Advertisement
ಹಸ್ತಿನಾವತಿ ತಲುಪಿದಾಗಲೇ ನಾನು ಮದುವೆಯಾಗಬೇಕಿರುವುದು ಜನ್ಮಾಂಧನನ್ನು ಎಂಬ ವಿಷಯ ತಿಳಿದದ್ದು. ಕಾಲನ್ನು ಗಾಂಧಾರದಿಂದ ಹಸ್ತಿನಾವತಿಯೆಡೆಗೆ ಇಟ್ಟಾಗಿತ್ತು! ನನಗೆ ಬೇರೆ ಆಯ್ಕೆ ಇರಲಿಲ್ಲ. ಆದರೆ ಮನಸ್ಸಿನೊಳಗೆ ಕ್ರೋಧ! ದ್ವೇಷ! ಯಾರ ಮೇಲೆ ಕ್ರೋಧಗೊಳ್ಳಲಿ? ಯಾರೊಡನೆ ದ್ವೇಷ ಸಾಧಿಸಲಿ? ಕ್ರೋಧ-ದ್ವೇಷಗಳು ಕರುಳ ಸಂಕಟವಾಗಿ ಬದಲಾಗಲು ಹೆಚ್ಚು ಸಮಯ ಹಿಡಿಯಲಿಲ್ಲ.
Related Articles
Advertisement
ದಿನಗಳು ಕಳೆದಂತೆ ಪಿತಾಮಹರ ಮೇಲಿನ ಕೋಪ ತಣ್ಣಗಾಯಿತು. ಅವರು ತೆಗೆದುಕೊಳ್ಳುತ್ತಿದ್ದ ನಿರ್ಣಯಗಳು ಹಸ್ತಿನಾವತಿಯ ದೃಷ್ಟಿಯಲ್ಲಿ ಸಮಂಜಸವಾಗಿಯೇ ಇರುತ್ತಿದ್ದವು. ಅವರ ಸ್ಥಾನದಲ್ಲಿ ನಿಂತು ಯೋಚಿಸುವಾಗ ಅವರ ನಿರ್ಧಾರ ಸರಿಯೆಂದೇ ತೋರುತ್ತಿತ್ತು. ಆದರೂ ಮನದೊಳಗೆ ಯಾವುದೋ ಅಸಮಾಧಾನ! ವಿಧಿ ನನ್ನ ಜೀವನವನ್ನು ನನ್ನಿಚ್ಛೆಯಂತೆ ಬದುಕಗೊಡದಿದ್ದರ ಬಗ್ಗೆ ಈ ಪ್ರಪಂಚದ ಬಗ್ಗೆಯೇ ದ್ವೇಷ-ಕೋಪ-ಸಂಕಟ-ದುಃಖ! ಒಂದು ದಿನವಾದರೂ ಮಕ್ಕಳಿಗೆ ಉಣ್ಣಿಸಲಿಲ್ಲ, ಎತ್ತಿ ಆಟವಾಡಿಸಲಿಲ್ಲ. ಮಕ್ಕಳನ್ನು ಬೆಳೆಸುವ, ತಿದ್ದಿತೀಡುವ ಕರ್ತವ್ಯವನ್ನು ಅಣ್ಣ ಶಕುನಿಯ ಕೈಗಿಟ್ಟು ಬದುಕಿನಲ್ಲಿ ನಿಜಕ್ಕೂ ಕುರುಡಿಯಾಗಿಬಿಟ್ಟೆ. ಒಬ್ಬ ಸಾಮಾನ್ಯ ಹೆಣ್ಣು ಸಹ ತನ್ನ ಮಕ್ಕಳಿಗಾಗಿ ಮಾಡಬಲ್ಲ ಕರ್ತವ್ಯಗಳಿಂದ ಹಿಂದುಳಿದುಬಿಟ್ಟೆ.
ನನ್ನ ಅಸಹಾಯಕತೆ ಕೋಪವಾಗಿ ಜ್ವಲಿಸುತ್ತಿತ್ತು. ಕುರುಕ್ಷೇತ್ರದ ಯುದ್ಧ ಮುಗಿದೇ ಹೋಗಿತ್ತು. ಹದಿನೆಂಟೇ ದಿನದಲ್ಲಿ ನನ್ನ ನೂರು ಗಂಡುಮಕ್ಕಳು, ಅಳಿಯ ಜಯದ್ರಥ, ಅಣ್ಣ ಶಕುನಿ ಎಲ್ಲರೂ ಯಮನ ಅತಿಥಿಗಳಾಗಿದ್ದರು. ಸೊಸೆಯಂದಿರ ಆಕ್ರಂದನ ಮುಗಿಲುಮುಟ್ಟಿತ್ತು. ಯಾರು ಯಾರಿಗೆ ಸಮಾಧಾನ ಹೇಳುವುದು? “ಪಾಂಡವರ ಪರವಹಿಸಿ ಈ ಯುದ್ಧ ಮಾಡಿಸಿದವನು ಕೃಷ್ಣ, ಅವನು ಮನಸ್ಸು ಮಾಡಿದ್ದರೆ ಈ ಯುದ್ಧವನ್ನು ತಪ್ಪಿಸಲು ಆಗುತ್ತಿರಲಿ ಲ್ಲವೇ? ದುರ್ಯೋಧನನ ಮನಸ್ಸನ್ನು ಪರಿವರ್ತಿಸಲು ಆಗುತ್ತಿರಲಿಲ್ಲವೇ? ಅವನಿಗೆಲ್ಲಿ ಮನಸ್ಸಿತ್ತು? ಪಕ್ಷಪಾತಿ…’ ಎಂದೇ ನನ್ನ ಮನಸ್ಸು ತರ್ಕಿಸುತ್ತಿತ್ತು. ಕೃಷ್ಣನ ಮೇಲೆ ಪ್ರತೀಕಾರ ತೆಗೆದುಕೊಳ್ಳಲು ಹಪಹಪಿಸತೊಡಗಿತು.
ನನ್ನನ್ನು ಕಾಣಲು ಬಂದ ಕೃಷ್ಣನನ್ನು ಸಹೃದಯತೆಯಿಂದ ಮಾತನಾಡಿಸಲು ಸಾಧ್ಯವಾಗಲೇ ಇಲ್ಲ. ಕೃಷ್ಣ ಕಾಲಿಗೆರಗಿ “ಆಶೀರ್ವದಿಸು ಮಾತೆ’ ಎಂದಾಗ ಉರಿದುಬಿದ್ದೆ. “ಕೃಷ್ಣಾ, ತೃಪ್ತಿಯಾಯಿತೇ ನಿನಗೆ? ಸಾಯುವ ಕಾಲಕ್ಕೆ ನನ್ನ ಬಾಯಿಗೆ ಗಂಗೋದಕ ಬಿಡುವುದಕ್ಕೆ ಒಬ್ಬ ಮಗನೂ ಉಳಿಯದಂತೆ ಎಲ್ಲರನ್ನೂ ಕೊಲ್ಲಿಸಿಬಿಟ್ಟೆಯಲ್ಲ. ಪಾಪಿ. ನಿನ್ನ ಕುಲವೂ ಇದೇ ರೀತಿ ತಮ್ಮತಮ್ಮಲ್ಲೇ ಬಡಿದುಕೊಂಡು ನಿನ್ನ ಕಣ್ಣೆದುರೇ ನಷ್ಟವಾಗಿ ಹೋಗಲಿ. ನಿನಗೆ ವೀರಮರಣವೂ ದಕ್ಕದೇ ಹೋಗಲಿ. ಇದು ನನ್ನ ಶಾಪ’ ಎಂದೆ.
ಕೋಪದಲ್ಲಿ ಕುದಿಯುತ್ತಿದ್ದ ನನ್ನನ್ನು ಕೈಹಿಡಿದು ಕರೆತಂದು ಆಸನವೊಂದರಲ್ಲಿ ಕುಳ್ಳಿರಿಸಿದ ಕೃಷ್ಣ. ನಾನಿನ್ನೂ ಕುದಿಯುತ್ತಿದ್ದೆ. ಕೋಣೆಯಲ್ಲಿ ಒಂದಿಷ್ಟು ಹೊತ್ತು ಗಾಢಮೌನ. ಕೃಷ್ಣನ ದೃಷ್ಟಿ ನನ್ನ ಮೇಲೆಯೇ ಇತ್ತೇ? ಮನಸ್ಸು ನಿಧಾನವಾಗಿ ಸ್ಥಿಮಿತಕ್ಕೆ ಬರತೊಡಗಿತು. ನಿಟ್ಟುಸಿರು ಬಿಟ್ಟು ಆಸನಕ್ಕೆ ಒರಗಿ ಕುಳಿತೆ. ನಾನು ಕೃಷ್ಣನಿಗೇ ಶಾಪ ಕೊಟ್ಟದ್ದನ್ನು ನೆನಪಿಸಿಕೊಂಡು ಕಸಿವಿಸಿಯಾಗತೊಡಗಿತು. ಇದೆಂತಹ ಹುಚ್ಚುತನವಾಯಿತು ನನ್ನದು? ಪಶ್ಚಾತ್ತಾಪವಾಗತೊಡಗಿತು. “ನನ್ನ ಮಕ್ಕಳು ಪಡೆದು ಬಂದದ್ದನ್ನು ಅನುಭವಿಸಿ ಹೊರಟುಹೋದರು. ಅದಕ್ಕಾಗಿ ನಾನು ಕೃಷ್ಣನನ್ನೇಕೆ ದೂಷಿಸಿದೆ? ಛೇ!’ ಅನ್ನಿಸತೊಡಗಿತು. “ಕೋಪದ ಭರದಲ್ಲಿ ಏನೇನೋ ಹಲುಬಿಬಿಟ್ಟೆ. ಕ್ಷಮಿಸು ಕೃಷ್ಣಾ. ಹೆತ್ತ ಒಡಲಿನ ಉರಿ ಹೀಗೆಲ್ಲ ಮಾತನಾಡಿಸಿಬಿಟ್ಟಿತು’ ಎಂದೆ.
ಕೃಷ್ಣ ನನಗೆ ಸಮೀಪದಲ್ಲೇ ಬಂದು ಕುಳಿತ. ನನ್ನ ಕೈಗಳನ್ನು ಹಿಡಿದು ಕಣ್ಣಿಗೆ ಒತ್ತಿಕೊಂಡ. “ಮಾತೆ, ನಿನ್ನ ಮೇಲೆ ನನಗೆ ಮುನಿಸೇ? ಅದು ಹೇಗೆ ಸಾಧ್ಯ? ನಿನ್ನ ಶಾಪವನ್ನು ಸ್ವೀಕರಿಸುತ್ತೇನೆ. ನಿನ್ನ ಮಾತು ನನಗೆ ಆಶೀರ್ವಾದ. ಒಂದು ಮಾತು ಹೇಳುತ್ತೇನೆ, ಕೇಳುವೆಯಾ ತಾಯಿ?’ ಎಂದ.
“ಹೇಳು ಮಾಧವಾ’ ಎಂದೆ.ಕೃಷ್ಣ ಹೇಳತೊಡಗಿದ: “ಮಕ್ಕಳನ್ನು ಧರ್ಮದ ಪಥದಲ್ಲಿ ನಡೆಯುವಂತೆ ಬೆಳೆಸುವುದು ತಾಯಿಯಾಗಿ ನಿನ್ನ ಕರ್ತವ್ಯವಾಗಿತ್ತಲ್ಲವೇ? ಕಡೇಪಕ್ಷ ಮಕ್ಕಳು ಅಧರ್ಮದ ಹಾದಿ ತುಳಿದಾಗ ಎಚ್ಚರಿಸಿದ ಸಮಾಧಾನವಾದರೂ ನಿನ್ನದಾಗುತ್ತಿತ್ತಲ್ಲವೇ? ನಿನ್ನದೇ ತಪ್ಪಿಟ್ಟುಕೊಂಡು ನನ್ನಲ್ಲಿ ದೋಷವನ್ನು ಹುಡುಕುತ್ತಿರುವೆಯಲ್ಲ ಮಾತೆ! ಇರಲಿ ಬಿಡು. ಮಕ್ಕಳನ್ನು ಕಳೆದುಕೊಂಡವಳ ದುಃಖವನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ. ನನ್ನ ಯಾದವ ವಂಶ ನಿನ್ನ ಶಾಪದಂತೆಯೇ ಅಳಿಯಲಿದೆ. ನಾನಿನ್ನು ಹೋಗಿಬರಲೇ?’
ಹೇಳಲು ನನ್ನಲ್ಲಿ ಏನಿತ್ತು? ಅಂದು ಕೃತಕ ಕುರುಡುತನವನ್ನು ಆವಾಹಿಸಿಕೊಂಡಂತೆ ಇಂದು ಮೂಕತ್ವವನ್ನೂ ಆವಾಹಿಸಿಕೊಂಡೆ. ಮತ್ತೆ ಕಾಲಿಗೆರಗಿದ ಕೃಷ್ಣ ಹೊರಟೇ ಹೋದ.
-ಸುರೇಖಾ ಭೀಮಗುಳಿ