ಕೋಲಾರ: ರಾಗಿ ಖರೀದಿ ಪ್ರತಿ ಎಕರೆಗೆ 15 ಕ್ವಿಂಟಲ್‌ನಿಂದ 10 ಕ್ವಿಂಟಲ್‌ಗೆ ಇಳಿಸಿರುವ ಆದೇಶ ಹಿಂಪಡೆಯಬೇಕು ಹಾಗೂ ರೈತರು ತರುವ ಚೀಲದಲ್ಲೇ ಖರೀದಿ ಮಾಡ ಬೇಕೆಂದು ಒತ್ತಾಯಿಸಿ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ವ್ಯವಸ್ಥಾಪಕರಿಗೆ ರೈತ ಸಂಘದಿಂದ ಮನವಿ ಸಲ್ಲಿಸಲಾಯಿತು.
ಮನವಿ ಸಲ್ಲಿಸಿ ಮಾತನಾಡಿದ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣ ಗೌಡ, ಸತತ ಬರಗಾಲದಿಂದ ತತ್ತರಿಸಿದ್ದ ಜಿಲ್ಲೆಯ ಜನತೆಗೆ ದೇವರ ಕೃಪೆಯಿಂದ ಸುರಿದ ಮಳೆಯಿಂದ ಉತ್ತಮ ರಾಗಿ ಫಸಲು ಬೆಳೆದಿದ್ದು, ಆದರಂತೆ ಉತ್ತಮ ಇಳುವರಿ ಸಹ ಬಂದಿದೆ. ಇದರಿಂದ ಸಂಕಷ್ಟದಲ್ಲಿದ್ದ ರೈತರು ಮುಖದಲ್ಲಿ ನಗು ಕಾಣುವಂತಾಗಿದೆ ಎಂದು ಹೇಳಿದರು.
ಸರ್ಕಾರ ರೈತರಿಗೆ ದಲ್ಲಾಳಿಗಳಿಂದ ನಷ್ಟ ಆಗಬಾರದು ಎಂದು ಸರ್ಕಾರವೇ ನೇರವಾಗಿ ರೈತರಿಂದ ರಾಗಿ ಖರೀದಿ ಮಾಡಿ ಬೆಂಬಲ ಬೆಲೆಯಾಗಿ ಪ್ರತಿ ಕ್ವಿಂಟಲ್ ರಾಗಿಗೆ 3150 ರೂ. ನಂತೆ ಪ್ರತಿ ಎಕರೆಗೆ 15 ಕ್ವಿಂಟಲ್ ರಾಗಿ ಖರೀದಿ ಮಾಡಲು ಸಂಬಂಧಪಟ್ಟ ಇಲಾಖೆಗಳಿಗೆ ಆದೇಶ ಮಾಡಿ ಕರಪತ್ರ ಮುದ್ರಿಸಿ ಹಂಚಿದ್ದರು. ರೈತರು ರಾಗಿ ಬೆಳೆದಿರುವ ತಮ್ಮ ಜಮೀನಿನ ದಾಖಲೆಗಳೊಂದಿಗೆ ಖರೀದಿ ಕೇಂದ್ರಗಳಲ್ಲಿ ನೋಂದಾಯಿಸಿ ರಾಗಿ ಮಾರಾಟ ಮಾಡಿ ಲಾಭ ಪಡೆಯಬಹುದೆಂದು ಪ್ರಕಟಣೆ ಮಾಡಿದ್ದರು ಎಂದು ಹೇಳಿದರು.
ಬೆಲೆ ಪಡೆಯಲಾಗದೇ ವಂಚಿತ: ನಂತರ ರೈತರು ಈ ಆದೇಶದಂತೆ ಈ ಅವಕಾಶ ಪಡೆಯಲು ಮುಂದೆ ಬಂದರೆ, ಹಳೆಯ ಗಾದೆಯಂತೆ ದೇವರು ವರ ಕೊಟ್ಟರು ಪೂಜಾರಿ ಕೊಡಲಿಲ್ಲ ಎಂಬಂತೆ ಕಂದಾಯ ಅಧಿಕಾರಿಗಳ ಬೇಜವಾಬ್ದಾರಿಯಿಂದ ನೂರಾರು ರೈತರು ರಾಗಿ ಬೆಳೆದರೂ ಬೆಂಬಲ ಬೆಲೆ ಪಡೆಯಲು ವಂಚಿತರಾಗಿ ದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರದ ನಿರ್ಧಾರದಿಂದ ರೈತರು ರೋಸಿ ಹೋಗಿದ್ದು, ಆಹಾರ ನಿಗಮದ ವ್ಯವಸ್ಥಾಪಕರು ಸರ್ಕಾರ ಮೊದಲು ನಿಗದಿ ಮಾಡಿರುವಂತೆ ಪ್ರತಿ ಎಕರೆಗೆ 15 ಕ್ವಿಂಟಲ್ ರಾಗಿ ಖರೀದಿ ಮಾಡಿ, ರೈತರು ತರುವ ಚೀಲದಲ್ಲಿ ರಾಗಿ ಖರೀದಿ ಮಾಡಬೇಕು, ಯಾವುದೇ ಕಾರಣಕ್ಕೂ ಚೀಲ ಬದಲಾವಣೆ ಮಾಡಬಾರದು ಎಂದು ರೈತ ಲಿಂಗರಾಜಪ್ಪ ಒತ್ತಾಯಿಸಿದರು.
ಮನವಿ ನೀಡುವಾಗ ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ನಳಿನಿಗೌಡ, ಮಂಗಸಂದ್ರ ತಿಮ್ಮಣ್ಣ, ಈಕಂಬಳ್ಳಿ ಮಂಜುನಾಥ್, ಸುಪ್ರೀಂಚಲ, ಶಿವ, ಜಗದೀಶ್, ವಿನೋದ್, ರವಿ, ಐತಾಂಡಹಳ್ಳಿ ಮಂಜುನಾಥ್, ರೈತರಾದ ಬಸವರಾಜಪ್ಪ, ದಳವಾಯಪ್ಪ, ಮುನಿಕೃಷ್ಣಪ್ಪ, ಮುನಿಸ್ವಾಮಿಗೌಡ, ಶ್ರೀರಾಮಪ್ಪ, ನಟರಾಜ್, ಮಂಜುನಾಥ ಮತ್ತಿತರರು ಉಪಸ್ಥಿತರಿದ್ದರು.