Advertisement

ಪುಂಜಾಲಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೆ

11:19 AM Apr 02, 2021 | Team Udayavani |

ಪುಂಜಾಲಕಟ್ಟೆ: ಬಹು ಕಾಲದ ಬೇಡಿಕೆಯಾಗಿರುವ ಪುಂಜಾಲಕಟ್ಟೆ ಪ್ರಾ. ಆರೋಗ್ಯ ಕೇಂದ್ರ ಮೇಲ್ದರ್ಜೆಗೇರುವ ಕಾಲ ಕೂಡಿ ಬಂದಿದೆ. ರಾಜ್ಯ ಸರಕಾರ ಘೋಷಿಸಿದ 250 ಪ್ರಾ.ಆ.ಕೇಂದ್ರಗಳ ಉನ್ನತೀಕರಣದಲ್ಲಿ ಇದೂ ಒಂದಾಗಿದೆ. ಪುಂಜಾಲಕಟ್ಟೆ ಪ್ರಾ.ಆ. ಕೇಂದ್ರವನ್ನು 6 ಕೋ.ರೂ. ವೆಚ್ಚದಲ್ಲಿ ಜಾಗತಿಕ ಮಟ್ಟದ ಚಿಕಿತ್ಸಾ ಕೇಂದ್ರವಾಗಿಸುವ ಕಾರ್ಯವನ್ನು ಶೀಘ್ರ ಕೈಗೆತ್ತಿಕೊಳ್ಳುವುದಾಗಿ ರಾಜ್ಯ ಆರೋಗ್ಯ ಸಚಿವ ಡಾ| ಸುಧಾಕರ್‌ ಘೋಷಿಸಿದ್ದು, ಸಾರ್ವಜನಿಕರು ಸಂತಸ ವ್ಯಕ್ತಪಡಿಸಿದ್ದಾರೆ.

Advertisement

ಬಹುಕಾಲದ ಬೇಡಿಕೆ :

ಗ್ರಾಮೀಣ ಪ್ರದೇಶಗಳನ್ನೊಳಗೊಂಡ ಪುಂಜಾ ಲಕಟ್ಟೆಯ ಪ್ರಾಥಮಿಕ ಆರೋಗ್ಯ ಕೇಂದ್ರ ಹಲವು ಕೊರತೆಗಳ ನಡುವೆಯೂ ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡುತ್ತಿದೆ. ಬಂಟ್ವಾಳ ತಾಲೂಕಿನ ಪಿಲಾತಬೆಟ್ಟು, ಇರ್ವತ್ತೂರು, ಮೂಡುಪಡುಕೋಡಿ, ಬಡಗಕಜೆಕಾರು, ತೆಂಕಕಜೆಕಾರು, ಕಾವಳಮೂಡೂರು, ಕಾವಳಪಡೂರು, ಕಾಡಬೆಟ್ಟು ಗ್ರಾಮಗಳು ಹಾಗೂ  ಬೆಳ್ತಂಗಡಿ ತಾಲೂಕಿನ ಮಾಲಾಡಿ, ಕುಕ್ಕಳ ಗ್ರಾಮಸ್ಥರು ಅವಲಂಬಿಸಿರುವ ಸರಕಾರಿ ಆಸ್ಪತ್ರೆ ಇದಾಗಿದೆ. ದಿನವೊಂದಕ್ಕೆ ಸುಮಾರು 150ರಿಂದ 200 ರೋಗಿಗಳು ಇಲ್ಲಿಗೆ ಚಿಕಿತ್ಸೆಗೆ ಬರುತ್ತಾರೆ. ಕಾಯಂ ಎಂಬಿಬಿಎಸ್‌ ವೈದ್ಯರ ಹಾಗೂ ಸ್ಟಾಫ್‌ ನರ್ಸ್‌ ಕೊರತೆಯಿಂದಾಗಿ ಹೆಚ್ಚಿನ ಚಿಕಿತ್ಸೆ ನೀಡಲು ಸಮಸ್ಯೆಯಾಗಿತ್ತು.

ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆ ಗೇರಿಸುವುದು, ಪೂರ್ಣಾವಧಿ ವೈದ್ಯರ ನೇಮಕ ಮೊದಲಾದ ಬೇಡಿಕೆಗಳ ಬಗ್ಗೆ  ಸಾರ್ವಜನಿಕರು ಹಾಗೂ ಇತರ ಸಂಘ ಟನೆಗಳ ವತಿಯಿಂದ ಈ ಹಿಂದೆ ಪ್ರತಿ ಭಟನೆಗಳು ನಡೆದಿದ್ದವು. ಆದರೂ ವ್ಯವಸ್ಥೆ ಯಾಗಿರಲಿಲ್ಲ. ಇದಕ್ಕೆ ಕಾನೂನಿನ ತೊಡಕು ಪ್ರಮುಖ ಕಾರಣವಾಗಿತ್ತು. ಸಮುದಾಯ ಆಸ್ಪತ್ರೆಯಾಗಿಸಲು ಅಗತ್ಯ ವಾದ ಐವತ್ತು ಸಾವಿರ ಜನಸಂಖ್ಯೆಗೆ  ವಾಮ ದಪದವಿನಲ್ಲಿ ಅದಾಗಲೇ ಸಮುದಾಯ ಆಸ್ಪತ್ರೆ ಸ್ಥಾಪಿಸಲಾಗಿದೆ.

ಹೀಗಾಗಿ ಜಟಿಲವಾದ ಕಾನೂನು ಸರಳಗೊಳಿಸಿ ಜನತೆಗೆ ಆರೋಗ್ಯ ವ್ಯವಸ್ಥೆ ಕಲ್ಪಿಸಬೇಕೆಂದು ಬಹು ಕಾಲದ ಬೇಡಿಕೆಯಾಗಿತ್ತು.

Advertisement

ಬೆಳ್ತಂಗಡಿ, ಬಂಟ್ವಾಳ ಹಾಗೂ ವಾಮದಪದವಿನಲ್ಲಿ ಸಮುದಾಯ ಆಸ್ಪತ್ರೆಗಳಿವೆ. ಇವುಗಳ ನಡುವೆ ಬಹಳ ಅಂತರವಿದೆ. ಆದ್ದರಿಂದ ಪುಂಜಾಲಕಟ್ಟೆ ಪರಿಸರ ಮಾತ್ರವಲ್ಲ ಅಕ್ಕ ಪಕ್ಕದ ಊರುಗಳಿಂದಲೂ ಜನರು ಈ ಆಸ್ಪತ್ರೆಗೆ ಆಗಮಿಸುತ್ತಾರೆ.

ವೈದ್ಯಾಧಿಕಾರಿ ಇಲ್ಲ :

ಇಲ್ಲಿ 7 ವರ್ಷಗಳಿಂದ ಒಂದು ವೈದ್ಯಾಧಿಕಾರಿ ಹುದ್ದೆ ಇದೆ. ಆದರೆ ಕಾಯಂ ವೈದ್ಯಾಧಿಕಾರಿ ಇಲ್ಲ. ಬಿ.ಸಿ.ರೋಡ್‌ ಗಿರಿಜನ ಸಂಚಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ| ಸತೀಶ್‌ ಎಂ.ಸಿ. ಪ್ರಭಾರ ವೈದ್ಯಾಧಿಕಾರಿಯಾಗಿ ವಾರದಲ್ಲಿ ಮೂರುದಿನ ಕರ್ತವ್ಯ ನಿರ್ವಹಿಸಬೇಕಾಗಿದೆ. ಮತ್ತೋರ್ವ ಆಯುಷ್‌ ವೈದ್ಯ ಡಾ| ಸೋಹನ್‌ ಕುಮಾರ್‌ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿಭಾಯಿಸುತ್ತಾರೆ.

ಸ್ಟಾಫ್‌ ನರ್ಸ್‌ ಹುದ್ದೆಯೇ ಇಲ್ಲ :

ಹಿಂದೆ ಆರೋಗ್ಯ ಕೇಂದ್ರದಲ್ಲಿ ದಿನದ ಇಪ್ಪತ್ತನಾಲ್ಕು ಗಂಟೆಯೂ ತೆರೆಯುವ ವ್ಯವಸ್ಥೆ ಇತ್ತು. ಆಗ ಮೂರು ಮಂದಿ ಸ್ಟಾಫ್‌ ನರ್ಸ್‌ ಇದ್ದರು. ಹೆರಿಗೆಯ ಸಂಖ್ಯೆ ಕಡಿಮೆಯಾದ ನಿಟ್ಟಿನಲ್ಲಿ ಈ ವ್ಯವಸ್ಥೆ ರದ್ದುಗೊಂಡಿದೆ. ಜತೆಗೆ ಸ್ಟಾಫ್‌ ನರ್ಸ್‌ ಹುದ್ದೆಯೂ ರದ್ದುಗೊಂಡಿದೆ. ಪ್ರಸ್ತುತ ಓರ್ವ ಸ್ಟಾಫ್‌ ನರ್ಸ್‌ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹಿರಿಯ ಮಹಿಳಾ ಆರೋಗ್ಯ ಸಹಾಯಕಿ ಹುದ್ದೆ ಖಾಲಿ ಇದೆ. ಈ ಕಾರಣದಿಂದ ರಾತ್ರಿ ಒಳರೋಗಿಗಳ ಚಿಕಿತ್ಸೆಗೆ ಅವಕಾಶವಿಲ್ಲ.ಸಂಜೆಯವರೆಗೆ ಚಿಕಿತ್ಸೆ ನೀಡಿ ಅಗತ್ಯವಾದಲ್ಲಿ ಬೆಳ್ತಂಗಡಿ ಅಥವಾ ಬಂಟ್ವಾಳ ತಾಲೂಕು ಆಸ್ಪತ್ರೆಗೆ ಕಳುಹಿಸಲಾಗುತ್ತಿದೆ. ಗ್ರೂಪ್‌ ಡಿ ಸಿಬಂದಿ ಹುದ್ದೆ ಖಾಲಿಯಾದ ಕಾರಣ  ಮರಣೋತ್ತರ ಪರೀಕ್ಷೆಗೆ ಬೆಳ್ತಂಗಡಿ ಅಥವಾ ಬಂಟ್ವಾಳಕ್ಕೆ ಹೋಗಬೇಕಾಗಿದೆ. ಇಲ್ಲಿ ಪ್ರಯೋಗ ಶಾಲಾ ತಜ್ಞ ರಿದ್ದಾರೆ. ಸಾಧಾರಣ ರಕ್ತ ಪರೀಕ್ಷೆಗಳು ನಡೆಯುತ್ತವೆ. ದಾನಿಯೊಬ್ಬರು ಇಸಿಜಿ ಮತ್ತು ನೆಬುಲೈಸೇಷನ್‌ ಯಂತ್ರವನ್ನು ಕೊಡುಗೆಯಾಗಿ ನೀಡಿದ್ದಾರೆ. ಪ್ರಸ್ತುತ 6 ಹಾಸಿಗೆ ಮಾತ್ರವಿದೆ. ಆರೋಗ್ಯ ಕೇಂದ್ರ ಮೂರೂವರೆ ಎಕರೆ ಜಾಗ ಹೊಂದಿದೆ. ಆದರೆ ಸಂಪೂರ್ಣ ಆವರಣ ಗೋಡೆ ಇಲ್ಲ. ಹಳೆಯ ಕಟ್ಟಡವಾದರೂ ಸುಣ್ಣ, ಬಣ್ಣ, ಟೈಲ್ಸ್‌ ಅಳವಡಿಸಲಾಗಿದೆ. ನೂತನ ಕಟ್ಟಡ ಸಹಿತ ನಿರ್ಮಾಣಗೊಳ್ಳಲಿರುವ ಹೈಟೆಕ್‌ ಆಸ್ಪತ್ರೆ ಸಮಗ್ರ ಚಿಕಿತ್ಸಾ ಕೇಂದ್ರ, ವೈದ್ಯರು, ದಾದಿಯರು, ಇತರ ಸಿಬಂದಿಗೆ ವಸತಿ ಸೌಲಭ್ಯ ಒಳಗೊಂಡಿರಲಿದೆ.

ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಬೇಕು. ಇಬ್ಬರು ಪೂರ್ಣ ಪ್ರಮಾಣದ ವೈದ್ಯಾಧಿಕಾರಿಗಳು ಹಾಗೂ ಸಿಬಂದಿಯನ್ನು ನೇಮಕಗೊಳಿಸಬೇಕೆಂದು ಜಿ.ಪಂ.ನಲ್ಲಿ ಐದು ಬಾರಿ ನಿರ್ಣಯ ಕೈಗೊಂಡು ಸರಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಪ್ರಸ್ತುತ ಬಂಟ್ವಾಳ ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿ ಅವರ ಮುತುವರ್ಜಿಯಿಂದ ಬಹುಕಾಲದ ಬೇಡಿಕೆ ಈಡೇರಿದೆ.  -ಎಂ.ತುಂಗಪ್ಪ ಬಂಗೇರ, ಜಿ.ಪಂ. ಸದಸ್ಯರು.

Advertisement

Udayavani is now on Telegram. Click here to join our channel and stay updated with the latest news.

Next