ನವದೆಹಲಿ: ಭ್ರಷ್ಟಾಚಾರದ ಆರೋಪದ ಹಿನ್ನೆಲೆಯಲ್ಲಿ ಪಂಜಾಬ್ ತೋಟಗಾರಿಕಾ ಸಚಿವ ಫೌಜಾ ಸಿಂಗ್ ಸರಾರೈ ಶನಿವಾರ (ಜನವರಿ 07) ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಸಂಪುಟಕ್ಕೆ ರಾಜೀನಾಮೆ ನೀಡಿದ್ದಾರೆ.
ಇದನ್ನೂ ಓದಿ;ಕಾಂಗ್ರೆಸ್ ನಾಯಕರು ಬಿಜೆಪಿ ದಲಿತ ವಿರೋಧಿ ಎಂದು ಬಿಂಬಿಸುತ್ತಿದ್ದಾರೆ : ಸಿ.ಟಿ.ರವಿ ಕಿಡಿ
ಮೂಲಗಳ ಪ್ರಕಾರ, ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿರುವುದನ್ನು ಮುಖ್ಯಮಂತ್ರಿ ಭಗವಂತ್ ಮಾನ್ ಸ್ವೀಕರಿಸಿರುವುದಾಗಿ ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ. ಖಾಸಗಿ ಕಾರಣ ನೀಡಿ ರಾಜೀನಾಮೆ ನೀಡಿರುವ ಫೌಜಾ ಸಿಂಗ್, ತಾನು ಪಕ್ಷದ ನಿಷ್ಠಾವಂತ ಸೇವಕನಾಗಿರುವುದಾಗಿ ತಿಳಿಸಿದ್ದಾರೆ.
ಇಂದು ಸಂಜೆ ರಾಜಭವನದಲ್ಲಿ ನಡೆಯಲಿರುವ ಸರಳ ಸಭೆಯಲ್ಲಿ ನೂತನ ಸಚಿವ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ವರದಿ ಹೇಳಿದೆ. ಸರ್ಕಾರಿ ಅಧಿಕಾರಿಗಳ ನೆರವಿನೊಂದಿಗೆ ಕೆಲವು ಗುತ್ತಿಗೆದಾರರನ್ನು ಟ್ರ್ಯಾಪ್ ಮಾಡಿ ಹಣ ಸುಲಿಯುವ ಸಂಚಿನ ಬಗ್ಗೆ ತಮ್ಮ ಆಪ್ತ ಸಹಾಯಕನ ಜೊತೆ ಫೌಜಾ ಸಿಂಗ್ ಮಾತನಾಡಿರುವ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಈ ಆಡಿಯೋ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು. ಆದರೆ ತನ್ನನ್ನು ದುರುದ್ದೇಶದಿಂದ ಸಿಲುಕಿಸುವ ನಿಟ್ಟಿನಲ್ಲಿ ಆಡಿಯೋ ಕ್ಲಿಪ್ ಅನ್ನು ಸೃಷ್ಟಿಸಲಾಗಿದೆ ಎಂದು ಸಚಿವ ಸಿಂಗ್ ಸಮಜಾಯಿಷಿ ನೀಡಿದ್ದರು.
ನಿವೃತ್ತ ಪೊಲೀಸ್ ಕಾನ್ಸ್ ಟೇಬಲ್ ಫೌಜಾ ಸಿಂಗ್ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಫಿರೋಜ್ ಪುರ್ ನ ಗುರು ಹರ್ ಸಹಾಯ್ ಕ್ಷೇತ್ರದಿಂದ ಸ್ಪರ್ಧಿಸಿ ಎಸ್ ಎ ಡಿ ಅಭ್ಯರ್ಥಿ ವಾರ್ದೇವ್ ಸಿಂಗ್ ವಿರುದ್ಧ 10,547 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.