೆಲಸ ಮಾಡಲು ನಾನು ಬಿಡುವುದಿಲ್ಲ ಎಂದರು.
ಕಾಂಗ್ರೆಸ್ ಹಿರಿಯ ಮುಖಂಡ ಬಸನಗೌಡ ಬಾದರ್ಲಿ, ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಖಾಜಾಹು ಸೇನ್, ಎಸ್ಟಿ ಘಟಕದ ರಾಜ್ಯ ಕಾರ್ಯದರ್ಶಿ ವೆಂಕಟೇಶ್ ರಾಗಲಪರ್ವಿ ಸೇರಿದಂತೆ ಅನೇಕ ಮುಖಂಡರು ಇದ್ದರು.