ಹಾವೇರಿ: ಬೆಳೆಗೆ ಯೋಗ್ಯ ಬೆಲೆ ಸಿಗದೆ ಭಾರಿ ಸಂಕಷ್ಟಕ್ಕೆ ಸಿಲುಕಿರುವ ಮೆಕ್ಕೆಜೋಳ ಬೆಳೆಗಾರರ ಅನುಕೂಲಕ್ಕಾಗಿ ರಾಜ್ಯ ಸರ್ಕಾರ ತಲಾ ಐದು ಸಾವಿರ ರೂ.ಗಳ ಪ್ರೋತ್ಸಾಹಧನ ನೀಡಲು ನಿರ್ಧರಿಸಿದೆ. ಆದರೆ, ಜಿಲ್ಲೆಯ ರೈತರು ಮಾತ್ರ ಪ್ರೋತ್ಸಾಹಧನ ಬದಲಾಗಿ ಸರ್ಕಾರ ಮೆಕ್ಕೆಜೋಳ ಖರೀದಿಸಲು ಮುಂದಾಗಬೇಕು ಎಂದು ಒತ್ತಡ ಹಾಕುತ್ತಿದ್ದಾರೆ.
ಲಾಕ್‌ಡೌನ್ ಸೇರಿದಂತೆ ಇನ್ನಿತರ ಕಾರಣಗಳಿಂದ ಈ ಬಾರಿ ಮಾರುಕಟ್ಟೆಯಲ್ಲಿ ಮೆಕ್ಕೆಜೋಳ ಬೆಲೆ ಅರ್ಧಕ್ಕರ್ಧ ಕುಸಿತಕಂಡಿದೆ. ಕೇಂದ್ರ ಸರ್ಕಾರ ಕ್ವಿಂಟಾಲ್‌ಗೆ 1,760 ರೂ. ಸಲಹಾ ಬೆಲೆ ನಿಗದಿಪಡಿಸಿದೆಯಾದರೂ ಖರೀದಿ ಕೇಂದ್ರ ತೆರೆದು ಅದನ್ನು ಖರೀದಿಸುವ ಪ್ರಕ್ರಿಯೆ ಈವರೆಗೆ ನಡೆದಿಲ್ಲ. ಇದು ಮೆಕ್ಕೆಜೋಳ ಬೆಳೆಗಾರರು ಸರ್ಕಾರದ ಮೇಲೆ ಕಿಡಿಕಾರುವಂತೆ ಮಾಡಿತ್ತು. ಪಡಿತರದಲ್ಲಿ ವಿತರಿಸುವ ಆಹಾರಧಾನ್ಯದ ಪಟ್ಟಿಯಿಂದ ಮೆಕ್ಕೆಜೋಳ ಹೊರಗಿಟ್ಟಿದ್ದರಿಂದ ಅದನ್ನು ಬೆಂಬಲಬೆಲೆಯಲ್ಲಿ ಖರೀದಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿಲ್ಲ ಎಂದು ರಾಜ್ಯ ಸರ್ಕಾರ ಹೇಳುತ್ತಲೇ ಬಂದಿದೆ. ರೈತರು ರಾಜ್ಯ ಸರ್ಕಾರವೇ ಬೆಂಬಲ ಬೆಲೆಯಲ್ಲಿ ಮೆಕ್ಕೆಜೋಳ ಖರೀದಿಸಿ ರೈತರ ನೆರವಿಗೆ ಬರಬೇಕು ಎಂದು ಒತ್ತಡ ಹಾಕುತ್ತಲೇ ಬಂದಿದ್ದಾರೆ. ಆದರೆ, ರಾಜ್ಯ ಸರ್ಕಾರ ಮೆಕ್ಕೆಜೋಳ ಖರೀದಿಸಲು ಈವರೆಗೂ ಮುಂದಾಗಿಲ್ಲ.
ಬದಲಾಗಿ ಈ ಮೊದಲು ಕೆಎಂಎಫ್‌ನಿಂದ ರಾಜ್ಯದಲ್ಲಿ 20 ಸಾವಿರ ಮೆ.ಟನ್. ಮೆಕ್ಕೆಜೋಳ ಬೆಂಬಲಬೆಲೆಯಲ್ಲಿ ಖರೀದಿಸಲು ಅನುಕೂಲ ಮಾಡಿಕೊಟ್ಟ ಸರ್ಕಾರ, ಈಗ ಬೆಳೆಗಾರರಿಗೆ ತಲಾ ಐದು ಸಾವಿರ ರೂ. ನೀಡಲು ಮುಂದಾಗಿದೆ. ಹಾವೇರಿ ಜಿಲ್ಲೆಯೊಂದ ರಲ್ಲಿಯೇ ಮುಂಗಾರು ಹಂಗಾಮಿ ನಲ್ಲಿ ಬೆಳೆದ 10 ಲಕ್ಷ ಟನ್ ಹಾಗೂ ಹಿಂಗಾರಿನಲ್ಲಿ ಬೆಳೆದ 1.5 ಲಕ್ಷ ಟನ್ ಸೇರಿ 11.5 ಲಕ್ಷ ಟನ್ ಮೆಕ್ಕೆಜೋಳ ಬೆಳೆ ದಾಸ್ತಾನು ಇದೆ. (ಕೆಎಂಎಫ್‌ನಿಂದ ಶನಿವಾರದವರೆಗೆ 398 ರೈತರಿಂದ ಕೇವಲ 17721 ಕ್ವಿಂಟಾಲ್ ಮೆಕ್ಕೆಜೋಳ ಮಾತ್ರ ಖರೀದಿಯಾಗಿದೆ) ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಮೆಕ್ಕೆಜೋಳ ಜಿಲ್ಲೆಯಲ್ಲಿರುವುದರಿಂದ ಬೆಳೆಗಾರರು ತಲಾ ಐದು ಸಾವಿರ ರೂ. ಕೊಡುವ ಬದಲಿಗೆ ಬೆಂಬಲಬೆಲೆಯಲ್ಲಿ ಬೆಳೆ ಖರೀದಿಸಲು ಸರ್ಕಾರ ಮುಂದಾಗಬೇಕು ಎಂಬ ಒತ್ತಡ ಮುಂದುವರಿಸಿದ್ದಾರೆ.
ಸರ್ಕಾರಕ್ಕೂ ಪತ್ರ: ಮಳೆಗಾಲದಲ್ಲಿ ಅತಿವೃಷ್ಟಿ, ನೆರೆಯಿಂದ ಕೆಂಗೆಟ್ಟಿದ್ದ ರೈತರು ಈ ನಡುವೆಯೂ ಒಂದಿಷ್ಟು ಮೆಕ್ಕೆಜೋಳ ಬೆಳೆದಿದ್ದಾರೆ. ಜಿಲ್ಲೆಯಲ್ಲಿ ಅರ್ಧದಷ್ಟು ರೈತರು ಮೆಕ್ಕೆಜೋಳವನ್ನೇ ಬೆಳೆಯುತ್ತಿದ್ದಾರೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಮೆಕ್ಕೆಜೋಳದ ಬೆಲೆಯು ಕಡಿಮೆಯಾಗುತ್ತಿರುವುದರಿಂದ ಕನಿಷ್ಠ ಬೆಂಬಲಬೆಲೆ ಯೋಜನೆ ಅಡಿ ಮೆಕ್ಕೆಜೋಳ ಖರೀದಿ ಕೇಂದ್ರಗಳನ್ನು ತೆರೆಯಬೇಕು ಎಂದು ಜಿಲ್ಲಾಧಿಕಾರಿ ಸಹ ರೈತರ ಪರವಾಗಿ ಎರಡು ತಿಂಗಳ ಹಿಂದೆಯೇ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಆದರೆ, ಈವರೆಗೂ ಸ್ಪಂದನೆ ಸಿಕ್ಕಿಲ್ಲ.
ಮೆಕ್ಕೆಜೋಳ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡಿರುವುದಾಗಿ ಸಂಸದ ಶಿವಕುಮಾರ ಉದಾಸಿ ಹೇಳಿದ್ದರು. ಇನ್ನು ಕೃಷಿ ಸಚಿವ ಬಿ.ಸಿ. ಪಾಟೀಲ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಮೆಕ್ಕೆಜೋಳ ಬೆಳೆಗಾರರ ಬವಣೆಯನ್ನು ಮುಖ್ಯಮಂತ್ರಿಯವರ ಗಮನಸೆಳೆದಿರುವುದಾಗಿಯೂ ಹೇಳಿದ್ದರು. ಆದರೆ, ಇದ್ಯಾವುದೂ ಈವರೆಗೆ ಫಲ ಕೊಡದೆ ಇರುವುದು ಮೆಕ್ಕೆಜೋಳ ಬೆಳೆಗಾರರನ್ನು ಮತ್ತಷ್ಟು ಕೆರಳಿಸಿದೆ. ಒಟ್ಟಾರೆ ಸರ್ಕಾರದ ಪ್ರೋತ್ಸಾಹಧನಕ್ಕಿಂತ ಮೆಕ್ಕೆಜೋಳವನ್ನು ಸರ್ಕಾರವೇ ಖರೀದಿಸಬೇಕು ಎಂಬ ಒತ್ತಾಸೆ ದಟ್ಟವಾಗಿದ್ದು, ಮುಂದಿನ ದಿನಗಳಲ್ಲಿ ಸರ್ಕಾರ ಯಾವ ನಿರ್ಧಾರ ಕೈಗೊಳ್ಳುತ್ತದೆಯೋ ಕಾದು ನೋಡಬೇಕಿದೆ.
ಬೆಳೆಗಾರರಿಗೆ ಪ್ರೋತ್ಸಾಹಧನ ಕೊಡುವ ಬದಲಿಗೆ ಮೆಕ್ಕೆಜೋಳವನ್ನು ಬೆಂಬಲಬೆಲೆಯಲ್ಲಿ ಖರೀದಿಸಲು ಸರ್ಕಾರ ನಿರ್ಧಾರ ಕೈಗೊಳ್ಳಬೇಕು. ಆಗ ಮಾತ್ರ ಸರ್ಕಾರ ರೈತರಿಗೆ ನಿಜವಾಗಿಯೂ ಸಹಾಯ ಮಾಡಿದಂತಾಗುತ್ತದೆ. ಜಿಲ್ಲೆಯಲ್ಲಿ ಅಪಾರ ಪ್ರಮಾಣದಲ್ಲಿ ಅಂದರೆ ಅಂದಾಜು ಹತ್ತು ಲಕ್ಷ ಟನ್ ಮೆಕ್ಕೆಜೋಳವಿದ್ದು, ಸರ್ಕಾರ ಕೂಡಲೇ ಖರೀದಿಸಲು ಮುಂದಾಗಬೇಕು. –
ಮಲ್ಲಿಕಾರ್ಜುನ ಬಳ್ಳಾರಿ, ರೈತ ಮುಖಂಡ
ರಾಜ್ಯ ಸರ್ಕಾರ ಮೆಕ್ಕೆಜೋಳ ಬೆಳೆಗಾರರಿಗೆ ತಲಾ ಐದು ಸಾವಿರ ರೂ.ಗಳ ಪ್ರೋತ್ಸಾಹಧನ ಘೋಷಿಸಿದೆ. ಜಿಲ್ಲೆಯಲ್ಲಿ 1.60 ಲಕ್ಷ ದಿಂದ 1.80 ಲಕ್ಷ ಮೆಕ್ಕೆಜೋಳ ಬೆಳೆಗಾರರಿದ್ದು, ಇವರಿಗೆ ಪ್ರೋತ್ಸಾಹಧನದ ಲಾಭ ದೊರಕಲಿದೆ. ಈಗಷ್ಟೇ ಘೋಷಣೆಯಾಗಿದ್ದು, ಮಾರ್ಗಸೂಚಿಗಳ ನಿರೀಕ್ಷೆಯಲ್ಲಿದ್ದೇವೆ. –
ಬಿ. ಮಂಜುನಾಥ್, ಕೃಷಿ ಇಲಾಖೆ ಜಂಟಿ ನಿರ್ದೇಶಕರು
-ಎಚ್.ಕೆ. ನಟರಾಜ