ಹೊಸದಿಲ್ಲಿ : ಕನಿಷ್ಠ ಆರು ಮಂದಿ ಜೈಶ್ ಎ ಮೊಹಮ್ಮದ್ ಉಗ್ರರು ಮತ್ತು ಅಲ್ ಕಾಯಿದಾ ಕಮಾಂಡರ್ ಝಕೀರ್ ಮೂಸಾ ಪಂಜಾಬ್ ಗೆ ನುಸುಳಿ ಬಂದು ಅಡಗಿಕೊಂಡಿದ್ದಾನೆ ಎಂಬ ಗುಪ್ತಚರ ಮಾಹಿತಿಯನ್ನು ಅನುಸರಿಸಿ ಪಂಜಾಬ್ ಪೊಲೀಸರು ಹೈ ಅಲರ್ಟ್ ನಲ್ಲಿರುವುದಾಗಿ ವರದಿಗಳು ತಿಳಿಸಿವೆ.
ಅಲ್ ಕಾಯಿದಾ ಕಾಶ್ಮೀರ ಘಟಕದ ಮುಖ್ಯಸ್ಥನಾಗಿರುವ ಮೂಸಾ ನ wanted ಪೋಸ್ಟರ್ ಗಳು ಹಲವೆಡೆಗಳಲ್ಲಿ ಹಾಕಲ್ಪಟ್ಟಿವೆ. ಈತನ ಜತೆಗೆ ಇನ್ನೂ ಹಲವು ಜೆಇಎಂ ಉಗ್ರರು ಪಂಜಾಬಿನ ಫಿರೋಜ್‌ಪುರ ದಲ್ಲಿನ ಅಂತಾರಾಷ್ಟ್ರೀಯ ಗಡಿಯ ಮೂಲಕ ಒಳ ನುಸುಳಿ ಬಂದಿರುವುದಾಗಿ ಗುಪ್ತಚರ ಮಾಹಿತಿಗಳು ಎಚ್ಚರಿಸಿವೆ.
ಅಂತೆಯೇ ಜೆಇಎಂ ಉಗ್ರರ ಸಹಿತ ಮೂಸಾ ನ ವ್ಯಾಪಕ ಶೋಧ ಕಾರ್ಯಾಚರಣೆ ಜಾರಿಯಲ್ಲಿದೆ ಎಂದು ಗುರುದಾಸ್‌ಪುರ ಎಸ್‌ಎಸ್‌ಪಿ ಸ್ವರಣ್‌ದೀಪ್ ಸಿಂಗ್ ಹೇಳಿದ್ದಾರೆ.
ಅಮೃತಸರದ ಆಸುಪಾಸಿನಲ್ಲೇ ಮೂಸಾನ ಚಲನ ವಲನ ಇರುವುದನ್ನು ಬಲವಾಗಿ ಶಂಕಿಸಲಾಗಿದೆ. ಆ ಪ್ರಕಾರ ನಾವು ಆತನ ಫೋಟೋ ಇರುವ ವಾಂಟೆಡ್ ಪೋಸ್ಟರ್‌ಗಳನ್ನು ವಿವಿಧಡೆಗಳಲ್ಲಿ ಹಾಕಿಸಿ ಜನರಲ್ಲಿ ಎಚ್ಚರಿಕೆ ಮೂಡಿಸುವ ಯತ್ನ ಮಾಡಿದ್ದೇವೆ. ಮೂಸಾ ಬಗ್ಗೆ ಯಾವುದೇ ಮಾಹಿತಿ ಇದ್ದರೂ ನಮಗೆ ತಿಳಿಸಿರೆಂದು ನಾವು ಜನರಲ್ಲಿ ಕೋರಿದ್ದೇವೆ’ ಎಂದು ಸ್ವರಣ್‌ದೀಪ್ ಸಿಂಗ್ ಹೇಳಿದರು.
ಅನ್ಸಾರ್ ಗಜವಾತ್ ಉಲ್ ಹಿಂದ ಉಗ್ರ ಸಂಘಟನೆಯ ಮುಖ್ಯಸ್ಥನಾಗಿರುವ ಮೂಸಾ, ಜಮ್ಮು ಕಾಶ್ಮೀರಕ್ಕೆ ಉಗ್ರರನ್ನು ಕಳಿಸುವ ಜವಾಬ್ದಾರಿ ಹೊಂದಿರುತ್ತಾನೆ ಮತ್ತು ಅನೇಕ ಫಿದಾಯೀಂ ದಾಳಿಗಳಿಗೆ ಕುಖ್ಯಾತನಾಗಿದ್ದಾನೆ.