ದೇವನಹಳ್ಳಿ: ಜಿಲ್ಲೆಯೂ ಬಯಲು ಸೀಮೆಯಾಗಿದೆ. ಈ ಭಾಗದಲ್ಲಿ ರೈತರು ಹೆಚ್ಚಾಗಿ ರಾಗಿ ಬೆಳೆಯುತ್ತಿದ್ದು, ರೈತರಿಗೆ ತೊಂದರೆ ಆಗದಂತೆ ರಾಗಿ ಖರೀದಿ ಮಾಡಬೇಕು ಎಂದು ಶಾಸಕ ನಾರಾಯಣಸ್ವಾಮಿ ಅಧಿಕಾರಿಗಳಿಗೆ ಸಲಹೆ ನೀಡಿದರು.
ಪಟ್ಟಣದ ರಾಗಿ ಖರೀದಿ ಕೇಂದ್ರದಲ್ಲಿ ರೈತರ ರಾಗಿ ಖರೀದಿಗೆ ಚಾಲನೆ ನೀಡಿ ಮಾತನಾಡಿದ ಅವರು, ಫೆಬ್ರವರಿಯಲ್ಲಿ ನಡೆಯುವ ಬಜೆಟ್ ಅಧಿವೇಶನದಲ್ಲಿ ಹೆಚ್ಚು ರಾಗಿ ಖರೀದಿ ಮಾಡುವುದಕ್ಕೆ ಸರ್ಕಾರದ ಮೇಲೆ ಒತ್ತಡ ತರುತ್ತೇನೆ. ತಾಲೂಕಿನಲ್ಲಿ ಸಾವಿರಾರು ರೈತರು ರಾಗಿ ಖರೀದಿಗೆ ನೋಂದಣಿ ಮಾಡಿದ್ದು, ರಾಗಿ ನೀಡಲು ಕೃಷಿಕರು ಬಂದಾಗ ಅಧಿಕಾರಿಗಳು ರೈತರಿಗೆ ತೊಂದರೆ ಆಗದಂತೆ ವ್ಯವಸ್ಥಿತವಾಗಿ ಖರೀದಿ ಮಾಡಬೇಕು ಎಂದು ಹೇಳಿದರು.
ಮಾರ್ಚ್ 31ರವರೆಗೂ ಖರೀದಿ: ಸರ್ಕಾರ ರೈತರಿಂದ ಬೆಂಬಲ ಬೆಲೆಗೆ ರಾಗಿ ಖರೀದಿ ಪ್ರಕ್ರಿಯೆ ಅಧಿಕೃತವಾಗಿ ಆರಂಭಿಸಿದ್ದು, ಪ್ರತಿ ಕ್ವಿಂಟಲ್ ಗೆ 3,578 ದರ ನಿಗದಿ ಮಾಡಿದೆ. ಈ ಬಾರಿ ಸರ್ಕಾರ ನೀಡಿರುವ ಗೋಣಿ ಚೀಲದಲ್ಲಿ ರಾಗಿ ತುಂಬಿಸಿಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಪ್ರಾರಂಭಿಕವಾಗಿ ನಿತ್ಯ 20-30 ರೈತರಿಂದ ರಾಗಿ ಖರೀದಿ ಮಾಡಲಾಗುತ್ತಿದ್ದು, ಹಂತ ಹಂತವಾಗಿ 100-120 ರೈತರಿಂದ ಖರೀದಿ ಪ್ರಕ್ರಿಯೆ ನಡೆಯಲಿದೆ. ತಾಲೂಕಿನಲ್ಲಿ 6 ಸಾವಿರ ರೈತರು ನೋಂದಣಿ ಮಾಡಿದ್ದಾರೆ. ಇವರಿಂದ 77 ಸಾವಿರ ಕ್ವಿಂಟಲ್ ರಾಗಿಯನ್ನು ಮಾರ್ಚ್ 31ರವರೆಗೂ ಖರೀದಿಸಲಾಗುವುದು ಎಂದರು.
ಸಕಾಲಕ್ಕೆ ರೈತರ ಖಾತೆಗೆ ಹಣ ವರ್ಗಾಯಿಸಿ: ಖರೀದಿಯ ನಂತರ ಸಕಾಲಕ್ಕೆ ರೈತರ ಖಾತೆಗಳಿಗೆ ಹಣ ವರ್ಗಾವಣೆಯಾಗುವಂತೆ ಕ್ರಮ ವಹಿಸಬೇಕು. ತಾಲೂಕಿನ ಕೆಲ ರೈತರ ಪಹಣಿಯಲ್ಲಿ ರಾಗಿ ಬೆಳೆ ಬದಲಾಗಿ ದ್ರಾಕ್ಷಿ, ಸಪೋಟಾ ಇತರ ಬೆಳೆಗಳು ನಮೂದಾಗಿರುವುದರಿಂದ ರಾಗಿ ಮಾರಾಟಕ್ಕೆ ತೊಂದರೆಯಾಗಿದೆ. ಕಂದಾಯ ಇಲಾಖೆ ಶೀಘ್ರದಲ್ಲಿ ದೋಷ ಸರಿಪಡಿಸಿ, ರೈತರಿಂದ ರಾಗಿ ಖರೀದಿಗೆ ಅವಕಾಶ ನೀಡುವಂತೆ ತಿಳಿಸಿದ್ದೇನೆ ಎಂದರು.
ರೈತರಿಂದ ನೇರವಾಗಿ ಖರೀದಿ: ರಾಗಿ ಖರೀದಿ ಕೇಂದ್ರಕ್ಕೆ ತೆರಳುವ ರಸ್ತೆ ಗುಂಡಿಗಳಿಂದ ಕೂಡಿದ್ದು, ರೈತರು ರಸ್ತೆ ದುರಸ್ತಿ ಮಾಡಿ ಟ್ರ್ಯಾಕ್ಟರ್ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದ ಕೂಡಲೇ, ಪುರಸಭೆ ವತಿಯಿಂದ ದುರಸ್ತಿ ಮಾಡಿಸಿ ರೈತರಿಗೆ ಅನುಕೂಲ ಮಾಡಿದರು. ರೈತರು ಈಗಾಗಲೇ ರಾಶಿಯನ್ನು ಹಾಕಿ ರಾಗಿ ಮಾರಾಟವನ್ನು ಮಾಡಲು ಮುಂದಾಗಿದ್ದಾರೆ. ಇತರೆ ಜಿಲ್ಲೆಗಳಲ್ಲಿ ಆಯಾ ಭಾಗದಲ್ಲಿ ಸಿಗುವ ವಸ್ತುಗಳ ಖರೀದಿಗೆ ಸಂಬಂಧಿಸಿದಂತೆ, ಈ ಭಾಗದಲ್ಲಿ ಬಯಲುಸೀಮೆ ಆಗಿರುವುದರಿಂದ ರಾಗಿ ಬೆಳೆಯನ್ನು ಹೆಚ್ಚಾಗಿ ಬೆಳೆಯುವುದರಿಂದ ಇಲ್ಲಿ ರಾಗಿಗೆ ಸರ್ಕಾರ ಬೆಂಬಲ ಬೆಲೆ ನಿಗದಿಗೊಳಿಸಿ ರೈತರಿಂದ ನೇರವಾಗಿ ಖರೀದಿ ಮಾಡುತ್ತಿದೆ ಎಂದರು.
ನಿಗದಿಪಡಿಸಿದ ದಿನದಂದು ರಾಗಿ ತನ್ನಿ: ರಾಗಿ ಖರೀದಿ ಕೇಂದ್ರದ ಅಧಿಕಾರಿ ಅಚ್ಚುತ್ ಮಾತನಾಡಿ, ನೋಂದಾಯಿಸಿಕೊಂಡ ರೈತರಿಗೆ ಕೇಂದ್ರದಿಂದಲೇ ಕರೆ ಮಾಡಿ ರಾಗಿ ತರುವಂತೆ ಸೂಚಿಸಲಾಗುವುದು. ಅಂತಹ ರೈತರು ಅಂದು ಕೇಂದ್ರಕ್ಕೆ ಬಂದು ರಾಗಿ ನೀಡಬೇಕು ಎಂದು ತಿಳಿಸಿದರು.
ಜೆಡಿಎಸ್ ತಾಲೂಕು ಅಧ್ಯಕ್ಷ ಮುನೇಗೌಡ, ಪ್ರಧಾನ ಕಾರ್ಯದರ್ಶಿ ಜಿ.ಎ.ರವೀಂದ್ರ, ಎಪಿಎಂಸಿ ಮಾಜಿ ಅಧ್ಯಕ್ಷ ಮಂಜುನಾಥ್, ರೈತ ಮುಖಂಡ ಗೋಪಾಲಪ್ಪ, ನಾರಾಯಣಸ್ವಾಮಿ, ಅಶೋಕ್, ವಸಂತ್, ರಾಗಿ ಖರೀದಿ ಕೇಂದ್ರದ ಸಹಾಯಕ ಬಸಪ್ಪ ಹಾಗೂ ಮತ್ತಿತರರು ಇದ್ದರು.