ನವದೆಹಲಿ:ಭಾರತೀಯ ವಾಯುಪಡೆಗಾಗಿ ತರಬೇತಿ ವಿಮಾನ ಖರೀದಿ ಮಾಡುವ ನಿಟ್ಟಿನಲ್ಲಿ ಬೆಂಗಳೂರಿನ ಹಿಂದುಸ್ತಾನ್ ಏರೋನಾಟಿಕಲ್ ಲಿಮಿಟೆಡ್ (ಎಚ್‌ಎಎಲ್) ಜತೆಗೆ ರಕ್ಷಣಾ ಸಚಿವಾಲಯ ಒಪ್ಪಂದಕ್ಕೆ ಸಹಿ ಹಾಕಿದೆ.
6,800 ಕೋಟಿ ರೂ. ವೆಚ್ಚದಲ್ಲಿ ಒಟ್ಟು 70 ತರಬೇತಿ ವಿಮಾನಗಳನ್ನು ಖರೀದಿ ಮಾಡಲಾಗುತ್ತದೆ. 2026ರ ವೇಳೆಗೆ ಐಎಎಫ್ ಗೆ ಈ ವಿಮಾನ ಲಭ್ಯವಾಗಲಿದೆ ಎಂದು ನವದೆಹಲಿಯಲ್ಲಿ ಮಂಗಳವಾರ ಬಿಡುಗಡೆ ಮಾಡಲಾಗಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ.
ತರಬೇತಿ ವಿಮಾನಗಳಿಗೆ ಬೇಕಾಗುವ ಬಿಡಿ ಭಾಗಗಳನ್ನು ದೇಶದಲ್ಲಿಯೇ ಉತ್ಪಾದಿಸಲಾಗುತ್ತದೆ. ಅದಕ್ಕಾಗಿ ಖಾಸಗಿ ಕಂಪನಿಗಳ ಜತೆಗೆ ಕೂಡ ಕೈಜೋಡಿಸಲಾಗುತ್ತದೆ. ಈ ವಿಮಾನಗಳ ಸೇರ್ಪಡೆಯಿಂದ ಐಎಎಫ್ಗೆ ಹೊಸತಾಗಿ ಸೇರ್ಪಡೆಯಾಗುವ ಪೈಲಟ್‌ಗಳಿಗೆ ಅತ್ಯಾಧುನಿಕ ವಿಮಾನಗಳಲ್ಲಿ ತರಬೇತಿ ಸಿಗಲಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಈ ಸಂದರ್ಭದಲ್ಲಿದ್ದರು.
ಮತ್ತೊಂದೆಡೆ, ಭಾರತೀಯ ನೌಕಾಪಡೆಗಾಗಿ ಲಾರ್ಸನ್ ಆ್ಯಂಡ್ ಟೂಬ್ರೋ ಜತೆಗೆ ತರಬೇತಿಯ ಉದ್ದೇಶಕ್ಕಾಗಿ ಮೂರು ಕೆಡೆಟ್ ಹಡಗುಗಳ ನಿರ್ಮಾಣ ಮತ್ತು ಪೂರೈಕೆಗಾಗಿ ಒಪ್ಪಂದ ಮಾಡಿಕೊಳ್ಳಲಾಗಿದೆ. ಒಟ್ಟು 3,100 ಕೋಟಿ ರೂ. ಮೊತ್ತದ ಡೀಲ್ ಇದಾಗಿದೆ. 9,900 ಕೋಟಿ ರೂ. ವೆಚ್ಚದ ಒಪ್ಪಂದಗಳಿಗೆ ಇತ್ತೀಚೆಗೆ ಕೇಂದ್ರ ಸಂಪುಟ ಅನುಮೋದನೆ ನೀಡಿತ್ತು.