Advertisement

ಪುರಾಣ ಕತೆ: ವನವಾಸಕ್ಕೆ ಹೊರಟರು ಪಾಂಡವರು 

10:47 AM Nov 02, 2017 | Harsha Rao |

ಪಾಂಡವರು ಮತ್ತು ಕೌರವರ ಮಧ್ಯೆ ಪಗಡೆಯಾಟ ನಡೆಯಿತು. ಆ ಆಟದಲ್ಲಿ ಯುಧಿಷ್ಠಿರನು ಸಕಲ ಸಂಪತ್ತನ್ನೂ ಅಡವಿಟ್ಟು ಕಳೆದುಕೊಂಡನು. ಕೊನೆಗೆ ತನ್ನನ್ನು, ತಮ್ಮಂದಿರನ್ನು, ದ್ರೌಪದಿಯನ್ನೂ ಪಣಕ್ಕಿಟ್ಟು ಸೋತುಹೋದ. ಆಗ ದುರ್ಯೋಧನಾದಿ ಕೌರವರು ಪಾಂಡವರನ್ನು ಹೀಯಾಳಿಸಿ, ದ್ರೌಪದಿಯೊಂದಿಗೆ ಅನುಚಿತವಾಗಿ ವರ್ತಿಸಿದರು. ಆದರೂ ಧೃತರಾಷ್ಟ್ರನು ಏನೊಂದೂ ಮಾತಾಡಲಿಲ್ಲ. ಈ ಕುರಿತು ಹಿರಿಯರು ಧೃತರಾಷ್ಟ್ರನನ್ನು ಎಚ್ಚರಿಸಿದರು. ಅವನು ದುರ್ಯೋಧನನನ್ನು ಆಕ್ಷೇಪಿಸಿ, ದ್ರೌಪದಿಗೆ, “ಬೇಕಾದ ವರ ಕೇಳು’ ಎಂದ. ಅವಳು “ಯುಧಿಷ್ಠರನು ದಾಸ್ಯದಿಂದ ಬಿಡುಗಡೆ ಹೊಂದಲಿ’ ಎಂದಳು. ಧೃತರಾಷ್ಟ್ರನು ಮತ್ತೂಂದು ವರವನ್ನು ಕೇಳುವಂತೆ ಹೇಳಿದ. ಅವಳು, “ಭೀಮ, ಅರ್ಜುನ, ನಕುಲ-ಸಹದೇವರು ತಮ್ಮ ರಥಗಳನ್ನು, ಬಿಲ್ಲುಗಳನ್ನು ಪಡೆಯಲಿ’ ಎಂದು ಹೇಳಿದಳು. ಪಾಂಡವರು ದಾಸ್ಯದಿಂದ ಬಿಡುಗಡೆ ಹೊಂದಿದರು. ಇಂದ್ರಪ್ರಸ್ಥಕ್ಕೆ ಪ್ರಯಾಣ ಹೊರಟರು. 

Advertisement

ದುರ್ಯೋಧನ ಮೊದಲಾದವರು ಕೋಪದಿಂದ ಕುದಿಯುತ್ತಿದ್ದರು. ದುರ್ಯೋಧನನು, ತಂದೆಯು ಪಾಂಡವರಿಗೆ ಎಲ್ಲವನ್ನೂ ಹಿಂದಿರುಗಿಸಿದುದನ್ನು ತೀವ್ರವಾಗಿ ಆಕ್ಷೇಪಿಸಿ ಅವರನ್ನು ಮತ್ತೆ ಪಗಡೆಯಾಟಕ್ಕೆ ಕರೆಸಬೇಕೆಂದು ಹಠ ಹಿಡಿದ. ಸೋತವರು ಹನ್ನೆರಡು ವರ್ಷ ವನವಾಸವನ್ನು, ಒಂದು ವರ್ಷ ಅಜ್ಞಾತವಾಸವನ್ನು ಮಾಡಬೇಕು. ಅಜ್ಞಾತವಾಸದ ಅವಧಿಯಲ್ಲಿ ಅವರನ್ನು ಯಾರಾದರು ಪತ್ತೆ ಹಚ್ಚಿದರೆ ಮತ್ತೆ ಹನ್ನೆರಡು ವರ್ಷ ಕಾಡಿಗೆ ಹೋಗಬೇಕು, ಹೀಗೆ ಷರತ್ತು ಹಾಕಿ ಮತ್ತೂಮ್ಮೆ ಪಗಡೆಯಾಟವನ್ನು ನಡೆಸಬೇಕು ಎಂದ. ಇದ್ಕಕೆ ಒಪ್ಪಲೇಬಾರದೆಂದು ಹಿರಿಯರೆಲ್ಲರೂ ಧೃತರಾಷ್ಟ್ರನಿಗೆ ಬುದ್ಧಿವಾದ ಹೇಳಿದರು. ಗಾಂಧಾರಿಯೂ, “ಇದು ಕೈಯಾರೆ ಬೆಂಕಿಯನ್ನು ಹೊತ್ತಿಸಿದ ಹಾಗೆ, ಈ ದುಸ್ಸಾಹಸ ಮಾಡಬೇಡ’ ಎಂದಳು. ಆದರೆ ಕುರುಡ ರಾಜನು ದುರ್ಯೋಧನನ ಮಾತಿಗೆ ಒಪ್ಪಿಬಿಟ್ಟ. ಅವನ ದೂತರು ಪಾಂಡವರ ಹಿಂದೆ ವೇಗವಾಗಿ ಹೋಗಿ ಧೃತರಾಷ್ಟ್ರನ ಆದೇಶವನ್ನು ತಿಳಿಸಿದ. ಧರ್ಮರಾಯನು ದೊಡ್ಡಪ್ಪನ ಆದೇಶವನ್ನು ಮೀರುವುದು ಸರಿಯಲ್ಲವೆಂದು ಮತ್ತೆ ಹಸ್ತಿನಾವತಿಗೆ ಬಂದ. ಸಭೆಯಲ್ಲಿ ನೆರೆದಿದ್ದವರೆಲ್ಲರೂ ಈ ಆಟ ನಡೆಯುವುದು ಬೇಡ ಎಂದರು. ಆದರೆ ಆಟ ನಡೆದೇ ಹೋಯ್ತು. ಯುಧಿಷ್ಠಿರ ಮತ್ತೆ ಪಗಡೆಯಾಟದಲ್ಲಿ ಸೋತುಹೋದ. 

ಪಾಂಡವರ ಸೋಲಿನಿಂದ ಕೌರವರು ಹಿರಿಹಿರಿ ಹಿಗ್ಗಿದರು. ದುಶ್ಯಾಸನನು ದ್ರೌಪದಿಗೆ, “ಈ ಕೆಲಸಕ್ಕೆ ಬಾರದ ಪಾಂಡವರನ್ನು ಬಿಟ್ಟು ಕೌರವರಲ್ಲಿ ಒಬ್ಬನನ್ನು ಆರಿಸಿಕೋ’ ಎಂದು ಹೇಳಿ, ಭೀಮನನ್ನು ಹಸು ಎಂದು ಹೀಯಾಳಿಸಿದ. ಅದರಿಂದ ಭೀಮನು ಕೆಂಡಾಮಂಡಲನಾಗಿ, ದುಶ್ಯಾಸನನ್ನು ಯುದ್ಧದಲ್ಲಿ ಕತ್ತರಿಸಿ ತುಂಡು ತುಂಡು ಮಾಡುವುದಾಗಿ ಪ್ರತಿಜ್ಞೆ ಮಾಡಿದ. ದುರ್ಯೋಧನನು ಭೀಮನನ್ನು ಅಣಕಿಸಲು, ಭೀಮನು -“ನಿನ್ನ ತೊಡೆಗಳನ್ನು ಯುದ್ಧದಲ್ಲಿ ಮುರಿಯುತ್ತೇನೆ. ಅರ್ಜುನನು ಕರ್ಣನನ್ನೂ, ಸಹದೇವನು ಶಕುನಿಯನ್ನೂ ಕೊಲ್ಲುತ್ತಾರೆ’ ಎಂದ.

ಜೂಜಿನಲ್ಲಿ ಸೋತ ಪಾಂಡವರು ವನವಾಸಕ್ಕೆಂದು ಕಾಡಿಗೆ ಹೊರಟರು. ವೃದ್ಧೆಯಾದ ಕುಂತಿಯು ಹಸ್ತಿನಾಪುರದಲ್ಲಿಯೇ ವಿದುರನ ಮನೆಯಲ್ಲಿ ಉಳಿದಳು. ದುಃಖದಿಂದ ಬಿಕ್ಕಳಿಸುತ್ತಿದ್ದ ಕುಂತಿಯು ದ್ರೌಪದಿಗೆ ಸಮಾಧಾನ ಹೇಳುತ್ತಾ, “ಧರ್ಮವು ನಿನ್ನನ್ನು ಕಾಪಾಡುತ್ತದೆ’ ಎಂದು ಧೈರ್ಯ ಹೇಳಿದಳು. “ಸಹದೇವನು ಬಹಳ ಸೂಕ್ಷ್ಮ ಸ್ವಭಾವದವನು, ಅವನನ್ನು ಹೆಚ್ಚು ಎಚ್ಚರಿಕೆಯಿಂದ ನೋಡಿಕೋ’ ಎಂದೂ ಹೇಳಿದಳು. ಪಾಂಡವರು ಕುಂತಿಗೆ ಸಾಂತ್ವನ ಹೇಳಿದರು. ಪುರಜನರೆಲ್ಲರೂ ದುಃಖ ಪಡುತ್ತಿರುವಂತೆ ಅವರು ಕಾಡಿಗೆ ಹೊರಟರು, ಕುಂತಿಯು ವಿದುರನ ಮನೆಗೆ ಹೋದಳು.  

(ಪ್ರೊ. ಎಲ್‌.ಎಸ್‌. ಶೇಷಗಿರಿ ರಾವ್‌ ಅವರ “ಕಿರಿಯರ ಮಹಾಭಾರತ’ ಪುಸ್ತಕದಿಂದ ಆಯ್ದ ಭಾಗ) 

Advertisement
Advertisement

Udayavani is now on Telegram. Click here to join our channel and stay updated with the latest news.

Next