ಮುಂಬೈ: ಮುಂದಿನ ಸೀಸನ್ ನ ಐಪಿಎಲ್ ತಯಾರಿಯಲ್ಲಿ ತೊಡಗಿರುವ ಫ್ರಾಂಚೈಸಿಗಳು ಈಗಾಗಲೇ ತಾವು ಬಿಡುಗಡೆ ಮಾಡಲಿರುವ ಆಟಗಾರರ ಪಟ್ಟಿ ಮಾಡುತ್ತಿದೆ. ಕೆಲ ಹಳೆಯ ಆಟಗಾರರನ್ನು ಕೈಬಿಟ್ಟು, ಹೊಸ ಆಟಗಾರರ ಖರೀದಿ ಮಾಡಲು ಐಪಿಎಲ್ ಫ್ರಾಂಚೈಸಿಗಳು ಮುಂದಾಗಿವೆ. ಈ ನಡುವೆ ಪಂಜಾಬ್ ಕಿಂಗ್ಸ್ ತಮ್ಮ ಮಾಜಿ ನಾಯಕ ಮಯಾಂಕ್ ಅಗರ್ವಾಲ್, ಬಿಗ್-ಹಿಟ್ಟರ್ ಶಾರುಖ್ ಖಾನ್ ಮತ್ತು ಆಲ್-ರೌಂಡರ್ ಓಡಿಯನ್ ಸ್ಮಿತ್ ಅವರನ್ನು ಇಂಡಿಯನ್ ಪ್ರೀಮಿಯರ್ ಲೀಗ್ 2023 ಮಿನಿ-ಹರಾಜಿಗೆ ಮುಂಚಿತವಾಗಿ ಬಿಡುಗಡೆ ಮಾಡಲು ನೋಡುತ್ತಿದೆ ಎಂದು ಕ್ರಿಕ್ ಬಜ್ ವರದಿ ಮಾಡಿದೆ.
ನವೆಂಬರ್ 2 ರಂದು ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯು ಶಿಖರ್ ಧವನ್ ಅವರನ್ನು ನೂತನ ನಾಯಕನಾಗಿ ನೇಮಿಸಿ ಘೋಷಣೆ ಮಾಡಿದೆ. ಐಪಿಎಲ್ 2022 ರ ಮೆಗಾ ಹರಾಜಿನಲ್ಲಿ ಫ್ರಾಂಚೈಸಿಯು ಧವನ್ ಅವರನ್ನು 8.25 ಕೋಟಿಗೆ ಖರೀದಿಸಿತ್ತು. ಹೀಗಾಗಿ ಕಳೆದ ಸೀಸನ್ ನ ನಾಯಕ ಮಯಾಂಕ್ ಅಗರ್ವಾಲ್ ಅವರನ್ನು ತಂಡದಿಂದ ಕೈಬಿಡುವ ಬಗ್ಗೆ ವರದಿಯಾಗುತ್ತಿವೆ.
ಇದನ್ನೂ ಓದಿ:100 ಕೇಸ್‌ಗಳಲ್ಲಿ ಭಾಗಿಯಾಗಿದ್ದ ಎಸ್ಕೇಪ್ ಕಾರ್ತಿಕ್ ಮತ್ತೆ ಅಂದರ್
ಹರಾಜಿನ ನಂತರ ಪ್ರಬಲ ತಂಡಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದ್ದರೂ ಸಹ ಮಯಾಂಕ್ ಅಗರ್ವಾಲ್ ಅವರ ನಾಯಕತ್ವದಲ್ಲಿ ಐಪಿಎಲ್ 2022 ರಲ್ಲಿ ಪಂಜಾಬ್ ಕಿಂಗ್ಸ್ ಉತ್ತಮ ಪ್ರದರ್ಶನ ತೋರಲಿಲ್ಲ. ಹತ್ತು ತಂಡಗಳ ಕೂಟದಲ್ಲಿ ಆರನೇ ಸ್ಥಾನ ಪಡೆದಿದ್ದರು.
ವರದಿಯ ಪ್ರಕಾರ, ಪಂಜಾಬ್ ಕಿಂಗ್ಸ್ ನ ಹೊಸದಾಗಿ ನೇಮಕಗೊಂಡ ಮುಖ್ಯ ತರಬೇತುದಾರ ಟ್ರೆವರ್ ಬೇಲಿಸ್ ಅವರು ಇಂಡಿಯನ್ ಪ್ರೀಮಿಯರ್ ಲೀಗ್ 2023 ಮಿನಿ ಹರಾಜಿನಲ್ಲಿ ಬೆನ್ ಸ್ಟೋಕ್ಸ್, ಕ್ಯಾಮರೂನ್ ಗ್ರೀನ್ ಮತ್ತು ಸ್ಯಾಮ್ ಕರ್ರನ್ ಗಳಲ್ಲಿ ಕನಿಷ್ಠ ಇಬ್ಬರ ಸೇವೆಗಳನ್ನು ಪಡೆದುಕೊಳ್ಳಲು ಉತ್ಸುಕರಾಗಿದ್ದಾರೆ. ಅದಕ್ಕಾಗಿಯೇ ಪಂಜಾಬ್ ಫ್ರಾಂಚೈಸಿಯು ಅಗರ್ವಾಲ್ (12 ಕೋಟಿ), ಶಾರುಖ್ (9 ಕೋಟಿ), ಮತ್ತು ಸ್ಮಿತ್ (6 ಕೋಟಿ) ರಂತಹ ದೊಡ್ಡ ಆಟಗಾರರನ್ನು ಬಿಡುಗಡೆ ಮಾಡಲು ನೋಡುತ್ತಿದೆ.