Advertisement

ಪುಂಜಾಲಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರ: ಮೇಲ್ದರ್ಜೆ ಬೇಡಿಕೆ 

11:15 AM Jun 21, 2018 | Team Udayavani |

ಪುಂಜಾಲಕಟ್ಟೆ: ಸಮುದಾಯಕ್ಕೆ ಸಮರ್ಪಕ ಆರೋಗ್ಯ ರಕ್ಷಣೆ ಕಲ್ಪಿಸುವ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ಒದಗಿಸುವುದಾಗಿ ಸರಕಾರ ಹೇಳಿಕೊಂಡರೂ ಗ್ರಾಮೀಣ ಮಟ್ಟದಲ್ಲಿ ಜನರ ಆರೋಗ್ಯ ರಕ್ಷಣ ವ್ಯವಸ್ಥೆ ಜನಸಾಮಾನ್ಯರಿಗೆ ತಲುಪದಂತಾಗಿದೆ. ಗ್ರಾಮೀಣ ಪ್ರದೇಶಗಳನ್ನೊಳಗೊಂಡ ಪುಂಜಾಲಕಟ್ಟೆಯ ಪ್ರಾಥಮಿಕ ಆರೋಗ್ಯ ಕೇಂದ್ರ ಹಲವಾರು ಕೊರತೆಗಳಿಂದ ಜನರಿಗೆ ಆರೋಗ್ಯ ವ್ಯವಸ್ಥೆ ನೀಡಲು ಸಮಸ್ಯೆ ಎದುರಿಸುತ್ತಿದೆ.

Advertisement

ಬಂಟ್ವಾಳ-ವಿಲ್ಲುಪುರಂ ರಾ.ಹೆ.ಯಲ್ಲಿ ಪುಂಜಾಲಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರವಿದೆ. ಇದು ಬಂಟ್ವಾಳ-ಬೆಳ್ತಂಗಡಿ ತಾಲೂಕುಗಳ ಗಡಿಭಾಗದಲ್ಲಿದೆ. ಬಂಟ್ವಾಳ ತಾಲೂಕಿನ 6 ಗ್ರಾ.ಪಂ.ಗಳ 8 ಗ್ರಾಮಗಳಾದ ಪಿಲಾತಬೆಟ್ಟು, ಇರ್ವತ್ತೂರು, ಮೂಡುಪಡುಕೋಡಿ, ಬಡಗಕಜೆಕಾರು, ತೆಂಕ ಕಜೆಕಾರು, ಕಾವಳಮೂಡೂರು, ಕಾವಳಪಡೂರು, ಕಾಡಬೆಟ್ಟು ಗ್ರಾಮಗಳನ್ನೊಳಗೊಂಡಿದೆ. ಜತೆಗೆ ನೆರೆಯ ಬೆಳ್ತಂಗಡಿ ತಾಲೂಕಿನ ಮಾಲಾಡಿ, ಕುಕ್ಕಳ ಗ್ರಾಮಗಳ ಗ್ರಾಮಸ್ಥರು ಅವಲಂಬಿಸಿದ ಆರೋಗ್ಯ ಕೇಂದ್ರ ಇದಾಗಿದೆ.

ಅದಕ್ಕೂ ಮಿಗಿಲಾಗಿ ಈ ಪರಿಸರದಲ್ಲಿ ಹೆದ್ದಾರಿಯಲ್ಲಿ ಅಪಘಾತವಾದಲ್ಲಿ ತತ್‌ ಕ್ಷಣದ ಚಿಕಿತ್ಸೆಗೆ ಇಲ್ಲಿಗೇ ಬರಬೇಕು. ದಿನವೊಂದಕ್ಕೆ ಸುಮಾರು 150ರಿಂದ 200 ರೋಗಿಗಳು ಚಿಕಿತ್ಸೆಗೆ ಬರುತ್ತಾರೆ. ರೋಗಿಗಳ ಸಂಖ್ಯೆ ಹೆಚ್ಚಾಗಿದ್ದು, ಖಾಯಂ ವೈದ್ಯರ ಹಾಗೂ ಸ್ಟಾಫ್‌ ನರ್ಸ್‌ ಕೊರತೆಯಿಂದಾಗಿ ಹೆಚ್ಚಿನ ಚಿಕಿತ್ಸೆ ನೀಡಲು ಸಮಸ್ಯೆಯಾಗಿದೆ. 

ಬೆಳ್ತಂಗಡಿ ಮತ್ತು ಬಂಟ್ವಾಳ ಹಾಗೂ ವಾಮದ ಪದವುನಲ್ಲಿ ಸಮುದಾಯ ಆಸ್ಪತ್ರೆ ಇದೆ. ಇವುಗಳ ನಡುವೆ ಬಹಳ ಅಂತರವಿದೆ. ಆದುದರಿಂದ ಪುಂಜಾಲಕಟ್ಟೆ ಪರಿಸರ ಮಾತ್ರವಲ್ಲ ಅಕ್ಕ ಪಕ್ಕದ ಊರುಗಳಿಂದಲೂ ಜನರು ಈ ಆಸ್ಪತ್ರೆಗೆ ಬರುತ್ತಾರೆ. ಗ್ರಾಮೀಣ ಪ್ರದೇಶದ ಬಡಜನತೆಯಂತೂ ಇದನ್ನೇ ಅವಲಂಬಿಸಿದ್ದಾರೆ. ಆದುದರಿಂದ ಜನಸಂಖ್ಯೆಯ ದೃಷ್ಟಿಯಲ್ಲೂ ಇದು ಮೇಲ್ದರ್ಜೆಗೇರಲು ಪರಿಗಣಿತವಾಗಿದೆ.

ವೈದ್ಯಾಧಿಕಾರಿ ಇಲ್ಲ
ಇಲ್ಲಿ ಈ ಹಿಂದೆ ಇಬ್ಬರು ಖಾಯಂ ವೈದ್ಯಾಧಿಕಾರಿಗಳ ಹುದ್ದೆ ಇತ್ತು. ಅನಂತರ ಅದು ಒಂದಕ್ಕಿಳಿಯಿತು. ಪ್ರಸ್ತುತ 5 ವರ್ಷಗಳಿಂದ ಒಂದು ವೈದ್ಯಾಧಿಕಾರಿ ಹುದ್ದೆ ಇದೆ. ಆದರೆ ಖಾಯಂ ವೈದ್ಯಾಧಿಕಾರಿ ಇಲ್ಲ. ಬಿ.ಸಿ. ರೋಡ್‌ ಗಿರಿಜನ ಸಂಚಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ| ಸತೀಶ್‌ ಎಂ.ಸಿ. ಅವರು ಇಲ್ಲಿ ಪ್ರಭಾರ ವೈದ್ಯಾಧಿಕಾರಿಯಾಗಿ ವಾರದಲ್ಲಿ ಮೂರು ದಿನ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮತ್ತೋರ್ವ ಆಯುಷ್‌ ವೈದ್ಯರು ಡಾ| ಸೋಹನ್‌ ಕುಮಾರ್‌ ಅವರು ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿಭಾಯಿಸುತ್ತಾರೆ. ಆದರೂ ತಮ್ಮ ಇತಿಮಿತಿಯೊಳಗೆ ವೈದ್ಯರು ರೋಗಿಗಳ ಬಗ್ಗೆ ವಹಿಸುವ ಕಾಳಜಿ ಮೆಚ್ಚುಗೆ ಗಳಿಸಿದೆ.

Advertisement

ಸ್ಟಾಫ್‌ ನರ್ಸ್‌ ಹುದ್ದೆಯೇ ಇಲ್ಲ!
ಹಿಂದೆ ಆರೋಗ್ಯ ಕೇಂದ್ರದಲ್ಲಿ ದಿನದ ಇಪ್ಪತ್ತನಾಲ್ಕು ಗಂಟೆಗಳಲ್ಲೂ ಸೇವೆಯ ವ್ಯವಸ್ಥೆ ಇತ್ತು. ಆಗ ಮೂರು ಮಂದಿ ಸ್ಟಾಫ್‌ ನರ್ಸ್‌ ಇದ್ದರು. ಹೆರಿಗೆಯ ಸಂಖ್ಯೆ ಕಡಿಮೆಯಾದ ನಿಟ್ಟಿನಲ್ಲಿ ಈ ವ್ಯವಸ್ಥೆ ರದ್ದುಗೊಂಡಿದೆ. ಜತೆಗೆ ಸ್ಟಾಫ್‌ ನರ್ಸ್‌ ಹುದ್ದೆಯೂ ರದ್ದುಗೊಂಡಿದೆ. ಪ್ರಸ್ತುತ ಓರ್ವ ಸ್ಟಾಫ್‌ ನರ್ಸ್‌ ಗುತ್ತಿಗೆ ಆಧಾರದಲ್ಲಿ ನೇಮಕಗೊಂಡು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹಿರಿಯ ಮಹಿಳಾ ಆರೋಗ್ಯ ಸಹಾಯಕಿ ಹುದ್ದೆ ಖಾಲಿ ಇದೆ. ಈ ಕಾರಣದಿಂದ ರಾತ್ರಿ ಹೊತ್ತು ಒಳರೋಗಿಗಳ ಚಿಕಿತ್ಸೆಗೆ ಅವಕಾಶವಿಲ್ಲ. ಡೇ ಕೇರ್‌ ಮಾತ್ರ ಲಭ್ಯವಿದೆ. ಸಂಜೆಯವರೆಗೆ ಚಿಕಿತ್ಸೆ ನೀಡಿ ಅಗತ್ಯವಾದಲ್ಲಿ ಬೆಳ್ತಂಗಡಿ ಅಥವಾ ಬಂಟ್ವಾಳ ತಾಲೂಕು ಆಸ್ಪತ್ರೆಗೆ ಕಳುಹಿಸಲಾಗುತ್ತಿದೆ. ಹಿಂದೆಲ್ಲ ಮರಣೋತ್ತರ ಪರೀಕ್ಷೆ ಇಲ್ಲಿ ನಡೆಯುತ್ತಿತ್ತು. ಈಗ ಗ್ರೂಪ್‌ ಡಿ ಸಿಬಂದಿ ಹುದ್ದೆ ಖಾಲಿಯಾದ ಕಾರಣ ಬೆಳ್ತಂಗಡಿ ಅಥವಾ ಬಂಟ್ವಾಳಕ್ಕೆ ಹೋಗಬೇಕಾಗುತ್ತದೆ.

ಇಲ್ಲಿ ಪ್ರಯೋಗ ಶಾಲಾ ತಜ್ಞರಿದ್ದಾರೆ. ಸಾಧಾರಣ ರಕ್ತ ಪರೀಕ್ಷೆಗಳು ನಡೆಯುತ್ತವೆ. ಇತ್ತೀಚೆಗೆ ದಾನಿಯೊಬ್ಬರು ಇಸಿಜಿ ಮತ್ತು ನೆಬುಲೈಸರ್‌ ಯಂತ್ರವನ್ನು ಕೊಡುಗೆಯಾಗಿ ನೀಡಿದ್ದಾರೆ. ಪ್ರಸ್ತುತ 6 ಹಾಸಿಗೆ ಮಾತ್ರವಿದ್ದು, ಮೇಲ್ದರ್ಜೆಗೇರಿ 20 ಹಾಸಿಗೆಯ ವ್ಯವಸ್ಥೆಯಾಗಬೇಕಾಗಿದೆ.

ಆರೋಗ್ಯ ಕೇಂದ್ರ ಮೂರೂವರೆ ಎಕ್ರೆ ಜಾಗ ಹೊಂದಿದೆ. ಆದರೆ ಆವರಣಗೋಡೆ ಇಲ್ಲ. ಹಳೆಯ ಕಟ್ಟಡವಾದರೂ ಸುಣ್ಣ, ಬಣ್ಣ, ಟೈಲ್ಸ್‌ ಹಾಕಿ ಸುಂದರಗೊಳಿಸಿದ್ದಾರೆ. ಹಾಗಾಗಿ ರೋಗಿಗಳಿಗೆ ಪರಿಸರ ಸ್ನೇಹಿಯಾಗಿದೆ. ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸುವುದು, ಪೂರ್ಣಾವಧಿ ವೈದ್ಯರ ನೇಮಕ ಮೊದಲಾದ ಬೇಡಿಕೆಗಳ ಬಗ್ಗೆ ಸಾರ್ವಜನಿಕರು, ಸಂಘಟನೆಗಳ ವತಿಯಿಂದ ಹಿಂದೆ ಪ್ರತಿಭಟನೆಗಳು ನಡೆದಿವೆ. ಆದರೂ ವ್ಯವಸ್ಥೆಯಾಗಿಲ್ಲ. ಸಮುದಾಯ ಆಸ್ಪತ್ರೆಯಾಗಿಸಲು 50 ಸಾವಿರ ಜನ ಸಂಖ್ಯೆಯ ಅಗತ್ಯವಿದೆ. ಆದರೆ ಈಗಾಲೇ ಇಲ್ಲಿನ ಜನಸಂಖ್ಯೆಯನ್ನು ಸೇರಿಸಿ ವಾಮದಪದವುನಲ್ಲಿ ಸಮುದಾಯ ಆಸ್ಪತ್ರೆ ಸ್ಥಾಪಿಸಲಾಗಿದೆ. ಜಟಿಲವಾದ ಕಾನೂನನ್ನು ಸರಳಗೊಳಿಸಿ ಜನತೆಗೆ ಆರೋಗ್ಯ ವ್ಯವಸ್ಥೆ ಕಲ್ಪಿಸಬೇಕೆಂದು ಜನರ ಬಹುಕಾಲದ ಬೇಡಿಕೆಯಾಗಿದೆ.

ಸಾಂಕ್ರಾಮಿಕ ರೋಗ ನಿಯಂತ್ರಣ ಜಾಗೃತಿ
ಸಾಂಕ್ರಾಮಿಕ ರೋಗ ತಡೆಗೆ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಸೂಕ್ತ ಕ್ರಮ ಕೈಗೊಂಡಿದ್ದಾರೆ. ಮಲೇರಿಯಾ ಮಾಸಾಚರಣೆ ನಡೆಸಿ ರೋಗ ನಿಯಂತ್ರಣ ಜಾಗೃತಿ ಮೂಡಿಸಲಾಗುತ್ತಿದೆ. ಆಶಾ ಕಾರ್ಯಕರ್ತೆಯರು, ಆರೋಗ್ಯ ಸಹಾಯಕಿಯರು ಮನೆ ಮನೆಗೆ ತೆರಳಿ ಮಾಹಿತಿ ನೀಡುತ್ತಿದ್ದಾರೆ. ಜಾಗೃತಿ ಕರಪತ್ರ ನೀಡಲಾಗುತ್ತಿದೆ. ಪರಿಸರದಲ್ಲಿ ನೀರು ನಿಂತು ಸೊಳ್ಳೆ ಉತ್ಪತಿಯಾಗದಂತೆ ಎಚ್ಚರಿಕೆ ವಹಿಸಲು ಸೂಚಿಸಲಾಗುತ್ತಿದೆ. ಫಾಗಿಂಗ್‌ ನಡೆಸಲಾಗುತ್ತಿದೆ. ಆರೊಗ್ಯ ನಿರೀಕ್ಷಕರು ಸ್ಥಳಕ್ಕೆ ತೆರಳಿ ಚಿಕಿತ್ಸೆ ಮಾಹಿತಿ ನೀಡುತ್ತಾರೆ. ಬಡಗಕಜೆಕಾರು ಉಪಕೇಂದ್ರದ ವ್ಯಾಪ್ತಿಯಲ್ಲಿ 2 ಡೆಂಗ್ಯೂ ಪ್ರಕರಣ ದೃಢಪಟ್ಟಿದ್ದು, ಚಿಕಿತ್ಸೆ ಬಳಿಕ ವಾಸಿಯಾಗಿದೆ.

ಪುಂಜಾಲಕಟ್ಟೆ ಪ್ರಾ.ಆ. ಕೇಂದ್ರ
ಉಪಕೇಂದ್ರಗಳು-6, ದಾದಿಯರ ವಸತಿಗೃಹಗಳು (ಉಪಕೇಂದ್ರ)-3., ಗ್ರಾ.ಪಂ.-5, ಗ್ರಾಮಗಳು-8, ಒಟ್ಟು
ಜನಸಂಖ್ಯೆ-26,322, ಒಟ್ಟು ಮನೆಗಳು-3,650, ಒಟ್ಟು ಅಂಗನವಾಡಿಗಳು-38, ಒಟ್ಟು ಶಾಲೆಗಳು-24, ವಸತಿ ಶಾಲೆ-1

 5 ಬಾರಿ ನಿರ್ಣಯ
ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಬೇಕು. ಇಬ್ಬರು ಪೂರ್ಣ ಪ್ರಮಾಣದ ವೈದ್ಯಾಧಿಕಾರಿಗಳು ಹಾಗೂ ಸಿಬಂದಿಯನ್ನು ನೇಮಕಗೊಳಿಸಬೇಕೆಂದು ಜಿ.ಪಂ.ನಲ್ಲಿ ಐದು ಬಾರಿ ನಿರ್ಣಯ ಕೈಗೊಂಡು ಸರಕಾರಕ್ಕೆ ಮನವಿ ಸಲ್ಲಿಸಿತ್ತು. ಪ್ರತಿಭಟನೆ, ಹೋಮ ನಡೆಸಿದರೂ ಪ್ರಯೋಜನವಾಗಿಲ್ಲ. ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು.
-ಎಂ. ತುಂಗಪ್ಪ ಬಂಗೇರ,
ಜಿ.ಪಂ. ಸದಸ್ಯರು

 ಮನವಿ ಸಲ್ಲಿಸಲಾಗಿದೆ
ಪುಂಜಾಲಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರದ 8 ಕಿ.ಮೀ. ವ್ಯಾಪ್ತಿಯಲ್ಲಿ ವಾಮದಪದವಿನಲ್ಲಿ ಸಮುದಾಯ ಆಸ್ಪತ್ರೆ ಇರುವುದು ಮತ್ತು ಜನಸಂಖ್ಯೆಯ ಕೊರತೆ ಕಾರಣಗಳಿಂದ ಇದು ಮೇಲ್ದರ್ಜೆಗೇರಿಲ್ಲ.ಆದರೆ ಇಲ್ಲಿ ಸಮುದಾಯ ಆಸ್ಪತ್ರೆಯ ಬೇಡಿಕೆ ಇರುವುದರಿಂದ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ. ನೂತನ ಕಟ್ಟಡಕ್ಕೂ ಮನವಿ ಸಲ್ಲಿಸಲಾಗಿದೆ. 
– ಡಾ| ದೀಪಾ ಪ್ರಭು
ತಾ| ಆರೋಗ್ಯ ಅಧಿಕಾರಿ

 ರತ್ನದೇವ್‌ ಪುಂಜಾಲಕಟ್ಟೆ 

Advertisement

Udayavani is now on Telegram. Click here to join our channel and stay updated with the latest news.

Next