Advertisement

ಈಶ್ವರಪ್ಪ ಪ್ರಧಾನಿಯ ಪುರಾನಾ ಸಾಥಿ

12:27 PM Feb 05, 2018 | Team Udayavani |

ಬೆಂಗಳೂರು: ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಕೆ.ಎಸ್‌.ಈಶ್ವರಪ್ಪ ಅವರನ್ನು ವೇದಿಕೆಯಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು “ಮೇರಾ ಪುರಾನಾ ಸಾಥಿ’ ಎಂದು ಹೇಳಿದ್ದು ಅಚ್ಚರಿಗೆ ಕಾರಣವಾಯಿತು.

Advertisement

ಪರಿವರ್ತನಾ ಯಾತ್ರೆ ಸಮಾರೋಪಕ್ಕೆ ಆಗಮಿಸಿದ್ದ ಪ್ರಧಾನಿ ಮೋದಿ ಅವರು ವೇದಿಕೆ ಏರಿ ಗಣ್ಯರನ್ನು ಮಾತನಾಡಿಸುತ್ತಿದ್ದಾಗ ಈಶ್ವರಪ್ಪ ಅವರನ್ನು ಗಮನಿಸಿ ಅವರ ಬಳಿ ಬಂದು ಬೆನ್ನು ತಟ್ಟಿ ಮಾತನಾಡಿಸಿದರು. ನಂತರ ಭಾಷಣದಲ್ಲಿ ಈಶ್ವರಪ್ಪ ಅವರನ್ನು ಕುರಿತು “ಮೇರಾ ಪುರಾನಾ ಸಾಥಿ’ ಎಂದು ಸಂಭೋದಿಸಿದರು.

ಪುರಾನಾ ಸಾಥಿ ಏಕೆ?: ಈ ಕುರಿತಂತೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಹಲವು ವರ್ಷಗಳ ಹಿಂದೆ ಕಾಶ್ಮೀರದ ಲಾಲ್‌ಚೌಕ್‌ನಲ್ಲಿ ಪಾಕಿಸ್ತಾನದ ಧ್ವಜ ಹಾರುತ್ತಿತ್ತು. ಅದರ ಪಕ್ಕದಲ್ಲೇ ಗೋಡೆಯೊಂದರ ಮೇಲೆ ಉಗ್ರರು, ಭಾರತದಲ್ಲಿ ಯಾರಾದರೂ ತಾಯಿಯ ಮೊಲೆಹಾಲು ಕದ್ದಿದ್ದರೆ ಪಾಕ್‌ ಧ್ವಜ ತೆರವುಗೊಳಿಸಿ ಭಾರತದ ಧ್ವಜ ಹಾರಿಸಿ. ಅಂತಹವರಿಗೆ 10 ಲಕ್ಷ ರೂ. ಬಹುಮಾನ ನೀಡುವುದಾಗಿ ಬರೆದಿದ್ದರು.

ಆಗ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಮುರಳೀಮನೋಹರ್‌ ಜೋಷಿ ಅವರು ಇಡೀ ದೇಶದ ಯುವಕರನ್ನು ಲಾಲ್‌ಚೌಕಕ್ಕೆ ಕರೆದೊಯ್ಯಲು ರಾಷ್ಟ್ರವ್ಯಾಪಿ ರ್ಯಾಲಿ ಆಯೋಜಿಸಿದ್ದರು.  ನರೇಂದ್ರ ಮೋದಿ ಉಸ್ತುವಾರಿ ವಹಿಸಿದ್ದರು. ಆಗ ತಾನು ಬಿಜೆಪಿ ಯುವ ಮೋರ್ಚಾ ಕರ್ನಾಟಕದ ಅಧ್ಯಕ್ಷನಾಗಿದ್ದೆ. ಶಾಸಕನಾಗಿಯೂ ಇದ್ದೆ. ರಾಜ್ಯದ ಯುವಕರ ರ್ಯಾಲಿ ಕೇಸರಿ ವಾಹಿನಿಯ ಉಸ್ತುವಾರಿ ತನ್ನದಾಗಿತ್ತು.

ಮೋದಿ ಅವರೊಂದಿಗೆ ಅನೇಕ ಸಭೆಗಳನ್ನು ಮಾಡಿದ್ದೆವು. ಅದನ್ನು ಈಗ ಪ್ರಧಾನಿಯವರು ನೆನಪಿಸಿಕೊಂಡು ತನ್ನನ್ನು ಪುರಾನಾ ಸಾಥಿ ಎಂದು ಹೇಳಿದ್ದಾರೆ. ಅವರು ಹಾಗೆ ಹೇಳುತ್ತಾರೆಂಬ ಕಲ್ಪನೆಯೂ ತನಗಿರಲಿಲ್ಲ. ದೇಶದ ಉನ್ನತ ನಾಯಕನಾದರೂ ಸಾಮಾನ್ಯ ಕಾರ್ಯಕರ್ತರನ್ನು ಹೇಗೆ ನೆನಪಿಟ್ಟುಕೊಳ್ಳುತ್ತಾರೆ ಎಂಬುದಕ್ಕೆ ಇದು ಉದಾಹರಣೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next