ಚಂಡೀಗಢ : ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆ 5,8 ಹಾಗೂ 10 ನೇ ತರಗತಿಯ ಪರೀಕ್ಷೆಗಳನ್ನು ರದ್ದು ಪಡಿಸಿ ಪಂಜಾಬ್ ಸರ್ಕಾರ ಆದೇಶ ಹೊರಡಿಸಿದೆ.
ಕೈಮೀರಿ ಹಬ್ಬುತ್ತಿರುವ ಮಹಾಮಾರಿ ಕೋವಿಡ್ ಪಿಡುಗಿನ ಸಂದರ್ಭದಲ್ಲಿ ಪರೀಕ್ಷೆ ನಡೆಸುವುದುರು ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ಸರಿಯಲ್ಲ. ಪರೀಕ್ಷೆಗಳನ್ನು ರದ್ದು ಮಾಡಬೇಕೆನ್ನುವ ಕೂಗು ವಿದ್ಯಾರ್ಥಿಗಳ ಪೋಷಕರಿಂದ ಕೇಳಿ ಬಂದಿತ್ತು. ಈ ಹಿನ್ನೆಲೆ ಇಂದು ( ಏಪ್ರಿಲ್ 15) ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ನೇತೃತ್ವದಲ್ಲಿ ಶಿಕ್ಷಣ ತಜ್ಞರ ಸಭೆ ಕರೆಯಲಾಗಿತ್ತು.
ಸಭೆಯ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಮುಖ್ಯಮಂತ್ರಿಗಳು, ಕೋವಿಡ್ ಹಿನ್ನೆಲೆ ರಾಜ್ಯದ 5, 8 ಹಾಗೂ 10ನೇ ತರಗತಿಯ ಪರೀಕ್ಷೆಗಳನ್ನು ರದ್ದು ಮಾಡಲಾಗಿದ್ದು, ವಿದ್ಯಾರ್ಥಿಗಳನ್ನು ಮುಂದಿನ ತರಗತಿಗಳಿಗೆ ಬಡ್ತಿ ನೀಡಲು ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಇನ್ನು ಈಗಾಗಲೇ ರಾಜ್ಯದಲ್ಲಿ 12 ನೇ ತರಗತಿಯ ಪರೀಕ್ಷೆಗಳ ದಿನಾಂಕವನ್ನು ಮುಂದೂಡಲಾಗಿದೆ. ಮುಂದಿನ ಸ್ಥಿತಿಗತಿಗೆ ಅನುಗುಣವಾಗಿ ನಿರ್ಣಯ ಕೈಗೊಳ್ಳಲಾಗುವುದು. 11 ರಿಂದ 20 ವಯಸ್ಸಿನವರಲ್ಲಿ ಕೋವಿಡ್ ಪ್ರಮಾಣ ಕಡಿಮೆ ಮಾಡುವ ಉದ್ದೇಶದಲ್ಲಿ ಈಗಾಗಲೇ ರಾಜ್ಯದಲ್ಲಿ ಏಪ್ರಿಲ್ 30ರ ವರೆಗೆ ಎಲ್ಲ ಶಾಲಾ-ಕಾಲೇಜುಗಳನ್ನು ಮುಚ್ಚಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.
ಇನ್ನು ಕೆಲ ದಿನಗಳ ಹಿಂದೆಯಷ್ಟೆ ವಿದ್ಯಾರ್ಥಿಗಳ ಪರೀಕ್ಷೆ ವಿಚಾರದ ಕುರಿತು ಕೇಂದ್ರ ಶಿಕ್ಷಣ ಸಚಿವರಿಗೆ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಪತ್ರ ಬರೆದಿದ್ದರು. ಬುಧವಾರಷ್ಟೆ ಸಿಬಿಎಸ್‍ಇಯ ಹತ್ತನೇ ತರಗತಿಯ ಪರೀಕ್ಷೆಗಳನ್ನು ರದ್ದು ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದ ಬೆನ್ನಲ್ಲೆ ಇದೀಗ ಪಂಜಾಬ್ ಕೂಡ ಪರೀಕ್ಷೆಗಳನ್ನು ಕ್ಯಾನ್ಸಲ್ ಮಾಡಿದೆ.