Advertisement

ಪಂಜಾಬ್‌ಗೂ ಪಂಚ್‌ ಕೊಟ್ಟೀತೇ ಸನ್‌ರೈಸರ್ ಹೈದರಾಬಾದ್‌?

01:10 AM Apr 17, 2022 | Team Udayavani |

ನವೀ ಮುಂಬಯಿ: ಮೊದಲೆರಡು ಪಂದ್ಯಗಳಲ್ಲಿ ಸೋತು ಕಳೆದ ವರ್ಷದ ಕಳಪೆ ಪ್ರದರ್ಶನದ ಪುನರಾವರ್ತನೆಯ ಹಾದಿಯಲ್ಲಿದ್ದ ಸನ್‌ರೈಸರ್ ಹೈದರಾಬಾದ್‌ ದಿಢೀರ್‌ ಚೇತರಿಕೆ ಕಂಡಿದೆ. ಹ್ಯಾಟ್ರಿಕ್‌ ಗೆಲುವಿನೊಂದಿಗೆ ಮುಂದಡಿ ಇರಿಸಿದೆ.

Advertisement

ಶುಕ್ರವಾರವಷ್ಟೇ ಕೆಕೆಆರ್‌ಗೆ ಸೋಲುಣಿಸಿದ ಹುಮ್ಮಸ್ಸಿನಲ್ಲಿರುವ ಕೇನ್‌ ವಿಲಿಯಮ್ಸನ್‌ ಪಡೆ ಒಂದೇ ದಿನದ ವಿರಾಮದ ಬಳಿಕ ಪಂಜಾಬ್‌ ಕಿಂಗ್ಸ್‌ ವಿರುದ್ಧ ಅಂಗಳಕ್ಕಿಳಿಯಲಿದೆ. ಪಂಜಾಬ್‌ಗೂ ಅದು ಪಂಚ್‌ ಕೊಟ್ಟೀತೇ ಎಂಬ ನಿರೀಕ್ಷೆಯಲ್ಲಿದ್ದಾರೆ ಕ್ರಿಕೆಟ್‌ ಅಭಿಮಾನಿಗಳು.

ಪಂಜಾಬ್‌ ಮತ್ತು ಹೈದರಾಬಾದ್‌ ತಂಡಗಳದ್ದು ಸಮಬಲದ ಸಾಧನೆ. ಎರಡೂ ತಂಡಗಳು 5 ಪಂದ್ಯಗಳನ್ನಾಡಿ ಮೂರರಲ್ಲಿ ಗೆದ್ದಿವೆ. ಆದರೆ ರನ್‌ರೇಟ್‌ನಲ್ಲಿ ಪಂಜಾಬ್‌ ಮುಂದಿದೆ. ಹೈದರಾಬಾದ್‌ ಮೈನಸ್‌ನಲ್ಲಿದೆ.

ಮೂರೂ ಚೇಸಿಂಗ್‌ ಗೆಲುವು
ಸನ್‌ರೈಸರ್ ಹೈದರಾಬಾದ್‌ ಪಂದ್ಯದಿಂದ ಪಂದ್ಯಕ್ಕೆ ಸುಧಾರಿತ ಪ್ರದರ್ಶನ ನೀಡುತ್ತ ಬರುತ್ತಿದ್ದು, ಕಳೆದ 3 ಪಂದ್ಯಗಳಲ್ಲಿ ಕ್ರಮವಾಗಿ ಚೆನ್ನೈ, ಗುಜರಾತ್‌ ಮತ್ತು ಕೆಕೆಆರ್‌ಗೆ ಸೋಲುಣಿಸಿದೆ. ಗುಜರಾತ್‌ಗೆ ಮೊದಲ ಹಾಗೂ ಈವರೆಗಿನ ಏಕೈಕ ಸೋಲುಣಿಸಿದ್ದು ಹೈದರಾಬಾದ್‌ ಹೆಗ್ಗಳಿಕೆ. ಹಾಗೆಯೇ ಈ ಮೂರೂ ಗೆಲುವು ಚೇಸಿಂಗ್‌ ಮೂಲಕವೇ ಬಂದಿರುವುದೊಂದು ಹೆಚ್ಚುಗಾರಿಕೆ. ಇನ್ನೊಂದೆಡೆ ಮಾಯಾಂಕ್‌ ಅಗರ್ವಾಲ್‌ ನೇತೃತ್ವದ ಕೆಕೆಆರ್‌ ಕಳೆದ ಪಂದ್ಯದಲ್ಲಿ ಮುಂಬೈಗೆ 12 ರನ್‌ ಅಂತರದ ಸೋಲುಣಿಸಿದ ಆತ್ಮವಿಶ್ವಾಸದಲ್ಲಿದೆ.

ಚೆನ್ನೈ ಮತ್ತು ಗುಜರಾತ್‌ ವಿರುದ್ಧ ಗೆಲುವಿನ ಹೀರೋಗಳಾಗಿ ಮೂಡಿಬಂದಿದ್ದ ಕೇನ್‌ ವಿಲಿಯಮ್ಸನ್‌ ಮತ್ತು ಅಭಿಷೇಕ್‌ ಶರ್ಮ ಕೆಕೆಆರ್‌ ವಿರುದ್ಧ ಯಶಸ್ಸು ಕಾಣಲಿಲ್ಲ. ಆದರೆ ರಾಹುಲ್‌ ತ್ರಿಪಾಠಿ, ಐಡನ್‌ ಮಾರ್ಕ್‌
ರಮ್‌ ತಂಡದ ಕೈಬಿಡಲಿಲ್ಲ. ತ್ರಿಪಾಠಿ ತಮ್ಮ ಹಿಂದಿನ ತಂಡದ ವಿರುದ್ಧ ಸಿಡಿಲಬ್ಬರದ ಬ್ಯಾಟಿಂಗ್‌ ತೋರ್ಪಡಿಸಿ 37 ಎಸೆತಗಳಿಂದ 71 ರನ್‌ ಬಾರಿಸಿದ್ದು ವಿಶೇಷವಾಗಿತ್ತು. ಮಾರ್ಕ್‌ರಮ್‌ 36 ಎಸೆತಗಳಿಂದ ಅಜೇಯ 68 ರನ್‌ ಹೊಡೆದು ತಂಡವನ್ನು ದಡ ಮುಟ್ಟಿಸಿದ್ದರು.

Advertisement

ಹೈದರಾಬಾದ್‌ ಬೌಲಿಂಗ್‌ ವೇಗಿಗಳನ್ನೇ ಹೆಚ್ಚು ನೆಚ್ಚಿಕೊಂಡಿದೆ. ಅದರಲ್ಲೂ ಟಿ. ನಟರಾಜನ್‌, ಉಮ್ರಾನ್‌ ಮಲಿಕ್‌ ಹೆಚ್ಚು ಘಾತಕವಾಗಿ ಪರಿಣಮಿಸಿದ್ದಾರೆ. ಮಾರ್ಕೊ ಜಾನ್ಸೆನ್‌, ಭುವನೇಶ್ವರ್‌ ಕುಮಾರ್‌ ಕೂಡ ಉತ್ತಮ ಲಯದಲ್ಲಿದ್ದಾರೆ.

ವಿಶ್ವಾಸದಲ್ಲಿ ಪಂಜಾಬ್‌
ಪಂಜಾಬ್‌ ತನ್ನ ಹಿಂದಿನ ಪಂದ್ಯದಲ್ಲಿ ಮುಂಬೈ ಎದುರು 12 ರನ್ನುಗಳ, ಸಣ್ಣ ಅಂತರದ ಜಯ ಸಾಧಿಸಿದ ವಿಶ್ವಾಸದಲ್ಲಿದೆ. ಅಲ್ಲಿ ಬೇರ್‌ಸ್ಟೊ, ಲಿವಿಂಗ್‌ಸ್ಟೋನ್‌ ವಿಫ‌ಲರಾಗಿದ್ದರೂ ಪಂಜಾಬ್‌ಗ ಇದೊಂದು ಸಮಸ್ಯೆ ಆಗಲಾರದು. ಮುಖ್ಯವಾಗಿ ಶಾರೂಖ್‌ ಖಾನ್‌ ದೊಡ್ಡದೊಂದು ಇನ್ನಿಂಗ್ಸ್‌ ಪ್ರದರ್ಶಿಸಬೇಕಿದೆ. ಆರಂಭಿಕರಾದ ಅಗರ್ವಾಲ್‌-ಧವನ್‌ಮತ್ತೊಮ್ಮೆ ಭದ್ರ ಬುನಾದಿ ಹಾಕಿಕೊಟ್ಟರೆ ಭರ್ಜರಿ ಹೋರಾಟ ಕಂಡುಬರುವುದರಲ್ಲಿ ಅನುಮಾನವಿಲ್ಲ.

ಬೌಲಿಂಗ್‌ ವಿಭಾಗದಲ್ಲಿ ಕಾಗಿಸೊ ರಬಾಡ, ಒಡೀನ್‌ ಸ್ಮಿತ್‌ ಅವರನ್ನು ಹೆಚ್ಚು ನೆಚ್ಚಿಕೊಂಡಿದೆ. ವೈಭವ್‌ ಅರೋರಾ, ಆರ್ಷದೀಪ್‌ ಸಿಂಗ್‌, ರಾಹುಲ್‌ ಚಹರ್‌ ಉತ್ತಮ ನಿಯಂತ್ರಣ ಸಾಧಿಸಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next