Advertisement
ನಗರದ ಐತಿಹಾಸಿಕ ನಾಗದೇವಸ್ಥಾನವಾದ ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ನಾಗರಪಂಚಮಿಗೆಂದೇ ವಿಶೇಷ ಸಿದ್ಧತೆಗಳು ನಡೆಯುತ್ತಿವೆ. ನಸುಕಿನ ವೇಳೆ 5.30ರಿಂದಲೇ ಇಲ್ಲಿನ ನಾಗಬನದಲ್ಲಿರುವ ಅಸಂಖ್ಯ ನಾಗಬಿಂಬಗಳಿಗೆ ವಿಶೇಷ ಪೂಜೆ, ಸೀಯಾಳ ಅಭಿಷೇಕ, ಕ್ಷೀರಾಭಿಷೇಕ ಹಾಗೂ ನಿರಂತರವಾಗಿ ನಾಗತಂಬಿಲ ಸೇವೆಗಳು ಜರಗಲಿವೆ. ಮಧ್ಯಾಹ್ನ 12ಕ್ಕೆ ಗರ್ಭ ಗುಡಿಯಲ್ಲಿರುವ ಶ್ರೀ ಅನಂತ ಪದ್ಮನಾಭ ದೇವರಿಗೆ ನಾಗರಪಂಚಮಿಯ ವಿಶೇಷ ಮಹಾಪೂಜೆ ಹಮ್ಮಿಕೊಳ್ಳಲಾಗಿದೆ. ಲಕ್ಷಾಂತರ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಕೇವಲ ದೇಗುಲಗಳಲ್ಲಿ ಮಾತ್ರವಲ್ಲದೆ, ವಿವಿಧ ಕುಟುಂಬ ಗಳ ಮೂಲಬನಗಳಲ್ಲಿಯೂ ನಾಗದೇವರಿಗೆ ತಂಬಿಲ, ಕ್ಷೀರಾಭಿಷೇಕ, ಸೀಯಾಳ ಅಭಿಷೇಕ ಮುಂತಾದ ಸೇವೆಗಳು ಬುಧವಾರ ನೆರವೇರಲಿದೆ.
Related Articles
ನಾಗರ ಪಂಚಮಿ ಹಿನ್ನೆಲೆಯಲ್ಲಿ ಈಗಾಗಲೇ ವ್ಯಾಪಾರಸ್ಥರು ಬಿರುಸಿನ ವ್ಯಾಪಾರದಲ್ಲಿ ತೊಡಗಿದ್ದಾರೆ. ನಾಗನಿಗೆ ಪ್ರಿಯವಾದ ಹೂ ಹಣ್ಣು, ವಿವಿಧ ಪೂಜಾ ಪರಿಕರಗಳ ಖರೀದಿಯಲ್ಲಿ ಭಕ್ತರು ತೊಡಗಿದ್ದಾರೆ. ಈಗಾಗಲೇ ಉತ್ತರ ಕರ್ನಾಟಕ ಭಾಗಗಳಿಂದಲೂ ವ್ಯಾಪಾರಸ್ಥರು ನಗರಕ್ಕೆ ಆಗಮಿಸಿದ್ದು, ಬೀದಿ ಬೀದಿಗಳಲ್ಲಿ ಹೂವಿನ ಮಾರಾಟದಲ್ಲಿ ತೊಡಗಿದ್ದಾರೆ. ಕಂಕನಾಡಿ ವೃತ್ತದ ನಾಲ್ಕೂ ಬದಿಗಳು, ಬಿಜೈ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಬಳಿ, ಬಂಟ್ಸ್ ಹಾಸ್ಟೆಲ್, ಸ್ಟೇಟ್ ಬ್ಯಾಂಕ್, ಹಂಪನಕಟ್ಟೆ ಮುಂತಾದೆಡೆಗಳಲ್ಲಿ ಹೂವಿನ ವ್ಯಾಪಾರ ಜೋರಾಗಿದೆ.
Advertisement
ನಾಗರಪಂಚಮಿಗಾಗಿ ಕೇದಿಗೆ, ಮಲ್ಲಿಗೆ, ಸೇವಂತಿಗೆ, ಹಬ್ಬಲ್ಲಿಗೆ, ಗುಲಾಬಿ ಹೂವುಗಳ ಮಾರಾಟ ಜೋರಾಗಿದೆ. ಮಲ್ಲಿಗೆ, ಸೇವಂತಿಗೆಗೆ ಮೊಳಕ್ಕೆ 20 ರೂ.ಗಳಿಂದ 30 ರೂ.ಗಳ ತನಕವೂ ಮಾರಾಟವಾಗುತ್ತಿದೆ. ಕೆಂಗುಲಾಬಿಗೆ 10 ರೂ.ಗಳಾಗಿವೆ. ಆದರೆ ಒಂದೊಂದು ಕಡೆ ಒಂದೊಂದು ರೀತಿಯ ದರಕ್ಕೆ ಈ ಮಾರಾಟ ಪ್ರಕ್ರಿಯೆ ನಡೆಯುತ್ತಿದೆ. ಇನ್ನು ನಾಗದೇವರಿಗೆ ಪ್ರಿಯವಾದ ಸೀಯಾಳದ ಬೆಲೆ 40-45 ರೂ. ದಾಟಿದೆ. ಬಾಳೆಹಣ್ಣು, ಕಿತ್ತಳೆ, ಸೇಬು ಹಣ್ಣುಗಳ ಮಾರಾಟವೂ ಭರ್ಜರಿಯಾಗಿ ನಡೆಯುತ್ತಿದ್ದು, ವಿವಿಧ ಕಡೆಗಳಿಂದ ಜನ ಆಗಮಿಸಿ ಖರೀದಿಯಲ್ಲಿ ತೊಡಗಿದ್ದಾರೆ.
ಮಳೆಯಿಂದ ವ್ಯಾಪಾರಕ್ಕೆ ಹಿನ್ನಡೆಮಳೆ ನೀರು ಬೀಳದಿರುವ ಕಡೆಗಳಲ್ಲಿ ಅಥವಾ ಮಾರ್ಕೆಟ್‌ಗಳಲ್ಲಿ ವ್ಯಾಪಾರ ನಡೆಸುತ್ತಿರುವವರಿಗೆ ವ್ಯಾಪಾರ ಹೆಚ್ಚಿದ್ದರೂ ಹೊರ ಜಿಲ್ಲೆಗಳಿಂದ ಬಂದು ನಗರದ ರಸ್ತೆ ಬದಿಗಳಲ್ಲಿ ವ್ಯಾಪಾರ ನಡೆಸುತ್ತಿರುವವರಿಗೆ ಮಳೆಯಿಂದಾಗಿ ತುಸು ಹಿನ್ನಡೆಯಾಗಿದೆ. ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಹೂವಿನ ಮೇಲೆ ನೀರು ಬಿದ್ದು ಹಾಳಾಗುವ ಸಾಧ್ಯತೆ ಹೆಚ್ಚಿರುವುದರಿಂದ ಜನ ಮಾರ್ಕೆಟ್‌ನತ್ತಲೇ ಹೆಚ್ಚು ಹೋಗುತ್ತಿದ್ದಾರೆ. ಅಲ್ಲದೆ ಸುರಕ್ಷಿತ ಸ್ಥಳವೂ ಇಲ್ಲದ್ದರಿಂದ ಮಳೆಯಲ್ಲಿ ನೆನೆದು ಕೊಂಡೇ ವ್ಯಾಪಾರ ನಡೆಸಿದರೂ ವ್ಯಾಪಾರ ಇಳಿಕೆಯಾಗಿದೆ ಎನ್ನುತ್ತಾರೆ ಬಿಜೈ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಬಳಿ ಹೂ ಮಾರಾಟ ಮಾಡುತ್ತಿರುವ ವ್ಯಾಪಾರಸ್ಥರು.