Advertisement

ತಪ್ಪೆಸಗಿದರೆ ಕಂಬಿ ಹಿಂದೆ ಹಾಕಲಾಗುವುದು: ಸ್ವಪಕ್ಷೀಯರಿಗೆ ಕೇಜ್ರಿವಾಲ್ ಎಚ್ಚರಿಕೆ !

05:55 PM Mar 13, 2022 | Team Udayavani |

ಅಮೃತಸರ : ಹಲವು ವರ್ಷಗಳ ನಂತರ ಪಂಜಾಬ್ ಪ್ರಾಮಾಣಿಕ ಮುಖ್ಯಮಂತ್ರಿಯನ್ನು ಪಡೆಯಲಿದ್ದಾರೆ ಮತ್ತು ತಮ್ಮ ಪಕ್ಷವು ರಾಜ್ಯಕ್ಕೆ ಪ್ರಾಮಾಣಿಕ ಸರ್ಕಾರವನ್ನು ನೀಡುತ್ತದೆ ಎಂದು ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಪ್ರತಿಪಾದಿಸಿದ್ದಾರೆ.

Advertisement

ನಿಯೋಜಿತ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಜತೆಯಲ್ಲಿ, ಕೇಜ್ರಿವಾಲ್ ಅವರು ಆಮ್ ಆದ್ಮಿ ಪಕ್ಷ ಭಾನುವಾರ ಆಯೋಜಿಸಿದ್ದ ಬೃಹತ್ ರೋಡ್ ಶೋನಲ್ಲಿ ಪಂಜಾಬ್ ನ ಮತದಾರರಿಗೆ ಧನ್ಯವಾದಗಳನ್ನು ಅರ್ಪಿಸಿದರು. ಮಾನ್ ಮಾತ್ರವಲ್ಲ, ರಾಜ್ಯದ ಪ್ರತಿಯೊಬ್ಬ ವ್ಯಕ್ತಿಯೂ ಇನ್ನು ಮುಖ್ಯಮಂತ್ರಿಯಾಗಲಿದ್ದಾರೆ ಎಂದರು.

ಪಂಜಾಬ್ ಚುನಾವಣೆಯಲ್ಲಿ ಎಎಪಿ ರಾಜ್ಯದ 117 ವಿಧಾನಸಭಾ ಸ್ಥಾನಗಳ ಪೈಕಿ 92 ಸ್ಥಾನಗಳನ್ನು ಗೆಲ್ಲುವ ಮೂಲಕ ಬೃಹತ್ ಗೆಲುವು ದಾಖಲಿಸಿದೆ. “ತುಸ್ಸಿ ಕಮಾಲ್ ಕರ್ ದಿತಾ… ಐ ಲವ್ ಯು ಪಂಜಾಬ್” ಎಂದು ಕೇಜ್ರಿವಾಲ್ ಮತದಾರರಿಗೆ ಧನ್ಯವಾದ ಹೇಳಿದರು.

ಹಲವು ವರ್ಷಗಳ ನಂತರ, ಪಂಜಾಬ್ ಪ್ರಾಮಾಣಿಕ ಮುಖ್ಯಮಂತ್ರಿಯನ್ನು ಪಡೆಯಲಿರುವುದು ನನಗೆ ಖುಷಿ ತಂದಿದೆ. ಮಾನ್ ಬಹಳ ಪ್ರಾಮಾಣಿಕರಾಗಿದ್ದಾರೆ. ಪ್ರಾಮಾಣಿಕ ಸರ್ಕಾರ ರಚನೆಯಾಗುತ್ತದೆ. ಸರ್ಕಾರದ ಬೊಕ್ಕಸದಿಂದ ಪ್ರತಿಯೊಂದು ಪೈಸೆಯನ್ನೂ ರಾಜ್ಯದ ಜನರಿಗಾಗಿ ವಿನಿಯೋಗಿಸಲಾಗುವುದು. ನಾವು ಜನರಿಗೆ ನೀಡಿದ ಎಲ್ಲಾ ಭರವಸೆಗಳನ್ನು ಈಡೇರಿಸುತ್ತೇವೆ” ಎಂದರು.

ಎಎಪಿಯ ಯಾವುದೇ ನಾಯಕರು ಅಥವಾ ಶಾಸಕರು ಏನಾದರೂ ತಪ್ಪೆಸಗಿರುವುದು ಕಂಡುಬಂದರೆ ಅವರನ್ನು ಕಂಬಿ ಹಿಂದೆ ಹಾಕಲಾಗುವುದು ಎಂದು ಕೇಜ್ರಿವಾಲ್ ಗುಡುಗಿದ್ದಾರೆ.

Advertisement

ಪ್ರಕಾಶ್ ಸಿಂಗ್ ಬಾದಲ್, ಸುಖಬೀರ್ ಸಿಂಗ್ ಬಾದಲ್, ನವಜೋತ್ ಸಿಂಗ್ ಸಿಧು, ಚರಂಜಿತ್ ಸಿಂಗ್ ಚನ್ನಿ ಮತ್ತು ಬಿಕ್ರಮ್ ಸಿಂಗ್ ಮಜಿಥಿಯಾ ಅವರಂತಹ ಅನುಭವಿ ನಾಯಕರಿಗೆ ಚುನಾವಣೆಯಲ್ಲಿ ಸೋಲಿನ ರುಚಿಯನ್ನು ಪಂಜಾಬ್‌ನ ಜನರು ತೋರಿಸಿದ್ದಾರೆ ಎಂದು ಅವರು ಗಮನ ಸೆಳೆದರು.

Advertisement

Udayavani is now on Telegram. Click here to join our channel and stay updated with the latest news.

Next