ನವದೆಹಲಿ: ಗುಪ್ತಚರ ಇಲಾಖೆ ಮಾಹಿತಿಯನ್ನಾಧರಿಸಿ ಪಂಜಾಬ್ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಬಬ್ಬರ್ ಖಾಲ್ಸಾ ಅಂತಾರಾಷ್ಟ್ರೀಯ ಭಯೋತ್ಪಾದಕ ಘಟಕದ ಇಬ್ಬರು ಉಗ್ರರನ್ನು ಬಂಧಿಸುವ ಮೂಲಕ ಸಂಭಾವ್ಯ ದಾಳಿಯನ್ನು ವಿಫಲಗೊಳಿಸಲಾಗಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:RCB; ಐಪಿಎಲ್ ಗೆ ವಿದಾಯ ಹೇಳಲು ನಿರ್ಧರಿಸಿದ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್
ಈ ಭಯೋತ್ಪಾದಕ ಘಟಕದಲ್ಲಿ ಯುಎಸ್ ಎ ಮತ್ತು ಪಾಕಿಸ್ತಾನ ಮೂಲದ ಉಗ್ರರು ಕಾರ್ಯಾಚರಿಸುತ್ತಿದ್ದು, ಯುವಕರನ್ನು ಗುರಿಯಾಗಿರಿಸಿಕೊಂಡು ಕಾರ್ಯಾಚರಿಸುತ್ತಿರುವುದಾಗಿ ವರದಿ ವಿವರಿಸಿದೆ.
ಪಾಕಿಸ್ತಾನ ಮೂಲದ ಭಯೋತ್ಪಾದಕ ಹರ್ವಿಂದರ್ ಸಿಂಗ್ ನಿಕಟವರ್ತಿ ಯುಎಸ್ ಎ ಮೂಲದ ಹರ್ಪೀತ್ ಸಿಂಗ್ ಘಟಕದ ನೇತೃತ್ವ ವಹಿಸಿದ್ದು, ಅಮೆರಿಕ ಮೂಲದ ಶಂಶೇರ್ ಸಿಂಗ್ ಕೂಡಾ ಸಾಥ್ ನೀಡಿರುವುದಾಗಿ ಪಂಜಾಬ್ ಡಿಜಿಪಿ ಗೌರವ್ ಯಾದವ್ ಎಕ್ಸ್ ನಲ್ಲಿ ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ, ರಾಜ್ಯದಲ್ಲಿ ದೇಶ ವಿರೋಧಿ ಚಟುವಟಿಕೆ ನಡೆಸಲು ಯುವಕರನ್ನು ಪ್ರಚೋದಿಸುವ ಮೂಲಕ ಹ್ಯಾಪಿ ಪ್ಯಾಸಿಯನ್ ರಿಂಡಾ ಮತ್ತು ಶಂಶೇರ್ ಸಹಭಾಗಿತ್ವದಲ್ಲಿ ಕಾರ್ಯನಿರ್ವಹಿಸುತ್ತಿರುವುದಾಗಿ ತಿಳಿದುಬಂದಿದೆ.
ಬಂಧಿತರಿಂದ ಎರಡು ಪಿಸ್ತೂಲ್, 4 ಮ್ಯಾಗಜಿನ್ಸ್, 30 ಜೀವಂತ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ವಿರುದ್ಧ ಯುಎಪಿಎ ಮತ್ತು ಶಸ್ತ್ರಾಸ್ತ್ರ ಕಾಯ್ದೆಯಡಿ ಎಫ್ ಐಆರ್ ದಾಖಲಿಸಲಾಗಿದೆ.