Advertisement

ಮಾಲ್ವಾದಲ್ಲಿ ಬೀಸುತ್ತಿದೆ ಬದಲಾವಣೆಯ ಗಾಳಿ

12:13 AM Feb 20, 2022 | Team Udayavani |

“ಇಸ್‌ ವಾರ್‌ ಜೋ ವೀ ಹೋ ಜಾವೆ, ಅಸ್ಸೀ ಬದಲಾವ್‌ ಲಾಯಿ ವೋಟ್‌ ಕರ್ನಾ’ (ಈ ಬಾರಿ ಏನೇ ಆಗಲಿ, ನಾವು ಬದಲಾವಣೆಗಾಗಿ ಮತ ಹಾಕುತ್ತೇವೆ).

Advertisement

ಪಂಜಾಬ್‌ನಲ್ಲಿ ಯಾವತ್ತೂ ಸರಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ಮಾಲ್ವಾ ವಲಯದಲ್ಲಿ ಈ ಬಾರಿ “ಬದಲಾವಣೆಯ ಗಾಳಿ’ ಬೀಸಿರುವುದು ಸ್ಪಷ್ಟವಾಗಿ ಗೋಚರಿಸತೊಡಗಿದೆ. ಸಾಂಪ್ರದಾಯಿಕ ಪಕ್ಷಗಳ ಆಡಳಿತ ನೋಡಿ ನೋಡಿ ಜನರು ರೋಸಿ ಹೋಗಿದ್ದಾರೆ. ಹೀಗಾಗಿಯೇ ಮೂರನೇ ಪರ್ಯಾಯದತ್ತ ಬಹುತೇಕ ಮಂದಿ ಮುಖ ಮಾಡಿರುವುದು ಅಲ್ಲಿನ ಜನರ ಮಾತುಗಳಿಂದಲೇ ತಿಳಿದುಬರುತ್ತದೆ.

ಪಂಜಾಬ್‌ನ ಒಟ್ಟು 117 ವಿಧಾನಸಭಾ ಕ್ಷೇತ್ರಗಳ ಪೈಕಿ ಬಹುತೇಕ ಅಂದರೆ 69 ಕ್ಷೇತ್ರಗಳು ಮಾಲ್ವಾ ವ್ಯಾಪ್ತಿಗೆ ಬರುತ್ತದೆ. ಹೀಗಾಗಿ ಈ ಪ್ರದೇಶದಲ್ಲಿ ಯಾವ ಪಕ್ಷ ಬಹುಮತ ಗಳಿಸುತ್ತದೋ ಆ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯುವುದು ಖಚಿತ. 1966ರಿಂದ ಈವರೆಗೆ ಪಂಜಾಬ್‌ ಕಂಡಿರುವ 17 ಮುಖ್ಯಮಂತ್ರಿಗಳ ಪೈಕಿ 15 ಸಿಎಂಗಳು ಇದೇ ಪ್ರದೇಶದವರು. ಮಾಲ್ವಾದವರಲ್ಲದ ಸಿಎಂಗಳೆಂದರೆ ಗಿಯಾನಿ ಗುರುಮುಖ್‌ ಸಿಂಗ್‌ ಮತ್ತು ದರ್ಬಾರಾ ಸಿಂಗ್‌ ಮಾತ್ರ. ಹಾಲಿ ಸಿಎಂ ಚರಣ್‌ಜಿತ್‌ ಸಿಂಗ್‌ ಚನ್ನಿ, ಮಾಜಿ ಮುಖ್ಯಮಂತ್ರಿಗಳಾದ ಕ್ಯಾ| ಅಮರೀಂದರ್‌ ಸಿಂಗ್‌, ಪ್ರಕಾಶ್‌ ಸಿಂಗ್‌ ಬಾದಲ್‌ ಕೂಡ ಮಾಲ್ವಾದವರೇ ಆಗಿದ್ದಾರೆ.

ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಅಕಾಲಿದಳ-ಬಿಜೆಪಿ ಸರಕಾರ­ವಾಗಲೀ, ಕಾಂಗ್ರೆಸ್‌ ಸರಕಾರ ವಾಗಲೀ ಹೇಳಿಕೊಳ್ಳುವಂತ ಸಾಧನೆಯನ್ನು ಮಾಡಿಲ್ಲ. ಡ್ರಗ್‌ ಸೇವನೆ, ನಿರುದ್ಯೋಗ, ಆರ್ಥಿಕ ದುಃಸ್ಥಿತಿ, ರೈತರ ಆತ್ಮಹತ್ಯೆಯಂಥ ಸಮಸ್ಯೆಗಳಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ ಎನ್ನುವುದು ಇಲ್ಲಿನ ಮತದಾರರ ಆರೋಪ. ಹೀಗಿರುವಾಗ “ಪರ್ಯಾಯ’ ಪಕ್ಷವನ್ನು ಏಕೆ ಆಯ್ಕೆ ಮಾಡಬಾರದು ಎಂಬುದು ಅವರ ಪ್ರಶ್ನೆ. ಜನರ ಇಂಥ ನಿರ್ಧಾರವು ಈ ಬಾರಿ ಆಮ್‌ ಆದ್ಮಿ ಪಕ್ಷಕ್ಕೆ ಲಾಭ ತಂದುಕೊಡುವ ಸಾಧ್ಯತೆಯೇ ಹೆಚ್ಚಿದೆ. ದಿಲ್ಲಿಯಲ್ಲಿ ಆಪ್‌ ಮಾಡಿರುವ ಅಭಿವೃದ್ಧಿ ಕಾರ್ಯಗಳು ಪಂಜಾಬ್‌ ಜನರನ್ನು ಆಕರ್ಷಿಸಿದ್ದು, ಈ ಸಲ ಆಮ್‌ ಆದ್ಮಿಗೊಂದು ಅವಕಾಶ ನೀಡೋಣ ಎಂಬ ನಿರ್ಧಾರಕ್ಕೆ ಬಂದಂತಿದೆ.

2017ರ ಚುನಾವಣೆಯಲ್ಲಿ ಮಾಲ್ವಾದಲ್ಲಿ ಕಾಂಗ್ರೆಸ್‌ ಮತ್ತು ಅಕಾಲಿ-ಬಿಜೆಪಿಯ ವೋಟರ್‌ ಬೇಸ್‌ ಅನ್ನು ಅಲುಗಾಡಿಸುವಲ್ಲಿ ಆಪ್‌ ಯಶಸ್ವಿಯಾಗಿತ್ತು. ಅಕಾಲಿದಳವು ತನ್ನ ತೆಕ್ಕೆಯಲ್ಲಿದ್ದ ಜಾಟ್‌ ಸಿಕ್ಖ್ ಮತದಾರರನ್ನು ಕಳೆದುಕೊಂಡಿತ್ತು. ಆ ಚುನಾವಣೆಯಲ್ಲಿ ಮಾಲ್ವಾ­ವೊಂದರಲ್ಲೇ ಶೇ.30ರಷ್ಟು ಜಾಟ್‌ ಸಿಕ್ಖ್ ಮತಗಳು ಆಪ್‌ಗೆ ಬಿದ್ದಿದ್ದವು. ಆಮ್‌ ಆದ್ಮಿ ಪಕ್ಷ ಗೆದ್ದಿದ್ದ 20 ಸೀಟುಗಳ ಪೈಕಿ 18 ಮಾಲ್ವಾ ಪ್ರದೇಶದ್ದೇ ಆಗಿವೆ. ಈ ಬಾರಿ ಮುಖ್ಯ ಮಂತ್ರಿ ಅಭ್ಯರ್ಥಿ ಭಗವಂತ್‌ ಸಿಂಗ್‌ ಮನ್‌ರನ್ನು ಇದೇ ಪ್ರದೇಶದ ಧುರಿ ಕ್ಷೇತ್ರದಿಂದ ಕಣಕ್ಕಿಳಿಸುವ ಮೂಲಕ, ತನ್ನ ಬೇರನ್ನು ಗಟ್ಟಿಗೊಳಿಸಲು ಆಪ್‌ ಚಾಣಾಕ್ಷ ತಂತ್ರ ಹೂಡಿದೆ.

Advertisement

ಇನ್ನು, ಮಾಲ್ವಾದಲ್ಲಿ ಕಾಂಗ್ರೆಸ್‌ ಕೂಡ ಭದ್ರವಾದ ಸಾಂಪ್ರದಾಯಿಕ ಮತದಾರರನ್ನು ಹೊಂದಿದೆ. ಕಳೆದ ಚುನಾವಣೆಯಲ್ಲಿ ಈ ಪ್ರದೇಶದಲ್ಲಿ 40 ಸೀಟುಗಳು ಕಾಂಗ್ರೆಸ್‌ ಪಾಲಾಗಿದ್ದವು. ಈ ಬಾರಿಯೂ ಮತದಾರರನ್ನು ಹಿಡಿದಿಟ್ಟುಕೊಳ್ಳಲು ಪಕ್ಷ ಯತ್ನಿಸಿದೆ. ಹಾಲಿ ಸಿಎಂ ಚನ್ನಿ ಅವರನ್ನು ಮಾಲ್ವಾದ ವ್ಯಾಪ್ತಿಯಲ್ಲೇ ಬರುವ ಭದೌರ್‌ ಕ್ಷೇತ್ರದಿಂದ ಕಣಕ್ಕಿಳಿಸಿದೆ. “ನಾನು ಇಲ್ಲಿಗೆ ಸುದಾಮನಾಗಿ ಬಂದಿದ್ದೇನೆ. ಮಾಲ್ವಾದ ಜನತೆ ಶ್ರೀಕೃಷ್ಣನಂತೆ ನನ್ನನ್ನು ಬೆಂಬಲಿಸಲಿದ್ದಾರೆ ಎಂಬ ನಂಬಿಕೆಯಿದೆ’ ಎಂದು ಇತ್ತೀಚೆಗೆ ಹಾಲಿ ಸಿಎಂ ಚನ್ನಿ ಹೇಳಿದ್ದನ್ನು ಸ್ಮರಿಸಬಹುದು.

ಕೇಂದ್ರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ದಿಲ್ಲಿ ಗಡಿಯಲ್ಲಿ ಪ್ರತಿಭಟಿಸುತ್ತಿದ್ದ ವೇಳೆ ಸಾವನ್ನಪ್ಪಿದ ರೈತರ ಪೈಕಿ ಶೇ.80ರಷ್ಟು ಮಂದಿ ಮಾಲ್ವಾ ಪ್ರದೇಶಕ್ಕೆ ಸೇರಿದವರು. ಅನ್ನದಾತರ ಪ್ರತಿಭಟನೆಯಲ್ಲಿ ಸುಮಾರು 700 ಮಂದಿ ಅಸುನೀಗಿದ್ದಾರೆ. ಈ ಆಕ್ರೋಶವು ಮಾಲ್ವಾ ರೈತ ಸಮುದಾಯದಲ್ಲಿ ಇನ್ನೂ ಹಸುರಾಗಿರುವ ಕಾರಣ ಬಿಜೆಪಿಗೆ ಈ ಬಾರಿ ಅನುಕೂಲಕ್ಕಿಂತ ಅನನುಕೂಲವೇ ಜಾಸ್ತಿ ಎಂದು ವಿಶ್ಲೇಷಿಸಲಾಗುತ್ತಿದೆ. ಆದರೂ, ಕರ್ತಾರ್ಪುರ ಕಾರಿಡಾರ್‌ ಸೇರಿದಂತೆ ಸಿಕ್ಖ್ ಸಮುದಾ ಯಕ್ಕಾಗಿ ಕೇಂದ್ರ ಸರಕಾರ ಕೈಗೊಂಡ ಯೋಜನೆಗಳು, ಸಿಕ್ಖ್ ಮುಖಂಡರೊಂದಿಗೆ ಪ್ರಧಾನಿ ಮೋದಿ ಶುಕ್ರವಾರವಷ್ಟೇ ನಡೆಸಿದ ಮಹತ್ವದ ಮಾತುಕತೆ ಮತದಾರರ ಮೇಲೆ ಪರಿಣಾಮ ಬೀರುವ ಸಾಧ್ಯತೆಯೂ ಇಲ್ಲದಿಲ್ಲ.

ಒಟ್ಟಿನಲ್ಲಿ ಹಿಂದಿನ ಕಾಂಗ್ರೆಸ್‌, ಅಕಾಲಿದಳದ ಸರಕಾರಗಳ ಬಗ್ಗೆ ಅಸಮಾಧಾನ ಹೊಂದಿರುವವರು ಈ ಚುನಾವಣೆಯಲ್ಲಿ “ಕಸಬರಿಕೆ'(ಆಪ್‌ ಚಿಹ್ನೆ) ಹಿಡಿಯಲು ಮುಂದಾಗಿದ್ದಾರೆ. ಆದರೆ ಯಾವುದರ ಬಗ್ಗೆಯೂ ಬಾಯಿ ಬಿಡದ “ಮೌನ ಮತದಾರರ’ ವರ್ಗವು ರವಿವಾರದ ಮತದಾನದ ವೇಳೆ ಯಾರ ಕೈ ಹಿಡಿಯಲಿದೆ ಎನ್ನುವುದರ ಮೇಲೆ ರಾಜಕೀಯ ಪಕ್ಷಗಳ ಭವಿಷ್ಯ ನಿಂತಿದೆ.

Advertisement

Udayavani is now on Telegram. Click here to join our channel and stay updated with the latest news.

Next