Advertisement

ಪುರಾಣ ಕತೆ: ದೇವವ್ರತ, ಭೀಷ್ಮನಾದ ಕಥೆ!

12:21 PM Nov 09, 2017 | |

ಶಂತನು ಹಸ್ತಿನಾವತಿಯ ರಾಜ. ಅವನಿಗೆ ದೇವವ್ರತನೆಂಬ ಮಗ ಇದ್ದನು. ಒಂದು ದಿನ ಮಹಾರಾಜ ಶಂತನು ಯಮುನಾ
ನದಿಯ ದಡದಲ್ಲಿ ಸಂಚರಿಸುತ್ತಿದ್ದಾಗ, ಮೈ ಮರೆಸುವಂಥ ಸುಗಂಧದ ಅನುಭವವಾಯಿತು. ಅದು ಎಲ್ಲಿಂದ ಬಂದಿತು ಎಂದು ಹುಡುಕಿಕೊಂಡು ಹೋದಾಗ ಒಬ್ಬ ಬೆಸ್ತರ ಹುಡುಗಿಯನ್ನು ಕಂಡ. 

Advertisement

ಅವಳ ಹೆಸರು ಸತ್ಯವತಿ. ಅವಳು ಬಹು ಸುಂದರಿ. ಶಂತನು ಅವಳನ್ನು ಕುತೂಹಲದಿಂದ ಪ್ರಶ್ನಿಸಿದಾಗ ಅವಳು ಬೆಸ್ತರ ರಾಜನ ಮಗಳು, ಧರ್ಮಾರ್ಥವಾಗಿ ದೋಣಿಯನ್ನು ನಡೆಸುತ್ತಾಳೆ ಎಂದು ತಿಳಿಯಿತು. ರಾಜನು ಮೊದಲ ನೋಟದಲ್ಲೇ ಆಕೆಗೆ ಮರುಳಾದನು. “ಸುಂದರೀ ನಾನು ನಿನ್ನ ತಂದೆಯೊಡನೆ ಮಾತಾಡಬೇಕು. ನಿನ್ನ ಮನೆಗೆ ದಾರಿ ತೋರು…’ ಎಂದನು. ನಂತರ ಶಂತನುವು ಬೆಸ್ತರ ರಾಜನನ್ನು ಕಂಡು ಅವನ ಮಗಳನ್ನು ತನಗೆ ಮದುವೆ ಮಾಡಿಕೊಡಬೇಕೆಂದು ಕೇಳಿದ. 

ಬೆಸ್ತರ ರಾಜನು ಒಂದು ಷರತ್ತನ್ನು ವಿಧಿಸಿದ. ಶಂತನುವಿನ ನಂತರ ಸತ್ಯವತಿಯ ಮಗನೇ ರಾಜನಾಗಬೇಕು. ಸದ್ಗುಣಿಯಾದ, ಬೆಳೆದ ಮಗನಿರುವಾಗ ಶಂತನು ಈ ಷರತ್ತನ್ನು ಒಪ್ಪಲು ಸಾಧ್ಯವಿಲ್ಲ ಎಂದ. ಊರಿಗೆ ಬಂದ ಮೇಲೂ ಅವನು ಕೊರಗುತ್ತಲೇ ಇದ್ದ. ದೇವವ್ರತನು ಇದನ್ನು ಕಂಡು, ರಾಜನ ವೃದ್ಧ ಮಂತ್ರಿಯಿಂದ ಇದರ ಕಾರಣವನ್ನು ತಿಳಿದುಕೊಂಡ.

ಹಿರಿಯ ಕ್ಷತ್ರಿಯರೊಡನೆ ಬೆಸ್ತರ ರಾಜನ ಬಳಿಗೆ ಹೋಗಿ ಸತ್ಯವತಿಯನ್ನು ತನ್ನ ತಂದೆಗೆ ಕೊಟ್ಟು ಮದುವೆ ಮಾಡಬೇಕೆಂದು ಕೋರಿದ. ಬೆಸ್ತರ ರಾಜನು ಶಂತನುವಿಗೆ ಹೇಳಿದ್ದ ಮಾತನ್ನೇ ಈಗ ದೇವವ್ರತನಿಗೆ ಹೇಳಿದ. ದೇವವ್ರತನು “ನೀನು ಹೇಳಿದಂತೆಯೇ ಆಗಲಿ, ಈಕೆಯ ಮಗನೇ ಮುಂದೆ ರಾಜನಾಗುತ್ತಾನೆ. ನಾನು ಸಿಂಹಾಸನವನ್ನು ಬಯಸುವುದಿಲ್ಲ’ ಎಂದ. ಸತ್ಯವತಿಯ ತಂದೆ, “ನಿನ್ನ ಮಗ ಮುಂದೆ ಸಿಂಹಾಸನವನ್ನು ಕೇಳಬಹುದು’ ಎಂದ. ಆಗ ದೇವವ್ರತನು, “ನಾನು ಮದುವೆಯನ್ನೇ ಮಾಡಿಕೊಳ್ಳುವುದಿಲ್ಲ’ ಎಂದು
ಪ್ರತಿಜ್ಞೆ ಮಾಡಿದ. ಇಂಥ ಕಠಿಣವಾದ ಪ್ರತಿಜ್ಞೆಗಳನ್ನು ಮಾಡಿದುದರಿಂದ ದೇವವ್ರತನಿಗೆ ಭೀಷ್ಮ ಎಂದು ಹೆಸರು
ಬಂದಿತು.

ಸತ್ಯವತಿಯನ್ನು ಹಸ್ತಿನಾವತಿಗೆ ಕರೆದುಕೊಂಡು ಬಂದು ತಂದೆಗೆ ಒಪ್ಪಿಸಿದ. ಶಂತನುವು, ‘ನೀನು ಬಯಸಿದಾಗ ಮಾತ್ರ ಸಾವು ನಿನಗೆ ಬರಲಿ’ ಎಂದು ವರವನ್ನು ಕೊಟ್ಟ. ಶಂತನು- ಸತ್ಯವತಿಯರ ಮದುವೆಯಾಯಿತು. ಅವರಿಗೆ ಇಬ್ಬರು ಮಕ್ಕಳಾದರು. ಅವರೇ, ಚಿತ್ರವೀರ್ಯ ಮತ್ತು ವಿಚಿತ್ರವೀರ್ಯ.

Advertisement

ಪ್ರೊ. ಎಲ್‌. ಎಸ್‌. ಶೇಷಗಿರಿ ರಾವ್‌ ಅವರ
“ಕಿರಿಯರ ಮಹಾಭಾರತ’ ಪುಸ್ತಕದಿಂದ ಆಯ್ದ ಭಾಗ)

Advertisement

Udayavani is now on Telegram. Click here to join our channel and stay updated with the latest news.

Next