ಬೆಂಗಳೂರು: ಬೀದಿ ನಾಟಕ, ಶಾಲಾ-ಕಾಲೇಜುಗಳಲ್ಲಿ ಅರಿವು ಕಾರ್ಯಕ್ರಮಗಳು ಹಾಗೂ ಯಮ ವೇಷಧಾರಿ ಹೀಗೆ ನಾನಾ ಮಾರ್ಗಗಳ ಮೂಲಕ ಸಂಚಾರ ನಿಯಮ ಪಾಲನೆ ಬಗ್ಗೆ ಸಾರ್ವಜನಿಕ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದ ಸಂಚಾರ ಪೊಲೀಸರು, ಇದೀಗ ಹೊಸ ಮಾದರಿಯನ್ನು ಆರಂಭಿಸಿದ್ದಾರೆ.
ಹೆಲ್ಮೆಟ್ ಧರಿಸದೆ ಸಂಚಾರ ನಿಯಮ ಉಲ್ಲಂಘನೆ ಮಾಡುವ ವಾಹನ ಸವಾರರಿಗೆ ದಂಡ ವಿಧಿಸದೆ, ಅದೇ ಹಣದಲ್ಲಿ ಹೊಸ ಹೆಲ್ಮೆಟ್ ಖರೀದಿ ಮಾಡಿ, ವಾಹನ ಕೊಂಡೊಯ್ಯುವಂತೆ ಸೂಚಿಸಿದ್ದಾರೆ. ಮಡಿವಾಳ ಸಂಚಾರ ಠಾಣೆ ಪೊಲೀಸರ ಈ ಹೊಸ ಕಾರ್ಯಕ್ಕೆ ವಾಹನ ಸವಾರರು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮಡಿವಾಳ ಸಂಚಾರ ಠಾಣೆ ಇನ್‌ಸ್ಪೆಕ್ಟರ್ ಗವಿಸಿದ್ದಪ್ಪ ಮತ್ತು ಪಿಎಸ್‌ಐ ಶಿವರಾಜ್ ಕುಮಾರ್ ಅಂಗಡಿ ಮಾರ್ಗದರ್ಶನದಲ್ಲಿ ಸಂಚಾರ ಸಿಬ್ಬಂದಿ ಬುಧವಾರ ಅಪರಾಹ್ನ ಎರಡು ಗಂಟೆಗಳ ಕಾಲ ತಮ್ಮ ವ್ಯಾಪ್ತಿಯಲ್ಲಿ ಹೆಲ್ಮೆಟ್ ಧರಸದೆ ದ್ವಿಚಕ್ರ ವಾಹನ ಚಾಲನೆ ಮಾಡುವ ಯಾವೊಬ್ಬ ಸವಾರನಿಗೆ ದಂಡ ವಿಧಿಸಿಲ್ಲ.
ಕೈಗೆ ಗುಲಾಬಿ: ಅಲ್ಲದೆ, ಹೊಸ ಹೆಲ್ಮೆಟ್ ಖರೀದಿಸಿದ ಸವಾರರಿಗೆ ಪೊಲೀಸ್ ಸಿಬ್ಬಂದಿ ಗುಲಾಬಿ ಹೂ ನೀಡಿ. ಮುಂದೆ ಈ ರೀತಿ ತಪ್ಪುಗಳನ್ನು ಮಾಡಬೇಡಿ. ಹೆಲ್ಮೆಟ್ ಧರಿಸುವುದು ನಿಮ್ಮ ಹಾಗೂ ನಿಮ್ಮ ಕುಟಂಬದ ಸುರಕ್ಷತೆಗಾಗಿಯೇ ಹೊರತು ಸರ್ಕಾರ ಅಥವಾ ಪೊಲೀಸರಿಗಾಗಿ ಅಲ್ಲ ಎಂದು ಬುದ್ದಿವಾದ ಹೇಳಿ ಕಳುಹಿಸಿದ್ದಾರೆ.
ಸಂಚಾರ ಪೊಲೀಸರ ಈ ವಿಶೇಷ ಜಾಗೃತಿ ಕಾರ್ಯಕ್ರಮ ಮೆಚ್ಚುಗೆ ವ್ಯಕ್ತಪಡಿಸಿದ ಕೆಲ ವಾಹನ ಸವಾರರು ಈ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಅವುಗಳು ಸಾರ್ವಜನಿಕ ವಲಯದಲ್ಲಿ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.
ಹೆಲ್ಮೆಟ್ ಮಹತ್ವ ಕುರಿತು ಮಾಹಿತಿ: ಬದಲಿಗೆ ಈ ರೀತಿ ಸಂಚಾರ ನಿಯಮ ಉಲ್ಲಂಘನೆ ಮಾಡುವ ಎಲ್ಲ ಸವಾರರನ್ನು ಸಲಾಗಿ ನಿಲ್ಲಿಸಿ ಹೆಲ್ಮೆಟ್ ಮಹತ್ವ ಕುರಿತು ಮಾಹಿತಿ ನೀಡಿದ್ದಾರೆ. ಅವರ ದ್ವಿಚಕ್ರ ವಾಹನಗಳನ್ನು ಕೆಲ ಹೊತ್ತು ವಶಕ್ಕೆ ಪಡೆದುಕೊಂಡು, ತಾವು ಯಾರು ದಂಡ ಕಟ್ಟಬೇಕಾದ ಅಗತ್ಯವಿಲ್ಲ.
ಆದರೆ, ಸಮೀಪದ ಹೆಲ್ಮೆಟ್ ಮಾರಾಟ ಮಳಿಗೆಗೆ ಹೋಗಿ ಒಂದು ಹೊಸ ಹೆಲ್ಮೆಟ್ ಖರೀದಿಸಿ ತರಬೇಕು. ನಂತರ ವಾಹನ ಬಿಡಲಾಗುತ್ತದೆ ಎಂದು ಆದೇಶಿಸಿದ್ದರು. ಅದರಿಂದ ಅಚ್ಚರಿಗೊಂಡ ಕೆಲ ವಾಹನ ಸವಾರರು ಆರಂಭದಲ್ಲಿ ಆಕ್ಷೇಪ ವ್ಯಕ್ತಪಡಿಸಿದರೂ ಕೊನೆಗೆ ಸಿಬ್ಬಂದಿಯ ಮನವರಿಕೆಯಿಂದ ಹೊಸ ಹೆಲ್ಮೆಟ್ ಖರೀದಿಸಿದ್ದಾರೆ.