Advertisement

ಪ್ಯುಬರ್‌ಫೋನಿಯಾ: ನಿಮ್ಮ ಧ್ವನಿ ಹೆಣ್ಣಿನ ಧ್ವನಿಯಂತೆ ಕೇಳಿಸುವುದೇ?

05:17 PM Aug 23, 2020 | Suhan S |

ಬೆಳೆಯುತ್ತಿರುವ ಗಂಡು ಮಕ್ಕಳಲ್ಲಿ, ಅವರ ಪ್ರೌಢ ವಯಸ್ಸಿನ ಬೆಳವಣಿಗೆಯ ಅವಧಿಯಲ್ಲಿ ಧ್ವನಿ ಬದಲಾವಣೆಯಾಗುತ್ತದೆ. ಮಕ್ಕಳ ಕಂಠಕುಹರ ಅಥವಾ ಧ್ವನಿಪೆಟ್ಟಿಗೆ ಮತ್ತು ಶ್ವಾಸನಾಳದ ಸಂಕೀರ್ಣತೆಯ ಮಟ್ಟವು ಪ್ರೌಢವಯಸ್ಕರಿಗಿಂತಲೂ ಹೆಚ್ಚಿರುತ್ತದೆ. ಕಂಠಕುಹರ-ಶ್ವಾಸನಾಳ ವ್ಯವಸ್ಥೆಯು (ಲ್ಯಾರಿಂಜೋಟ್ರೇಕಿಯಲ್‌ ಕಾಂಪ್ಲೆಕ್ಸ್‌) ಜೀವನ ಪರ್ಯಂತ ಕೆಳಗೆ ಸರಿಯುತ್ತಾ ಇರುತ್ತದೆ.

Advertisement

ಆದರೆ ಪ್ರೌಢವಯಸ್ಕರಾಗುವ ಈ ಹಂತದಲ್ಲಿ ನಾಲಗೆಯ ಬುಡಕ್ಕೆ ಸಂಬಂಧಿಸಿದ ಹಾಗೆ ಬಹಳ ಕೆಳಗೆ ಸರಿಯುತ್ತದೆ. ಗಂಡು ಮಕ್ಕಳು ಪ್ರೌಢ ವಯಸ್ಕರಾಗುವಾಗ ಅವರ ಧ್ವನಿಯಲ್ಲಿ ಹಠಾತ್‌ ಬದಲಾವಣೆ ಆಗುವಂತಹ ಪ್ರಕರಣಗಳನ್ನು ನಾವೆಲ್ಲರೂ ಅನೇಕ ಬಾರಿ ನೋಡುತ್ತಿರುತ್ತೇವೆ. ಅಂದರೆ ಮಕ್ಕಳ ಬೆಳವಣಿಗೆಯ ಹಂತದಲ್ಲಿ ಈ ರೀತಿಯ ಬದಲಾವಣೆ ಆಗದಿದ್ದರೆ ನಾವು ಅದಕ್ಕೆ ಪ್ಯುಬರ್‌ಫೋನಿಯಾ ಎಂದು ಕರೆಯುತ್ತೇವೆ.

ಅಂದರೆ ಈ ರೀತಿಯ ಸಮಸ್ಯೆ ಇರುವ ಹುಡುಗರಲ್ಲಿ ಅವರ ಪ್ರೌಢ ವಯಸ್ಸಿಗೆ ಅನುಗುಣವಾಗಿರದೆ, ಅಸಹಜವಾಗಿ ಅಧಿಕ ಸ್ಥಾಯಿಯ ಧ್ವನಿ ಹೊರಡುತ್ತದೆ. ಪ್ರೌಢ ವಯಸ್ಸನ್ನು ಮೀರಿರುವ ಅನೇಕ ಹುಡುಗರಲ್ಲಿ ಈ ರೀತಿಯ ಅಸಹಜ ಮತ್ತು ಅಧಿಕ ಸ್ಥಾಯಿ ಧ್ವನಿ ಹೊರಡುತ್ತಿರುತ್ತದೆ, ಅಂದರೆ ಅವರ ಧ್ವನಿಯು ಬಹುವಾಗಿ ಹೆಣ್ಣು ಧ್ವನಿಯಂತೆ ಕೇಳಿಸುತ್ತದೆ. ಎಷ್ಟೋ ಬಾರಿ ದೂರವಾಣಿಯ ಆ ಕಡೆಯಲ್ಲಿ ಮಾತನಾಡುತ್ತಿರುವವರು ಹೆಣ್ಣು ಎಂದು ತಪ್ಪಾಗಿ ಅರ್ಥಮಾಡಿಕೊಳ್ಳುವುದೂ ಇದೆ. ಈ ಪರಿಸ್ಥಿತಿಯು ಆ ವ್ಯಕ್ತಿಯ ಮೇಲೆ ಮಾನಸಿಕ ಮತ್ತು ಜೀವನದ ಮೇಲೆ ಸಾಮಾಜಿಕ ಪರಿಣಾಮ ಉಂಟು ಮಾಡುತ್ತದೆ.

ಧ್ವನಿಯ ಈ ಮಾರ್ಪಾಡಿನ ಅಸಹಜತೆಯು ಪುರುಷರಲ್ಲಿ ಮಾತ್ರ ಕಾಣಿಸಿಕೊಳ್ಳುತ್ತದೆಯೇ? :  ಪುರುಷ ಮತ್ತು ಮಹಿಳೆ ಇಬ್ಬರಲ್ಲಿಯೂ ಬೆಳವಣಿಗೆಗೆ ಸಂಬಂಧಿಸಿದ ಧ್ವನಿಯ ಮಾರ್ಪಾಡು ಕಂಡುಬರುತ್ತದೆ. ಆದರೆ ಹೆಣ್ಣು ಮಕ್ಕಳಲ್ಲಿ ಈ ಧ್ವನಿಯ ಮಾರ್ಪಾಡು ಗಂಡು  ಮಕ್ಕಳಿಗಿಂತ ಬಹಳ ಮೊದಲೇ ಆಗುತ್ತದೆ. ಆದರೆ ಹೆಣ್ಣು ಮಕ್ಕಳಿಗೆ ಹೋಲಿಸಿದರೆ, ಗಂಡು ಮಕ್ಕಳಲ್ಲಿ ಧ್ವನಿ ಬದಲಾವಣೆಯ ಆ ಪರಿವರ್ತನ ಪ್ರಕ್ರಿಯೆ ಬಲವಾಗಿರುತ್ತದೆ. ಹುಡುಗರಲ್ಲಿ ಧ್ವನಿಯ ಬದಲಾವಣೆಯ ಮಟ್ಟವು ಅಷ್ಟಮ ಶ್ರೇಣಿ (ಅಕ್ಟಾವೇಸ್‌) ಯಲ್ಲಿ ಮತ್ತು ಹುಡುಗಿಯರಲ್ಲಿ ಸೆಮಿಟೋನ್ಸ್‌ (ಅರೆ ಸ್ವರದಲ್ಲಿ)ನಲ್ಲಿ ಆಗುತ್ತದೆ. ಹುಡುಗಿಯರಲ್ಲಿಯೂ ಸಹ ಧ್ವನಿಯ ಮಾರ್ಪಾಡಿನ ಅಸಹಜತೆಗಳು ಕಾಣಿಸಿಕೊಳ್ಳುತ್ತವೆ. ಅದೇ ರೀತಿಯಲ್ಲಿ ಹುಡುಗಿಯರಲ್ಲಿಯೂ ಸಹ ಪುರುಷರಂತೆಧ್ವನಿ ಇರುವುದು, ಸಣ್ಣ ಸ್ಥಾಯಿಯ ಧ್ವನಿ ಇರುವುದನ್ನು ಗಮನಿಸಬಹುದು. ಈ ಪರಿಸ್ಥಿತಿಗೆ ಆಂಡ್ರೋಫೋನಿಯಾ ಎಂದು ಹೆಸರು.

ಕಾರಣ :  ಈ ರೀತಿಯಲ್ಲಿ ಧ್ವನಿ ವ್ಯತ್ಯಾಸವಾಗುವುದಕ್ಕೆ ನಿಖರ ಕಾರಣ ಏನು ಎಂಬುದು ಇನ್ನಷ್ಟೆ ತಿಳಿದು ಬರಬೇಕಿದೆ. ಆದರೆ ಅಂದಾಜು ಮಾಡಬಹುದಾದ ಇನ್ನಿತರ ಕಾರಣಗಳು ಅಂದರೆ, ತನ್ನ ಹೊಸ ಧ್ವನಿಯ ಬಗ್ಗೆ ಮುಜುಗರ ಪಟ್ಟುಕೊಳ್ಳುವುದು, ಅದರಲ್ಲೂ ವಿಶೇಷವಾಗಿ ತನ್ನ ವಯಸ್ಸಿನ ಓರಗೆಯವರಿಗಿಂತ ಮೊದಲೇ ಧ್ವನಿ ಬದಲಾವಣೆ ಆಗುವುದಕ್ಕೆ ಮುಜುಗರ

Advertisement

ಪಟ್ಟುಕೊಳ್ಳುವುದು, ಭಾವನಾತ್ಮಕ ಒತ್ತಡ, ಲೈಂಗಿಕ ಬೆಳವಣಿಗೆ ಸೆಕೆಂಡರಿ ಹಂತವು ವಿಳಂಬವಾಗಿ ಆಗುವುದು, ತಂದೆ-ತಾಯಿಗಳ ಅತಿಯಾದ ಕಾಳಜಿ, ಹುಡುಗರಿಗೆ ತಮ್ಮ ಪ್ರೌಢವಯಸ್ಸಿನ ಪಾತ್ರವನ್ನು ನಿಭಾಯಿಸಲು ಆಗದಿರುವುದು, ಸಾಮಾಜಿಕ ಪ್ರೌಢತೆ ಇಲ್ಲದಿರುವುದು, ಶ್ರವಣ ನ್ಯೂನತೆ, ಕಂಠಕುಹರದ ಸ್ನಾಯುಗಳ ಮೇಲಿನ ಹೆಚ್ಚುವ ಒತ್ತಡ ಮತ್ತು ಸಂಕುಚನೆಯಿಂದಾಗಿ, ಕಂಠಕುಹರವು ವಿಸ್ತರಣೆ ಅಥವಾ ಅಸಂಯೋಜನೆ/ಕಾರ್ಯನ್ಯೂನತೆಗೆ ಒಳಗಾಗುವುದು ಕಂಡು ಬಂದಿರುತ್ತದೆ. ಆದರೆ ಇದಕ್ಕೆ ನಿಖರ ಕಾರಣ ಏನು ಎಂಬುದು ತಿಳಿದು ಬಂದಿಲ್ಲ.

ಚಿಕಿತ್ಸೆ  :  ಪ್ಯುಬರ್‌ಫೋನಿಯಾ ಇದೆ ಎಂಬುದಾಗಿ ತಪಾಸಣೆ ಆದ ವ್ಯಕ್ತಿಗಳಿಗೆ ಸಾಮಾನ್ಯವಾಗಿ ಸ್ಪೀಚ್‌ ಥೆರಪಿಸ್ಟ್‌ಗಳು ಧ್ವನಿ-ಚಿಕಿತ್ಸೆಯನ್ನು ನೀಡುತ್ತಾರೆ. ಇಂತಹ ವ್ಯಕ್ತಿಗಳು ಎಷ್ಟು ಬೇಗ ಧ್ವನಿ ಚಿಕಿತ್ಸೆಯನ್ನು ಪಡೆಯುತ್ತಾರೆಯೋ ಅವರಿಗೆ ಅಷ್ಟೇ ಪ್ರಯೋಜನವಾಗುತ್ತದೆ. ಒಂದು ವೇಳೆ ಅವರು ಧ್ವನಿ ಚಿಕಿತ್ಸೆಯನ್ನು ಪಡೆಯಲು ವಿಳಂಬ ಮಾಡಿದರೆ, ಚಿಕಿತ್ಸೆಯ ಫ‌ಲಿತಾಂಶ ಅಷ್ಟೊಂದು ಉತ್ತಮವಾಗಿರಲಿಕ್ಕಿಲ್ಲ. ಮಾತ್ರವಲ್ಲ ವ್ಯಕ್ತಿಗೆ ಸಕಾಲದಲ್ಲಿ ಚಿಕಿತ್ಸೆಯನ್ನು ನೀಡದೆ ಹೋದರೆ, ಈಗಾಗಲೇ ಅಭ್ಯಾಸವಾಗಿರುವ ತನ್ನ ಧ್ವನಿಯಿಂದ ಹೊರಬರುವುದು ಆತನಿಗೆ ಇನ್ನಷ್ಟು ಕಷ್ಟವಾಗಬಹುದು. ಒಂದುವೇಳೆ ಸಂರಕ್ಷಣಾತ್ಮಕ ಚಿಕಿತ್ಸೆಗಳಿಂದ ಅವರ ಧ್ವನಿಯು ಸರಿಹೋಗದಿದ್ದರೆ, ನಿಧಾನ ಚಿಕಿತ್ಸಾ ರೂಪದಲ್ಲಿ ಇನ್ನಿತರ ಚಿಕಿತ್ಸಾ ಕ್ರಮಗಳನ್ನು ಪರಿಗಣಿಸಬಹುದು. ಸಮಸ್ಯೆಯನ್ನು ನಿರ್ಲಕ್ಷಿಸಿದರೆ, ಧ್ವನಿ ಚಿಕಿತ್ಸೆಯಿಂದಲೂ ಸಹ ನಿಭಾಯಿಸಲು ಸಾಧ್ಯವಾಗದೆ ಹೋಗಬಹುದು.

 ನಿಮಗೆ ಈ ಕೆಳಗಿನವುಗಳಲ್ಲಿ ಯಾವುದಾದರೂ ಸಮಸ್ಯೆ ಇದೆಯೇ ? :  

  1. ನಿಮ್ಮ ವಯಸ್ಸಿನ ಇತರ ಮಕ್ಕಳಿಗೆ ಹೋಲಿಸಿದರೆ, ಆ ಮಟ್ಟದಲ್ಲಿ ನಿಮ್ಮಲ್ಲಿ ಧ್ವನಿ ಬದಲಾವಣೆ ಆಗದಿರುವುದು
  2. ಮಾತನಾಡುವಾಗ ಹೆಣ್ಣು ಧ್ವನಿ ಹೊರಡುವುದು
  3. ಧ್ವನಿಯ ಸ್ಥಾಯಿ ಒಡೆಯುವುದು ((Pitch Breaks)
  4. ಗಟ್ಟಿಯಾಗಿ ಕಿರುಚಲು ಆಗದೆ ಇರುವುದು ಎರಡು ಸ್ಥಾಯಿ ಧ್ವನಿ (Double Pitch Voice) ಹೊರಡುವುದು ಧ್ವನಿ ನಿತ್ರಾಣವಾಗುವುದು
  5. ಹಿನ್ನೆಲೆಯ ಧ್ವನಿಯೊಂದಿಗೆ ಸರಿಸಮಾನವಾಗಿ ಹೋಗಲು ಆಗದಿರುವುದು.

 

ಡಾ| ದೀಪಾ ಎನ್‌. ದೇವಾಡಿಗ,

ಅಸೋಸಿಯೇಟ್‌ ಪ್ರೊಫೆಸರ್‌,

ಸ್ಪೀಚ್‌ ಎಂಡ್‌ ಹಿಯರಿಂಗ್‌ ವಿಭಾಗ, SOAHS

, ಉಡುಪಿ ಟಿಎಂಎ ಪೈ ಆಸ್ಪತ್ರೆ.

Advertisement

Udayavani is now on Telegram. Click here to join our channel and stay updated with the latest news.

Next